ಚನ್ನಗಿರಿ ಸರ್ಕಾರಿ ಶಾಲಾ ಮೈದಾನದಲ್ಲಿ ಯಾವುದೇ ಅನುಮತಿ ಪಡೆಯದೆ ಗುರುಭವನ ನಿರ್ಮಿಸುತ್ತಿರುವುದು. Guru Bhavan 
ದಾವಣಗೆರೆ

ಅಕ್ರಮವಾಗಿ ಗುರುಭವನ ನಿರ್ಮಾಣ? Guru Bhavan

ಪ್ರಮುಖ ಮುಖ್ಯಾಂಶಗಳು

  • ನಿಯಮ ಉಲ್ಲಂಘನೆ ಕುರಿತು ಸಾರ್ವಜನಿಕರ ಆಕ್ರೋಶ
  • ಶಾಲಾ ಪರಿಸರ ಹಾಳಾಗುವ ಆತಂಕ
  • ಅನುಮತಿ, ದಾಖಲೆಗಳಿಲ್ಲದೆ ಕಾಮಗಾರಿ ಆರಂಭ
ಚನ್ನಗಿರಿ: ಪಟ್ಟಣದ ಸರ್ಕಾರಿ ಶಾಲೆಯ ವಿಶಾಲವಾದ ಆಟದ ಮೈದಾನದಲ್ಲಿ ಸಂಬಂಧಿಸಿದ ಇಲಾಖೆಗಳ ಅನುಮತಿ, ದಾಖಲೆಗಳು ಇಲ್ಲದೆ ಅನಧಿಕೃತವಾಗಿ ಗುರುಭವನ ನಿರ್ಮಾಣ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪುರಸಭೆ ದಾಖಲೆಗಳ ಪ್ರಕಾರ, ನಗರ ಹೃದಯಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವು ಅಸೆಸ್ಮೆಂಟ್ ನಂ.767/686ರಲ್ಲಿ 90*400 ವಿಸ್ತೀರ್ಣ ಹೊಂದಿದೆ. ಈ ಸ್ಥಳದಲ್ಲೇ ಈಗಾಗಲೇ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಗ್ರಾಮೀಣ ಸಮನ್ವಯಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಅಂಗನವಾಡಿ ಕೇಂದ್ರ ಹಾಗೂ ಪುರಸಭೆಯ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಈ ಕಟ್ಟಡಗಳಿಂದ ಶಾಲೆಗೆ ಆಟದ ಮೈದಾನ ಬಹುತೇಕ ಇಲ್ಲದಾಗಿದೆ.
ಗುರುಭವನ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಸರಿಯಾದ ನಿವೇಶನ ಲಭ್ಯವಿಲ್ಲದ ಕಾರಣ ಯಾವುದೇ ಅನುಮತಿ ಮತ್ತು ದಾಖಲೆ ಪಡೆಯದೆ ಅಕ್ರಮವಾಗಿ ಶಾಲೆ ಮೈದಾನದಲ್ಲಿ ಸೆ.20ರಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಗುದ್ದಲಿಪೂಜೆ ಮಾಡಿಸಿ ಕೂಡಲೇ ಟೆಂಡರ್ ಕರೆದು ಗುತ್ತಿಗೆ ನೀಡಿ ಕಾಮಗಾರಿ ಪ್ರಾರಂಭಿಸಿರುವುದು ಪುರಸಭೆ ನಿಯಮಗಳಿಗೆ ವಿರುದ್ಧವಾಗಿದೆ.
ಈ ಭವನ 100 ಅಡಿ ಉದ್ದ ಮತ್ತು 60 ಅಡಿ ಅಗಲ ವಿಸ್ತೀರ್ಣ ಹೊಂದಿದ್ದು, ಇಂತಹ ದೊಡ್ಡ ಕಟ್ಟಡ ನಿರ್ಮಾಣದಿಂದ ಶಾಲೆಯ ಉಳಿದ ಮೈದಾನ ಸಂಪೂರ್ಣ ಹಾಳಾಗಲಿದೆ. ಸರ್ಕಾರಿ ಶಾಲೆಗಳ ದಾಖಲಾತಿ ಈಗಾಗಲೇ ಕುಸಿಯುತ್ತಿರುವ ಸಂದರ್ಭದಲ್ಲಿ ಗುರುಭವನ ನಿರ್ಮಾಣದ ಬದಲಿಗೆ ಕೆಪಿಎಸ್, ಪಿಎಂಎಸ್ ಶಾಲೆಗಳ ಸುಧಾರಣೆ, ಹೈಟೆಕ್ ಶೌಚಗೃಹ, ಆಟದ ಮೈದಾನ ಅಭಿವೃದ್ಧಿ ಮುಂತಾದ ಮೂಲಸೌಕರ್ಯ ಒದಗಿಸುವುದು ಉತ್ತಮ.
ಈ ಭವನ ನಿರ್ಮಾಣದಿಂದ ವಿದ್ಯಾರ್ಥಿಗಳ ಮೈದಾನ ಸಂಕುಚಿತಗೊಳ್ಳಲಿದೆ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಜತೆಗೆ ಶಾಲಾ ಆವರಣದ ಸೌಂದರ್ಯ ಮತ್ತು ಸುರಕ್ಷತೆಗೆ ಧಕ್ಕೆಯಾಗಲಿದೆ.
ನಿಯಮದ ಪ್ರಕಾರ, ಸರ್ಕಾರದ ಆಸ್ತಿಯಲ್ಲಿ ಹೊಸ ಕಟ್ಟಡ ನಿರ್ಮಿಸುವ ಮೊದಲು ನಿವೇಶನವನ್ನು ಭವನದ ಹೆಸರಿಗೆ ಖಾತೆ ಮಾಡಬೇಕು. ಪುರಸಭೆ ಪರವಾನಗಿ ಪಡೆಯಬೇಕು. ಹಳೆಯ ಕಟ್ಟಡ ತೆರವಿಗೆ ಅನುಮತಿ ಪಡೆದು ತೆರವುಗೊಳಿಸಬೇಕು. ಆದರೆ ಈ ಎಲ್ಲ ಹಂತಗಳನ್ನು ಬಿಟ್ಟು ನೇರವಾಗಿ ಕಾಮಗಾರಿ ಆರಂಭಿಸಿರುವುದು ಅಕ್ರಮ ಎಂದು ನಾಗರಿಕರು ದೂರುತ್ತಿದ್ದಾರೆ.

ವಿದ್ಯಾರ್ಥಿ ಗಳು ಮತ್ತು ಶಿಕ್ಷಕರಿಗೆ ಚಟುವಟಿಕೆ ನಡೆಸಲು ಸೂಕ್ತ ಸ್ಥಳದ ಕೊರತೆ ಇದೆ. ಶಿಕ್ಷಣ ಇಲಾಖೆ ಅನುದಾನ ನೀಡಿರುವ ಕಾರಣ ಕಟ್ಟಡ ನಿರ್ಮಾಣ ಅಗತ್ಯವಾಗಿದೆ. ಪುರಸಭೆಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

ಶಾಲಾ ಆವರಣದಲ್ಲಿ ಯಾವುದೇ ಕಟ್ಟಡ ನಿರ್ಮಿಸುವ ಮೊದಲು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಶಿಕ್ಷಣ ಇಲಾಖೆ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವುದು ಕಾನೂನುಬಾಹಿರ. ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಬೇಕು. ಹೊಸ ನಿವೇಶನದಲ್ಲಿ ಭವನ ನಿರ್ಮಿಸಬೇಕು.

ಗುರುಭವನ ಅಕ್ರಮವಾಗಿ ನಿರ್ಮಾಣ ವಾಗುತ್ತಿದೆ ಎಂದು ಸಾರ್ವಜನಿಕರಿಂದ ಅಹವಾಲು ಬಂದಿದೆ. ಈಗಾಗಲೇ ಎರಡು ನೋಟಿಸ್‌ಗಳನ್ನು ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಿಯಮಗಳನ್ನು ಪಾಲಿಸಲೇಬೇಕು.