Cylinder: ನುಗ್ಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ಯಾಸ್ ಸಿಲಿಂಡರ್ ಸಿಡಿದು ಸಂಪೂರ್ಣ ಮನೆ ಸುಟ್ಟು ಹೋಗಿರುವುದು.
- ನುಗ್ಗಿಹಳ್ಳಿ ಗ್ರಾಮದಲ್ಲಿ ಘಟನೆ
- ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು
- ಗ್ರಾಮಸ್ಥರಿಂದ ಬೆಂಕಿ ನಂದಿಸುವ ಯತ್ನ
ಚನ್ನಗಿರಿ: ತಾಲೂಕಿನ ನುಗ್ಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಡುಗೆ ಅನಿಲ(ಗ್ಯಾಸ್) Cylinder ಸೋರಿಕೆಯಾಗಿ ಮನೆ ಹಾಗೂ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾದ ರತ್ನಮ್ಮ ಅವರ ಮನೆ ಸುಟ್ಟಿದೆ. ಮನೆಗೆ ಬೀಗ ಹಾಕಿ ತಮ್ಮ ಮೂವರು ಹೆಣ್ಣು ಮಕ್ಕಳೊಂದಿಗೆ ತಾಲೂಕಿನ ಸಂತೇಬೆನ್ನೂರು ಗ್ರಾಮದ ಸಂಬಂಧಿಕರ ಮದುವೆಗೆ ಹೋಗಿದ್ದರು. ಆಗ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ, ಮನೆಯಲ್ಲಿದ್ದ ಸಂಪೂರ್ಣ ವಸ್ತುಗಳು ಸುಟ್ಟಿವೆ.
ತಕ್ಷಣವೇ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಫಲ ನೀಡಲಿಲ್ಲ.
ಅಗ್ನಿ ದುರಂತದಲ್ಲಿ ನಗದು, ಬಂಗಾರ, ಬೆಳ್ಳಿ ಆಭರಣಗಳು, ರೇಷ್ಮೆ ಸೀರೆಗಳು, 8 ಚೀಲ ರಾಗಿ, 4 ಚೀಲ ಅಕ್ಕಿ, ಟಿವಿ, ಗಾಡ್ರೇಜ್ ಬೀರು, ಮರದ ಮಂಚ, ಟೈಲರಿಂಗ್ ಮಿಷನ್ ಹಾಗೂ ಎಲ್‌ಐಸಿ ಬಾಂಡ್‌ಗಳು ಸೇರಿ ಮನೆಯಲ್ಲಿದ್ದ ಎಲ್ಲ ದಾಖಲೆ ಪತ್ರಗಳು ಸುಟ್ಟು ಹೋಗಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಬಂದ ರತ್ನಮ್ಮ, ಚನ್ನಗಿರಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.