ಜಗಳೂರು: ಪಟ್ಟಣದ ಮೇಕಾ ಸೂರ್ಯನಾರಾಯಣ ಬಡಾವಣೆಯಲ್ಲಿ ಬೀಗ ಹಾಕಿದ್ದ ಮನೆಯೊಂದರ ಬೀಗ ಮುರಿದು ಅಂದಾಜು 1,45,000 ರೂ. ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ಜು.13ರ ಬೆಳಗಿನ ಜಾವ ನಡೆದಿದೆ. theft
ಬಡಾವಣೆಯ ನಿವಾಸಿ ಶಾರದಮ್ಮ (65) ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ದೂರುದಾರರಾದ ಶಾರದಮ್ಮ ಅವರು ಜು.12ರಂದು ಬೆಳಗ್ಗೆ ತಮ್ಮ ಪತಿಯ ಹುಟ್ಟೂರಾದ ತಾಲೂಕಿನ ವೆಂಕಟೇಶಪುರ ತಾಂಡಾಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಕೆಲಸವಿದ್ದ ಕಾರಣ ಅಂದು ರಾತ್ರಿ ತಾಂಡಾದಲ್ಲೇ ಉಳಿದುಕೊಂಡಿದ್ದರು. ಜು.13ರ ಬೆಳಗಿನ ಜಾವ ಸುಮಾರು 2:30ರ ಸಮಯದಲ್ಲಿ ಪಕ್ಕದ ಮನೆಯ ನಿವಾಸಿ ಮೇಸ್ತ್ರಿ ಸಿದ್ದಣ್ಣ ಎಂಬುವರು ಶಾರದಮ್ಮ ಅವರಿಗೆ ಕರೆ ಮಾಡಿ, ನಿಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಾರದಮ್ಮ ಅವರು ತಮ್ಮ ನಾದಿನಿ ಮಗ ಸಿದ್ದಣ್ಣನವರೊಂದಿಗೆ ತಕ್ಷಣವೇ ಜಗಳೂರಿನ ಮನೆಗೆ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳರು ಮುಂಭಾಗದ ಇಂಟರ್ ಲಾಕ್ ಬೀಗ ಮುರಿದು ಒಳಪ್ರವೇಶಿಸಿರುವುದು ಪತ್ತೆಯಾಗಿದೆ.
ಮನೆಯೊಳಗಿದ್ದ 300 ಗ್ರಾಂ ತೂಕದ ಒಂದು ಬೆಳ್ಳಿ ಕಳಸದ ತಟ್ಟೆ, 300 ಗ್ರಾಂ ತೂಕದ ಒಂದು ಜತೆ ದೊಡ್ಡ ಬೆಳ್ಳಿ ದೀಪ, 100 ಗ್ರಾಂ ತೂಕದ ಒಂದು ಜತೆ ಸಣ್ಣ ಬೆಳ್ಳಿ ದೀಪ, 100 ಗ್ರಾಂ ತೂಕದ 4 ಬೆಳ್ಳಿಯ ಕುಂಕುಮದ ಬಟ್ಟಲುಗಳು ಸೇರಿ ಒಟ್ಟು 950 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.