ಹೊನ್ನಾಳಿ ಪಟ್ಟಣದಲ್ಲಿ ಆ.4ರಿಂದ 6ರ ವರೆಗೆ ನಡೆಯಲಿರುವ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಚಪ್ಪರ ಪೂಜೆಯಲ್ಲಿ ಧರ್ಮಪ್ಪ ಎಚ್.ಎ., ಎಚ್.ಬಿ. ಮಂಜಪ್ಪ, ಮಾಲತೇಶಾಚಾರ್ ಇತರರಿದ್ದರು.marikamba fair festival 
ದಾವಣಗೆರೆ

ಆ.4ರಿಂದ ಹೊನ್ನಾಳಿ ಮಾರಿಕಾಂಬ ಜಾತ್ರಾ ಮಹೋತ್ಸವ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಧರ್ಮಪ್ಪ ಎಚ್.ಎ. ಮಾಹಿತಿ
  • ದೇವಿ ದೇವಸ್ಥಾನದ ಆವರಣದಲ್ಲಿ ಚಪ್ಪರ ಪೂಜೆ
ಹೊನ್ನಾಳಿ: ಪಟ್ಟಣದ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಮುಂಬರುವ ಆ.4 ರಿಂದ 6 ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಹಾಗೂ ಸಾಂಪ್ರದಾಯಿಕವಾಗಿ ಜರುಗಲಿದೆ ಎಂದು ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಧರ್ಮಪ್ಪ ಎಚ್.ಎ. ತಿಳಿಸಿದರು.
ಮಂಗಳವಾರ ಪಟ್ಟಣದ ಶ್ರೀ ಮಾರಿಕಾಂಬ ದೇವಾಲಯದ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಚಪ್ಪರ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಷಾಢ ಮಾಸದಲ್ಲಿ ನಡೆಯುವ ತಾಯಿಯ ಈ ಭವ್ಯ ಜಾತ್ರೆಯನ್ನು ಯಶಸ್ವಿಗೊಳಿಸಲು ಹಿರಿಯರು ಮತ್ತು ಯುವಕರನ್ನೊಳಗೊಂಡ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಮಹೋತ್ಸವವು ಕೇವಲ ಸಮಿತಿಯ ಕೆಲಸವಲ್ಲ, ಇಡೀ ಪಟ್ಟಣದ ನಾಗರಿಕರು, ಭಕ್ತಾದಿಗಳು ಪಾಲ್ಗೊಂಡಾಗ ಮಾತ್ರ ರಾಜ್ಯದಲ್ಲೇ ಅತ್ಯಂತ ಯಶಸ್ವಿ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಾಧ್ಯ. ನಾವೆಲ್ಲರೂ ಒಟ್ಟಾಗಿ ಸೇರಿ ಹಬ್ಬವನ್ನು ಶಾಂತಿಯುತವಾಗಿ ಸಂಭ್ರಮಿಸೋಣ ಎಂದರು.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಆ.3ರ ಜಾತ್ರೆಯ ಮುನ್ನಾದಿನವಾದ ಸೋಮವಾರ ಸಂಜೆ 7 ಗಂಟೆಗೆ ಸಾರ್ವಜನಿಕರ ಮನರಂಜನೆಗಾಗಿ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಆ.4ರಂದು ದೇವಿಯ ಭವ್ಯ ಮೆರವಣಿಗೆಯು ಪಟ್ಟಣದ ಕುಂಬಾರ ಬೀದಿಯ ಶ್ರೀ ದುರ್ಗಾಂಬಿಕ ದೇವಾಲಯದಿಂದ ಡೊಳ್ಳು ಕುಣಿತ, ಭಜನೆ ಹಾಗೂ ವಿವಿಧ ಮೇಳಗಳೊಂದಿಗೆ ಆರಂಭವಾಗಿ ರಾಜಬೀದಿಗಳ ಮೂಲಕ ಸಾಗಿ, ಶ್ರೀ ಹಳದಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀದೇವಿ ಗದ್ದಿಗೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಮಹಾಮಂಗಳಾರತಿಯ ನಂತರ ಹರಕೆಯ ಹುಲುಸಿನ ಜೋಳ ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದರು.
ಆ.5ರಂದು ಸಂಜೆ 5 ಗಂಟೆಗೆ ಗಾವು ಮರಿ ತರುವುದು, ಹುಲುಸಿನ ಜೋಳ ಒಡೆಯುವುದು ಹಾಗೂ ಅಸಾದಿ ಹೊಗಳಿಕೆ ಕಾರ್ಯ ನೆರವೇರಲಿವೆ. ಮಹೋತ್ಸವದ ಕಡೆಯ ದಿನವಾದ ಆ.6ರಂದು ಮಧ್ಯಾಹ್ನ ಮಾರಿಕಾಂಬ ದೇವಿಯನ್ನು ಅಲಂಕೃತ ರಥದಲ್ಲಿ ಕೂರಿಸಿ, ಮಹಾಮಂಗಳಾರತಿ ನೆರವೇರಿಸಲಾಗುವುದು. ತರುವಾಯ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಡೊಳ್ಳು, ಭಜನೆ, ಕೋಲಾಟ, ಕೀಲುಕುದುರೆ, ಜಾನಪದ ನೃತ್ಯ ಹಾಗೂ ಸಂಗೀತ ಕಲಾತಂಡಗಳ ಸಮ್ಮುಖದಲ್ಲಿ ತಾಯಿಯ ಭವ್ಯ ಮೆರವಣಿಗೆ ಜರುಗಲಿದೆ ಎಂದು ಹೇಳಿದರು.
ಪೂಜೆಯಲ್ಲಿ ಎಚ್.ಎ. ರಾಜಪ್ಪ, ಮಾದಪ್ಪ, ಮಾಲಿಗೌಡ್ರು, ಬುದ್ಧಿವಂತರ ರಮೇಶ್, ನರಸಿಂಹಪ್ಪ ಬುದ್ಧಿವಂತರ, ಗೌಡ್ರ ಗಾಳೇಶ್, ಶಿವಶಂಕರ್, ಉಮಾಪತಿ, ನರಸಪ್ಪ, ಚಾಟಿ ಪುಟ್ಟಪ್ಪ, ಮುಖಂಡರಾದ ವಿಜೇಂದ್ರಪ್ಪ, ಪುಟ್ಟಪ್ಪ, ಗುಂಡ, ರೇವಣಸಿದ್ದಪ್ಪ ಮೂಲಿ, ಸತೀಶ್, ರವಿ, ಎಚ್.ಎಂ. ಅರುಣ್‌ಕುಮಾರ್, ವಿಜಯಗೌಡ, ರಾಜೇಂದ್ರ, ಪ್ರಧಾನ ಅರ್ಚಕ ಮಾಲತೇಶಾಚಾರ್ ಇದ್ದರು.