ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಪೂರ್ವಭಾವಿ ಸಭೆ ಹಾಗೂ ಜನಜಾಗೃತಿ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಎಸ್.ಎಸ್. ಬೀರಪ್ಪ, ಅರಕೆರೆ ನಾಗರಾಜ್, ಸುರೇಂದ್ರನಾಯ್ಕ, ಸಿದ್ದಪ್ಪ ಇತರರು ಇದ್ದರು.drought
- ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹ
- ಪ್ರತಿಭಟನೆಯ ಪೂರ್ವಭಾವಿ ಸಭೆ
ಹೊನ್ನಾಳಿ: ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಹಾಳಾಗಿವೆ. ಸರ್ಕಾರ ತಕ್ಷಣವೇ ರೈತರ ಸಮಸ್ಯೆಗೆ ಸ್ಪಂದಿಸಿ, ಅವಳಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯ ಪೂರ್ವಭಾವಿ ಸಭೆ ಹಾಗೂ ಎಸ್‌ಐಆರ್ ಕುರಿತ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮಳೆಯಿಲ್ಲದೆ ರೈತರ ಬದುಕು ದುಸ್ತರವಾಗಿದೆ. ಪ್ರತಿ ವರ್ಷ ಸಾಲ ಮಾಡಿ ಬಿತ್ತನೆ ಮಾಡುವ ರೈತರು, ಮಳೆ ಕೈಕೊಟ್ಟಾಗ ಸಾಲಗಾರರಾಗುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ, ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳು ಕಳೆದರೂ ರೈತರು ಹಾಗೂ ಜನಸಾಮಾನ್ಯರ ಹಿತ ಕಾಯುವ ಯಾವುದೇ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಸಕಾಲಕ್ಕೆ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಹರಿಹಾಯ್ದರು.
ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿದ್ದ ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲ ವೇತನವನ್ನು ಸರ್ಕಾರ ನಿಲ್ಲಿಸಿದೆ. ಪಿಂಚಣಿ ಹಣವನ್ನೇ ನಂಬಿ ಬದುಕುತ್ತಿದ್ದ ವೃದ್ಧರು, ಅಂಗವಿಕಲರು ಔಷಧ ಖರೀದಿಗೂ ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಅವೈಜ್ಞಾನಿಕ ಸಮರ್ಥನೆ ನೀಡುವುದನ್ನು ಬಿಟ್ಟು, ತಕ್ಷಣವೇ ಎಲ್ಲರಿಗೂ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಸ್.ಎಸ್. ಬೀರಪ್ಪ, ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಸಿದ್ದಪ್ಪ ಇತರರು ಇದ್ದರು.
ಬುಧವಾರ ಕಚೇರಿಗೆ ಮುತ್ತಿಗೆ
ಹೊನ್ನಾಳಿ- ನ್ಯಾಮತಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು, ಗೃಹಲಕ್ಷ್ಮೀಯ ಬಾಕಿ ಕಂತು ಹಾಗೂ ಸ್ಥಗಿತಗೊಂಡಿರುವ ಸಾಮಾಜಿಕ ಪಿಂಚಣಿಗಳ ಬಿಡುಗಡೆ, ಹಾಲಿನ ಪ್ರೋತ್ಸಾಹ ಧನ ವಿತರಣೆ ಹಾಗೂ ಅರ್ಹರಿಗೆ ಆಶ್ರಯ ಮನೆ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ನೀಡುವಂತೆ ಒತ್ತಾಯಿಸಿ ಜು.22ರಂದು ಹೊನ್ನಾಳಿ ಟಿ.ಬಿ. ವೃತ್ತದಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ಹೋರಾಟಕ್ಕೆ ರೈತರು ಮತ್ತು ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.