ಚನ್ನಗಿರಿ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಬಸವರಾಜ್ ಶಿವಗಂಗಾ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು. ಪಿ.ಆರ್. ಮಂಜುನಾಥ್, ಮಹ್ಮದ್ ಗೌಸ್‌ಪೀರ್, ಕೋರಿ ಜ್ಯೋತಿ, ಮಂಜುನಾಥ್, ಎಲ್. ಜಯಪ್ಪ, ಪೂಜಾರ್ ಇತರರಿದ್ದರು.Service 
ದಾವಣಗೆರೆ

ಅಧಿಕಾರವಿರುವಷ್ಟು ದಿನ ಜನರ ಪ್ರಾಮಾಣಿಕ ಸೇವೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ್ ಶಿವಗಂಗಾ ಭರವಸೆ
  • ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ
ಚನ್ನಗಿರಿ: ಮತದಾರರು ನನ್ನನ್ನು ತಮ್ಮ ಸೇವೆಗಾಗಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅಧಿಕಾರವಿರುವಷ್ಟು ದಿನ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿರುವ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಶಾಸಕನಾದ ಮೊದಲ ದಿನದಿಂದ ಶಿಕ್ಷಣ, ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳನ್ನು ಮೂರು ಮಂತ್ರಗಳಾಗಿಸಿಕೊಂಡು ಸಾಗುತ್ತಿದ್ದೇನೆ. ಇದರಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಸಭೆಗಳನ್ನು ನಡೆಸಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗಾಗಿ ಅನುದಾನವನ್ನು ಮಂಜೂರು ಮಾಡಿದೆ. ಶಿಕ್ಷಣ ಇಲಾಖೆಯಿಂದ 45 ಶಾಲಾ ಕೊಠಡಿಗಳು ಹಾಗೂ 17 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಾಸಕರ ಅನುದಾನದಲ್ಲಿ 120 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇನ್ನುಳಿದ ಬಾಕಿ ಕೊಠಡಿಗಳ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಸರ್ಕಾರಿ ಶಿಕ್ಷಕರು ಕಠಿಣ ಪರೀಕ್ಷೆಗಳನ್ನು ಎದುರಿಸಿ ಬಂದಿರುತ್ತಾರೆ, ಅವರಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿರುತ್ತದೆ. ಶಾಲೆಗಳ ಮೂಲಸೌಕರ್ಯ ಹಾಗೂ ಅಭಿವೃದ್ಧಿಗಾಗಿ ಸರ್ಕಾರ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದರು.
ವಿವಿಧ ಕಾಮಗಾರಿಗಳು: ಚನ್ನಗಿರಿ ಸರ್ಕಾರಿ ಹಿರಿಯ ಬಾಲಕಿಯರ ಶಾಲೆಯ ಹೆಚ್ಚುವರಿ ಕೊಠಡಿಗೆ 26 ಲಕ್ಷ ರೂ., ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ 29 ಲಕ್ಷ ರೂ., ಲಷ್ಕರ್ ಮೊಹಲ್ಲಾ ಸರ್ಕಾರಿ ಉರ್ದು ಶಾಲೆ ಶೌಚಗೃಹ ನಿರ್ಮಾಣಕ್ಕೆ 6 ಲಕ್ಷ ರೂ., ಕೌಸರ್ ಮಸೀದಿ ಸರ್ಕಾರಿ ಉರ್ದು ಶಾಲೆಗೆ 17.70 ಲಕ್ಷ ರೂ. ಹಾಗೂ ನಗರ ಯೋಜನೆ ಅಡಿಯಲ್ಲಿ 2 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕರು ವಿವರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಪಿ.ಆರ್. ಮಂಜುನಾಥ್, ಮಾಜಿ ಸದಸ್ಯ ಮಹ್ಮದ್ ಗೌಸ್‌ಪೀರ್, ನಗರ ಘಟಕದ ಮಹಿಳಾ ಅಧ್ಯಕ್ಷೆ ಕೋರಿ ಜ್ಯೋತಿ, ಮುಖ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಜಿಲ್ಲಾ ಪಂಚಾಯಿತಿ ಎಇಇ ಪೂಜಾರ್ ಇತರರಿದ್ದರು.