1. ಇತಿಹಾಸ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನ. 2. ಹರಿಹರೇಶ್ವರ ಸ್ವಾಮಿ.Harihareshwar 
ದಾವಣಗೆರೆ

ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ 1ಕ್ಕೆ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • 7 ಅಡಿಯ ಏಕಶಿಲೆ ವಿಗ್ರಹ
  • ಗುಹಾಸುರನ ಸಂಹಾರಕ್ಕೆ ಅವತಾರ
  • 60 ಕಲಾತ್ಮಕ ಕಂಬಗಳಿಂದ ಮುಖಮಂಟಪ ರಚನೆ
ಹರಿಹರ: ಶತಮಾನಗಳ ಇತಿಹಾಸ ಹೊಂದಿರುವ, ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಭವ್ಯ ತಾಣ ದಕ್ಷಿಣ ಕಾಶಿ ಖ್ಯಾತಿಯ ಹರಿಹರದ ಶ್ರೀ ಹರಿಹರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಫೆ.1ರಂದು ಅದ್ದೂರಿಯಾಗಿ ಜರುಗಲಿದೆ.
ಐತಿಹ್ಯ
ಹರಿ (ವಿಷ್ಣು) ಮತ್ತು ಹರ (ಶಿವ) ಇಬ್ಬರೂ ಒಂದೇ ಮೂರ್ತಿಯಲ್ಲಿ ಸಮ್ಮಿಲನಗೊಂಡಿರುವ ಈ ಕ್ಷೇತ್ರಕ್ಕೆ ಹರಿಹರ ಎಂಬ ಹೆಸರು ಬಂದಿದೆ. ಪುರಾಣದ ಪ್ರಕಾರ ಗುಹಾಸುರನೆಂಬ ರಾಕ್ಷಸನ ಸಂಹಾರಕ್ಕಾಗಿ ಹರಿ-ಹರರು ಜತೆಗೂಡಿ ಈ ಅವತಾರ ತಾಳಿದ್ದಾರೆ ಎಂಬ ಪ್ರತೀತಿ ಇದೆ. ಕ್ರಿ.ಶ 1224ರಲ್ಲಿ ಹೊಯ್ಸಳ ದೊರೆ 2ನೇ ವೀರ ನರಸಿಂಹನ ದಂಡನಾಯಕ ಪೊಳಾಲ್ವನು ಈ ದೇವಸ್ಥಾನವನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು 7 ಅಡಿಯ ಏಕಶಿಲೆಯದಾಗಿರುವುದು ವಿಶೇಷ.
ಈ ಸುಂದರ ಹರಿಹರೇಶ್ವರ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖ ಮಂಟಪಗಳಿಂದ ನಿರ್ಮಿತವಾಗಿದೆ. ಮುಖಮಂಟಪ 60 ಕಲಾತ್ಮಕ ಕಂಬಗಳಿಂದ ರಚನೆಯಾಗಿದೆ. ಇವು ಹೊಯ್ಸಳರ ಕಾಲದ ಶೈಲಿಯ ಪ್ರತಿಬಿಂಬ ಹೊಂದಿದ್ದು, ಕಂಬಗಳು ನೇರವಾಗಿಯೂ ಮತ್ತು ತಲೆಕೆಳಗಾಗಿಯೂ ಕಾಣಿಸುತ್ತವೆ. ಜತೆಗೆ ಮುಂಭಾಗದಲ್ಲಿ ಅತ್ಯದ್ಭುತವಾದ ಎರಡೂ ಪಾರ್ಶ್ವಗಳಲ್ಲಿ ಅತ್ಯಾಕರ್ಷಕವಾದ ದೀಪ ಸ್ತಂಭಗಳನ್ನು ನಿರ್ಮಿಸಲಾಗಿದೆ.
ಮೈಲಾರ ಜಾತ್ರೆಗೆ ಹೋಗುವ ಭಕ್ತರು ಹರಿಹರೇಶ್ವರನ ದರ್ಶನ ಪಡೆಯುವುದು ಅನಾದಿ ಕಾಲದಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ. ರಥೋತ್ಸವದ ನಿಮಿತ್ತ ತುಂಗಭದ್ರಾ ತೀರದ ಈ ಪುಣ್ಯಕ್ಷೇತ್ರದಲ್ಲಿ ಭಕ್ತ ಸಾಗರವೇ ಹರಿದುಬರುವ ನಿರೀಕ್ಷೆಯಿದೆ.
ರಥೋತ್ಸವದ ಅಂಗವಾಗಿ ಜ. 28ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಪ್ರತಿದಿನ ಬೆಳಗ್ಗೆ ಗಣಪತಿ ಪೂಜೆ, ರುದ್ರಾಭಿಷೇಕ, ನವಗ್ರಹ ಪೂಜೆ, ಹೋಮ-ಹವನಗಳು ನಡೆಯಲಿವೆ.
ಫೆ.1ರಂದು ಬೆಳಗ್ಗೆ 10.55ಕ್ಕೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ರಥೋತ್ಸವ ಜರುಗಲಿದೆ. ಅಂದು ಮುಂಜಾನೆ ಸ್ವಾಮಿಗೆ ಶ್ರೀ ಗಣಪತಿ ಪೂಜೆ, ರುದ್ರಾಭಿಷೇಕ, ಆವಾಹಿತ ದೇವತಾ ಪೂಜಾ, ಜಪ, ಪ್ರಧಾನ ದೇವತಾ ಹಾಗೂ ರಥಾಂಗ ಹೋಮ ಹವನಾದಿಗಳು, ಬಲಿದಾನ, ಮಹಾಪೂರ್ಣಾಹುತಿ, ಮಹಾಪೂಜೆ, ಮಂತ್ರಪುಷ್ಪ, ಅಷ್ಠಾವಧಾನ, ಶೇಯಃ ಪ್ರಾರ್ಥನೆ ನೆರೆವೇರುವುದು.
ಫೆ.2 ರಂದು ಬೆಳಗ್ಗೆ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ಸ್ಥಾಪಿತ ದೇವತಾ ಪೂಜೆ, ನಾಂದಿ ಕಂಕಣ ವಿಸರ್ಜನೆ ಪೂಜೆ, ಧ್ವಜ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಸಂಜೆ 6ಕ್ಕೆ ದೇವಸ್ಥಾನದ ಹಿಂಭಾಗದ ವೇದಿಕೆಯಲ್ಲಿ ಜಗದೀಶ್ ಎಂ.ಜಿ. ಮತ್ತು ಸಮರ್ಥ ಎಚ್.ಎನ್. ಅವರಿಂದ ಸುಗಮ ಸಂಗೀತ ಹಾಗೂ ವೀರಪ್ಪ ಅಂದಲಗಿ ಅವರಿಂದ ಏಕಪಾತ್ರಾಭಿನಯ ನಡೆಯಲಿದೆ.