ಜಗಳೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಫೈನಾನ್ಸ್ ಕಂಪನಿಗಳ ಸಭೆ ನಡೆಯಿತು. ತಹಸೀಲ್ದಾರ್ ಗುರುಬಸವರಾಜ್, ಪಿಎಸ್‌ಐ ಧರೇಪ್ಪ ಬಿ. ದೊಡ್ಡಮನಿ, ಪಪಂ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕಾ, ಕೃಷಿ ಇಲಾಖೆ ಎಡಿಎ ಎಚ್. ಶ್ವೇತಾ ಇದ್ದರು.harassment 
ದಾವಣಗೆರೆ

ದಿನೇದಿನೆ ಹೆಚ್ಚುತ್ತಿದೆ ಪೈನಾನ್ಸ್ ಕಂಪನಿಗಳ ಕಿರುಕುಳ

ಪ್ರಮುಖ ಮುಖ್ಯಾಂಶಗಳು

  • ಸಭೆಯಲ್ಲಿ ರೈತ -ದಲಿತ ಸಂಘಟನೆಗಳ ಆಕ್ರೋಶ
  • ನಿಯಮಗಳನ್ನು ಉಲ್ಲಂಘಿಸಿ ಮನೆ ಜಪ್ತು
ಜಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳ ದಬ್ಬಾಳಿಕೆ ಮತ್ತು ಬಲವಂತದ ಸಾಲ ವಸೂಲಾತಿಯಿಂದ ಜನರಿಗೆ ಕಿರುಕುಳ ಹೆಚ್ಚಾಗುತ್ತಿವೆ ಎಂದು ರೈತ ಸಂಘಟನೆ, ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಗೆ ಫೈನಾನ್ಸ್ ಕಂಪನಿಗಳ ಅಧಿಕಾರಿಗಳು ಗೈರಾದ ಹಿನ್ನೆಲೆ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಗುರುಬಸವರಾಜ್ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಹಣಕಾಸು ಕಂಪನಿಗಳ ಕಿರುಕುಳ ಮತ್ತು ರೌಡಿಸಂ ಮಿತಿಮೀರಿದೆ. ನಿಯಮಗಳನ್ನು ಉಲ್ಲಂಘಿಸಿ ಮನೆ ಜಪ್ತು ಮಾಡುವುದು, ದಬ್ಬಾಳಿಕೆ ನಡೆಸುವುದು, ಸಾರ್ವಜನಿಕರಿಗೆ ಮಾನಸಿಕ ಹಿಂಸೆ ನೀಡುವುದನ್ನು ಕಂಡಿದ್ದೇವೆ. ಇಂತಹ ದೌರ್ಜನ್ಯಗಳನ್ನು ರೈತ ಸಂಘ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕಾಧ್ಯಕ್ಷ ಚಿರಂಜೀವಿ ಮಾತನಾಡಿ, ಹಣದಾಸೆ ತೋರಿಸಿ ಸಾಲ ಕೊಡುವ ಕಂಪನಿಗಳು ನಂತರ ಕಂತುಗಳ ರೂಪದಲ್ಲಿ ಹತ್ತಾರು ವರ್ಷ ಹಣಪಾವತಿ ಮಾಡಿಕೊಂಡರೂ ಸಾಲ ತೀರಿಲ್ಲವೆಂದು ನೋಟಿಸ್ ಕೊಟ್ಟು ಜೀವ ತೆಗೆಯುತ್ತಿದ್ದಾರೆ. ಇದರಿಂದ ಅನೇಕರು ಊರು, ಮನೆ ತೊರೆದಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗೌರಿಪುರ ನಾಗರಾಜ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಫೈನಾನ್ಸ್ ಸಾಲ ಪಡೆದವರು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಗ್ರಾಮಸ್ಥರು ಉಳಿಸಿದ್ದಾರೆ. ಸತತ ಮಳೆ ವೈಫಲ್ಯದಿಂದ ಬೆಳೆಗಳು ಒಣಗಿ ಹೋಗಿದ್ದು, ಕೈಯಲ್ಲಿ ಕಾಸಿಲ್ಲದೆ ಬದುಕು ಅಧೋಗತಿಗೆ ಇಳಿದಿದೆ ಎಂದು ಕಿಡಿಕಾರಿದರು.
ರೈತಮುಖಂಡ ಕುಮಾರ್ ಮಾತನಾಡಿ, ಸಾಲ ನೀಡುವಾಗ ಮೃದು ಮಾತುಗಳನ್ನಾಡುವ ಕಂಪನಿಗಳು ಒಪ್ಪಂದದ ಸಂದರ್ಭದಲ್ಲಿ ಕಣ್ಣಿಗೆ ಕಾಣದಂತೆ ಹತ್ತು ಹಲವು ಕಠಿಣ ಷರತ್ತುಗಳನ್ನು ಹೇರುತ್ತವೆ ಎಂದರು.
ಪಿಎಸ್‌ಐ ಧರೇಪ್ಪ ಬಿ. ದೊಡ್ಡಮನಿ, ಪಪಂ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕಾ, ಕೃಷಿ ಇಲಾಖೆ ಎಡಿಎ ಶ್ವೇತಾ ಎಚ್, ಎಸ್‌ಎಡಿಎಚ್ ವೆಂಕಟೇಶ್, ದಸಂಸ ಸಂಚಾಲಕ ಕುಬೇಂದ್ರಪ್ಪ ಮತ್ತಿತರರಿದ್ದರು.

ಕಾನೂನು ಬಾಹಿರವಾದರೆ ಕ್ರಮ

ಫೈನಾನ್ಸ್ ಕಂಪನಿಗಳ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದ್ದರಿಂದ ಸಭೆ ಕರೆಯಲಾಗಿತ್ತು. ಕೆಲವರಷ್ಟೇ ಬಂದಿರುವುದರಿಂದ ಇನ್ನೊಮ್ಮೆ ಸಭೆ ಕರೆದು ಕಡ್ಡಾಯವಾಗಿ ಎಲ್ಲರೂ ಭಾಗವಹಿಸುವಂತೆ ನೋಟಿಸ್ ನೀಡಲಾಗುವುದು. ಒಂದು ವೇಳೆ ಬಾರದಿದ್ದರೆ ಅಥವಾ ಸಾಲಗಾರರಿಗೆ ಅತಿಯಾದ ಕಿರುಕುಳ ನೀಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗುರುಬಸವರಾಜ್ ಎಚ್ಚರಿಕೆ ನೀಡಿದರು.