ಹಕ್ಕರಕಿ ಸೊಪ್ಪು.  
ದಾವಣಗೆರೆ

ಕ್ಯಾನ್ಸರ್ ಚಿಕಿತ್ಸೆಗೆ ಹಕ್ಕರಕಿ ಸೊಪ್ಪು ವರದಾನ

ದಾವಣಗೆರೆ ವಿವಿಯಲ್ಲಿ ನಡೆದಿದೆ ಸಂಶೋಧನೆ

ದಾವಣಗೆರೆ : ಹಕ್ಕರಕಿ ಸೊಪ್ಪು ಗ್ರಾಮೀಣ ಜನರಿಗೆ ಚಿರಪರಿಚಿತ ಸಸ್ಯ. ಹಳ್ಳಿಗಳ ಕೃಷಿ ಭೂಮಿಯ ಅಂಚಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅದರಲ್ಲೇನು ವಿಶೇಷ ಎಂದು ಹಗುರವಾಗಿ ಪರಿಗಣಿಸಬೇಡಿ. ಏಕೆಂದರೆ ಈ ಸಸ್ಯಕ್ಕೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ತಾಕತ್ತಿದೆ!. ರೋಗಿಗಳಿಗೆ ವರದಾನವಾಗಬಲ್ಲ ಈ ಸಸ್ಯದ ಔಷಧೀಯ ಗುಣದ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಹತ್ವದ ಸಂಶೋಧನೆ ನಡೆಯುತ್ತಿದೆ.

ವಿವಿಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಕೊಟ್ರೇಶ್ ಮಾರ್ಗದರ್ಶನದಲ್ಲಿ ಡಾ. ದೀಪಾ ಕೆ.ಎನ್. ಅವರು ಈ ಸಂಶೋಧನೆ ನಡೆಸುತ್ತಿದ್ದಾರೆ. ಈ ಯೋಜನೆಗೆ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸಂಸ್ಥೆ ವಿಜಿಎಸ್‌ಟಿ 20 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ.

ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಕೋಶಗಳ ಮೇಲೆ ಪ್ರಯೋಗ ನಡೆಸಲಾಗಿದ್ದು ಒಳ್ಳೆಯ ಪರಿಣಾಮ ಕಂಡುಬಂದಿದೆ. ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಮೂಲಕ ಇನ್ನಷ್ಟು ಆಳವಾದ ಅಧ್ಯಯನ, ಸಂಶೋಧನೆ ಆಗಬೇಕಿದೆ. ಈ ಪ್ರಯತ್ನದ ಬಗ್ಗೆ ಸಂಶೋಧನಾ ಜರ್ನಲ್‌ನಲ್ಲಿ ಪ್ರಬಂಧವನ್ನೂ ಪ್ರಕಟಿಸಲಾಗಿದೆ.

ಸಸ್ಯಶಾಸ್ತ್ರೀಯ ಮಹತ್ವ

ಹಕ್ಕರಕಿ ಸೊಪ್ಪು ಆಸ್ಟರೇಸಿ ಕುಟುಂಬಕ್ಕೆ ಸೇರಿದ, ನೆಲದ ಮೇಲೆ ಹರಡಿಕೊಂಡು ಬೆಳೆಯುವ ಸಸ್ಯವಾಗಿದೆ. ಇದನ್ನು ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ವೈಲ್ಡ್ ಲೆಟ್ಯೂಸ್ ಎಂದು ಕರೆಯಲಾಗುತ್ತದೆ. ಈ ಸಸ್ಯವು ಉದ್ದವಾದ ಎಲೆ, ಅಂಚುಗಳಲ್ಲಿ ಹಲ್ಲಿನಂತಹ ರಚನೆ ಮತ್ತು ಸಣ್ಣ ಹಳದಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ.

ಭಾರತ ಸೇರಿದಂತೆ ಏಷ್ಯಾದ ವಿವಿಧ ಪ್ರದೇಶಗಳಲ್ಲಿ ಈ ಸಸ್ಯ ಕಂಡುಬರುತ್ತದೆ. ರಾಜ್ಯದಲ್ಲಿ ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಬಂಜರು ಭೂಮಿ, ಕೃಷಿ ಭೂಮಿಯ ಅಂಚು, ಮರಳು ಮಿಶ್ರಿತ ಪ್ರದೇಶ ಮತ್ತು ಒಣ ಹವಾಮಾನವಿರುವ ಸ್ಥಳಗಳಲ್ಲಿ ಕಂಡುಬರುವ ಹಕ್ಕರಕಿ ಸೊಪ್ಪು ಸ್ಥಳೀಯ ಸಸ್ಯ ವೈವಿಧ್ಯದ ಭಾಗವಾಗಿದೆ. ಜೋಳದ ಹೊಲಗಳಲ್ಲಿ ಕಳೆ ಮಾದರಿಯಲ್ಲಿ ಇದು ಬೆಳೆಯುತ್ತದೆ. ಆಹಾರದಲ್ಲಿ ಸಲಾಡ್ ರೂಪದಲ್ಲಿ ಉಪಯೋಗಿಸಲಾಗುತ್ತದೆ.

ಜೆನಿಸ್ಟೀನ್ ಮ್ಯಾಜಿಕ್

ಹಕ್ಕರಕಿ ಸೊಪ್ಪಿನಿಂದ ಜೆನಿಸ್ಟೀನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವನ್ನು ಪ್ರತ್ಯೇಕಿಸಿ, ಅದರ ಸಂಭಾವ್ಯ ಜೈವಿಕ ಚಟುವಟಿಕೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಜೆನಿಸ್ಟೀನ್ ಐಸೋಫ್ಲೇವೋನ್ ವರ್ಗಕ್ಕೆ ಸೇರಿದ ಸಂಯುಕ್ತವಾಗಿದ್ದು, ಜೀವಕೋಶಗಳ ಬೆಳವಣಿಗೆ, ಜೀವಕೋಶ ಚಕ್ರದ ನಿಯಂತ್ರಣ ಮತ್ತು ಅಪೋಪ್ರೋಸಿಸ್ ಎಂದು ಕರೆಯಲಾಗುವ ನಿಯೋಜಿತ ಜೀವಕೋಶ ಮರಣದಂತಹ ಪ್ರಕ್ರಿಯೆಗಳೊಂದಿಗೆ ಅದರ ಸಂಬಂಧದ ಕುರಿತು ವೈಜ್ಞಾನಿಕ ಆಸಕ್ತಿ ಇದೆ.

ಲಭ್ಯವಿರುವ ಪ್ರಾಥಮಿಕ ಸಂಶೋಧನಾ ವಿವರಗಳ ಪ್ರಕಾರ, ಈ ಸಂಯುಕ್ತವು ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಕೋಶ ಮಾದರಿಗಳಲ್ಲಿ ಭರವಸೆಯ ಸಾಧ್ಯತೆಯನ್ನು ತೋರಿಸಿದೆ. ಈ ಫಲಿತಾಂಶಗಳ ವೈಜ್ಞಾನಿಕ ದೃಢೀಕರಣಕ್ಕೆ ಸಂಯುಕ್ತದ ಗುರುತು, ಶುದ್ಧತೆ, ಪರೀಕ್ಷಾ ವಿಧಾನ ಮತ್ತು ಪ್ರಯೋಗ ಫಲಿತಾಂಶಗಳನ್ನು ವಿವರವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.

ಪ್ರಾಥಮಿಕ ಅಧ್ಯಯನದಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಇನ್ನೂ ಹೆಚ್ಚಿನ ಪ್ರಯೋಗ ಕೈಗೊಂಡು ಅಭಿವೃದ್ಧಿಪಡಿಸಿದರೆ ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯುವಂತಾಗುತ್ತದೆ. ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಇದು ವರದಾನವಾಗಲಿದೆ.
ಡಾ. ಡಿ. ಕೊಟ್ರೇಶ್, ದಾವಣಗೆರೆ ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ