ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು. ಮಂಜುನಾಥ್ ಭಂಡಾರಿ, ಎಚ್.ಎಂ. ರೇವಣ್ಣ, ಅಸಗೋಡು ಜಯಸಿಂಹ, ಡಿ. ಬಸವರಾಜ, ಎಚ್.ಬಿ. ಮಂಜಪ್ಪ ಇದ್ದರು. 
ದಾವಣಗೆರೆ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿಕ್ಸೂಚಿ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿಕೆ
  • ಉಸ್ತುವಾರಿ ಸಮಿತಿ ಸಭೆ
ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಗಳ ಫಲಿತಾಂಶವು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿಕ್ಸೂಚಿಯಾಗಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಸಮಿತಿ ಸಂಚಾಲಕ ಮಂಜುನಾಥ್ ಭಂಡಾರಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಗ್ರಾ.ಪಂ, ತಾ.ಪಂ, ಜಿ.ಪಂ ಮುಂತಾದ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ 1 ಲಕ್ಷ ಜನರು ಚುನಾಯಿತರಾಗುತ್ತಾರೆ. ಅಲ್ಲಿ ಗೆಲ್ಲಬೇಕಾದರೆ ಈ ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ದಾವಣಗೆರೆ ದಕ್ಷಿಣದ ಚುನಾವಣೆಯಲ್ಲಿ 2.32 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೇ ಹೆಚ್ಚಿನ ಒತ್ತು ನೀಡಲಾಗಿದೆ. ಮನೆ ಮನೆಗೆ ತೆರಳಿ ಇದನ್ನು ಮನವರಿಕೆ ಮಾಡಿಕೊಡಬೇಕು, ಮತಗಳಾಗಿ ಪರಿವರ್ತಿಸಬೇಕು. ಯುವ ಕಾಂಗ್ರೆಸ್ ಕಾರ್ಯಕರ್ತರು ಯುವ ಮತದಾರರಲ್ಲಿ ಕಾಂಗ್ರೆಸ್ ಪರವಾಗಿ ಅಭಿಪ್ರಾಯ ರೂಪಿಸಬೇಕು ಎಂದು ಮನವಿ ಮಾಡಿದರು.
ಡಾ. ಶಾಮನೂರು ಶಿವಶಂಕರಪ್ಪ ಅವರು ದೊಡ್ಡ ಶಕ್ತಿಯಾಗಿದ್ದರು. ಅವರು ಪ್ರತಿನಿಧಿಸಿದ ಈ ಕ್ಷೇತ್ರವನ್ನು ಪಕ್ಷ ಉಳಿಸಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ದಾವಣಗೆರೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಗ್ಗಟಿನಿಂದ ಚುನಾವಣೆ ಎದುರಿಸಬೇಕು ಎಂದು ತಿಳಿಸಿದರು.
ಇನ್ನೊಬ್ಬ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ, ಮುಖಂಡರಾದ ಅಯೂಬ್ ಪೈಲ್ವಾನ್, ಎಸ್. ಮಲ್ಲಿಕಾರ್ಜುನ್ ಇದ್ದರು.

ಚುನಾವಣೆ ಬಂದಾಗ ಹೊರಗೆ ಬರುತ್ತಾರೆ

ಕೆಲವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಹೊರಗೆ ಬರುತ್ತಾರೆ. ಅಂಥವರನ್ನು ಪರಿಗಣಿಸಬೇಡಿ. ಪಕ್ಷದ ನಿಷ್ಠಾವಂತರನ್ನು ಗುರುತಿಸಿ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಪಕ್ಷಕ್ಕೆ ಯಾರ ಕೊಡುಗೆ ಇದೆ, ಚುನಾವಣೆಗಳಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದನ್ನು ಗಮನಿಸಿ ನಿರ್ಧಾರಕ್ಕೆ ಬನ್ನಿ ಎಂದು ಸಮಿತಿಯ ಸದಸ್ಯರಿಗೆ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮುಖಂಡ ಸುಭಾಷ್ ಹೆಸರು ಪ್ರಸ್ತಾಪಿಸಿ ಪಕ್ಷಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಿಜೆಪಿಯವರ ಹಾವಳಿ ಜಾಸ್ತಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷವನ್ನು ಒಗ್ಗಟ್ಟಿನಿಂದ ಬೆಳೆಸಬೇಕೆ ಹೊರತು ಹಾಳು ಮಾಡಬಾರದು ಎಂದು ಹೇಳಿದರು.
ಈ ಹಿಂದೆ ಹೆಲಿಕಾಪ್ಟರ್‌ನಲ್ಲಿ ಬಿ ಫಾರ್ಮ್ ಬಂದಿದ್ದ ಪ್ರಸಂಗವನ್ನು ನೆನಪಿಸಿ, ಆ ವಿಷಯದಲ್ಲಿ ನನ್ನ ತಪ್ಪು ಏನೂ ಇರಲಿಲ್ಲ, ಸೈಫುಲ್ಲಾ ಅವರ ತಪ್ಪೂ ಇರಲಿಲ್ಲ. ಆದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಅಂಥ ಘಟನ ಮರುಕಳಿಸುವುದು ಬೇಡ ಎಂದು ಸಮಿತಿಯವರಿಗೆ ತಿಳಿಸಿದರು.