ಭದ್ರಾನಾಲೆ ದುರಸ್ತಿಗೆ ಅನುದಾನ ಕೋರಿ ಬಿಜೆಪಿ ಕಾರ್ಯಕರ್ತರು ಮಲೇಬೆನ್ನೂರು ಭದ್ರಾ ನಾಲಾ 3ನೇ ವಿಭಾಗೀಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಹನಗವಾಡಿ ವೀರೇಶ್, ನಿಟ್ಟೂರು ಧನಂಜಯ, ಮುದೇಗೌಡ್ರ ತಿಪ್ಪೇಶ, ಬೂದಾಳ್ ಅಂಜನಪ್ಪ ಇತರರಿದ್ದರು. Protest 
ದಾವಣಗೆರೆ

ಭದ್ರಾ ನಾಲಾ ದುರಸ್ತಿಗೆ ನೀಡಿ ಅನುದಾನ Protest

ಶೋಭಾ ಕೃಷ್ಣ ಗೌಡ
ಮಲೇಬೆನ್ನೂರು: ಭದ್ರಾನಾಲೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಲೇಬೆನ್ನೂರು ಭದ್ರಾ ನಾಲಾ 3ನೇ ವಿಭಾಗೀಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಶಾಸಕರು ಇರುವ ಕಾರಣ ಹರಿಹರಕ್ಕೆ ಅನುದಾನ ನೀಡದೆ ರಾಜ್ಯ ಸರ್ಕಾರ ತಾರತಮ್ಯ ಎಸಗಿದೆ. ಕಾಂಗ್ರೆಸ್ ಶಾಸಕರಿರುವ ಹೊನ್ನಾಳಿ, ಮಾಯಕೊಂಡ ಹಾಗೂ ಚನ್ನಗಿರಿ ತಾಲೂಕುಗಳಿಗೆ ಅನುದಾನ ನೀಡಿದೆ ಎಂದು ದೂರಿದರು.
ನಾಲೆ ದುರಸ್ತಿಗೆ ಅಂದಾಜು ಪಟ್ಟಿ ಸಲ್ಲಿಸಿದರೂ ನಿರ್ಲಕ್ಷಿಸಲಾಗಿದೆ ಎಂದು ಮುಖ್ಯ ಮಂತ್ರಿ, ಜಲ ಸಂಪನ್ಮೂಲ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದರು, ಕಾಡಾ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ರಾಜಕೀಯಕ್ಕೆ ರೈತರನ್ನು ಬಲಿ ಕೊಡಬೇಡಿ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸಮಸ್ಯೆ ಪರಿ ಹರಿಸಬೇಕು. ನಾಲೆಯ ಡ್ರಾಪ್, ಪೈಪ್ ಔಟಲೆಟ್, ರಸ್ತೆ, ಕಾಲುವೆ ಹಾಳಾಗಿವೆ. ನಾಲೆ ಪಕ್ಕ ಜಂಗಲ್ ಬೆಳೆದಿದೆ. ಹೂಳು ತುಂಬಿಕೊಂಡಿದೆ. ಅಕ್ರಮ ಪಂಪ್‌ಸೆಟ್ ತೆರವು ಮಾಡಿಲ್ಲ. ಜಲಾಶಯ ಭರ್ತಿಯಾದರೂ ನೀರು ಹರಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್ ಹಾಗೂ ಎಇಇ ಕೃಷ್ಣಮೂರ್ತಿ ರೈತರ ಮನವಿಗೆ ಸ್ಪಂದಿಸಿ, ಅನುದಾನ ಬಿಡುಗಡೆಗೆ ಪತ್ರವ್ಯವಹಾರ ನಡೆಸುವ ಭರವಸೆ ನೀಡಿದರು.
ರೈತರಾದ ನಿಟ್ಟೂರು ಧನಂಜಯ್ಯ, ಮುದೇಗೌಡ್ರ ತಿಪ್ಪೇಶ, ಬೂದಾಳ್ ಅಂಜನಪ್ಪ, ಜಿಗಳಿ ಗ್ರಾಮದ ಇಂದೂಧರ್ ಎನ್. ರುದ್ರಗೌಡ ಮಾತನಾಡಿದರು. ಬಿಜೆಪಿ ಮುಖಂಡರಾದ ಐರಣಿ ಅಣ್ಣಪ್ಪ, ಹಿಂಡಸಗಟ್ಟಿ ಲಿಂಗರಾಜ್, ಆದಾಪುರ ವೀರೇಶ್, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ,ಹರಳಹಳ್ಳಿ ಶ್ರೀನಿವಾಸ್, ನಿರಂಜನ, ಸುನಿಲ್, ಐರಣಿ ಮಹೇಶ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು. ಪೊಲೀಸರು ಭದ್ರತೆ ಒದಗಿಸಿದ್ದರು.