ದಾವಣಗೆರೆಯಲ್ಲಿ ಗುರುವಾರ ಇಸ್ಕಾನ್ ಸಂಸ್ಥೆಯಿಂದ ಆಯೋಜಿಸಿದ್ದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ಮಹೋತ್ಸವದ ದೃಶ್ಯ. 
ದಾವಣಗೆರೆ

ಬೆಣ್ಣೆನಗರಿಯಲ್ಲಿ ಜಗನ್ನಾಥ ರಥಯಾತ್ರೆ ವೈಭವ

ಪ್ರಮುಖ ಮುಖ್ಯಾಂಶಗಳು

  • ಇಸ್ಕಾನ್ ಸಂಸ್ಥೆಯಿಂದ ಆಯೋಜನೆ
  • ಸ್ತಬ್ಧಚಿತ್ರ, ಕಲಾ ತಂಡಗಳ ಆಕರ್ಷಣೆ
ದಾವಣಗೆರೆ : ಎಲ್ಲೆಲ್ಲೂ ರಾಮನದೇ ಧ್ಯಾನ, ಕೃಷ್ಣನ ಜಪ, ಗೋವಿಂದ ನಾಮಸ್ಮರಣೆ. ಭಕ್ತರು ಭಾವಪರವಶರಾಗಿ ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕುತ್ತಿದ್ದರು. ಮಾರ್ಗದುದ್ದಕ್ಕೂ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ. ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಇಸ್ಕಾನ್ ಕಾರ್ಯಕರ್ತರು, ಸಂತರು. ಶ್ರದ್ಧೆಯಿಂದ ಆಗಮಿಸಿದ್ದ ಮಾತೆಯರು, ಯುವಜನರು, ಮಕ್ಕಳು.
ಇದು, ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ (ಇಸ್ಕಾನ್) ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ಮಹೋತ್ಸವದ ದೃಶ್ಯ.
ನವನೀತ ಚೋರನ ಈ ಉತ್ಸವವನ್ನು ಬೆಣ್ಣೆ ನಗರಿಯಲ್ಲಿ 5ನೇ ಬಾರಿಗೆ ಆಯೋಜಿಸಲಾಗಿತ್ತು. ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದ ಬಳಿ ರಥಯಾತ್ರೆಗೆ ಶಾಸಕ ಸಮರ್ಥ್ ಶಾಮನೂರು ಚಾಲನೆ ನೀಡಿದರು. ಅಲ್ಲಿಂದ ಹೊರಟ ಯಾತ್ರೆಯು ಚಾಮರಾಜಪೇಟೆ ರಸ್ತೆ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ಸರ್ಕಲ್, ಅರುಣ ಸರ್ಕಲ್, ಆರ್.ಎಚ್. ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಗುಂಡಿ ವೃತ್ತ ತಲುಪಿತು.
ಪುಷ್ಪಾಲಂಕೃತ ರಥದಲ್ಲಿ ಜಗನ್ನಾಥ, ಸುಭದ್ರಾ ಮತ್ತು ಬಲರಾಮ ವಿಗ್ರಹಗಳು ಕಂಗೊಳಿಸುತ್ತಿದ್ದವು. ಮುಂಭಾಗದಲ್ಲಿ ವೆಂಕಟೇಶ್ವರ ಸ್ವಾಮಿ ಮತ್ತು ಇಸ್ಕಾನ್ ಸಂಸ್ಥಾಪಕ ಶೀಲಾ ಪ್ರಭುಪಾದರ ಸ್ತಬ್ಧಚಿತ್ರಗಳಿದ್ದವು. ಎತ್ತಿನ ಗಾಡಿ ಮತ್ತು ಕುದುರೆಗಳು ಮೆರವಣಿಗೆಯ ಮುಂಭಾಗದಲ್ಲಿದ್ದವು. ಆಂಜನೇಯ ಮತ್ತು ಆನೆಯ ವೇಷಧಾರಿಗಳಿದ್ದರು.
ಭಕ್ತರು ರಥ ಎಳೆದು ಧನ್ಯತಾಭಾವ ಅನುಭವಿಸಿದರು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತಿದ್ದ ಜನರು ರಥಯಾತ್ರೆಯ ದೃಶ್ಯವನ್ನು ಕಣ್ತುಂಬಿಕೊಂಡರು. ಜಗನ್ನಾಥ ಸ್ವಾಮಿಗೆ ಭಕ್ತಿಯಿಂದ ನಮಿಸಿದರು. ಪ್ರಮುಖ ವೃತ್ತಗಳಲ್ಲಿ ಪ್ರಸಾದ ವಿತರಣೆ ನಡೆಯಿತು.
ಇಸ್ಕಾನ್ ಸಂಸ್ಥೆಯ ದಾವಣಗೆರೆ ಕೇಂದ್ರದ ಮುಖ್ಯಸ್ಥ ಅವಧೂತ ಚಂದ್ರದಾಸ, ಧ್ರುವ ಮಹಾರಾಜ್ ಪ್ರಭುಗಳು, ರಾಧಾ ಗೋವಿಂದ ದಾಸ್, ಶ್ಯಾಮ್ ಬಿಹಾರಿ ದಾಸ್, ಚಂದ್ರಮೌಳಿ ದಾಸ್, ಅಮೃತ ಕೃಷ್ಣ ಪ್ರಭು, ಗೌರ್ ಹರಿದಾಸ್, ಸತ್ಯನಾರಾಯಣ ಮೂರ್ತಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಶ್ರೀಕಾಂತ್ ಪಾಲ್ಗೊಂಡಿದ್ದರು.
ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಬೆಳಗ್ಗೆ 7 ಗಂಟೆಯಿಂದ ಶ್ರೀ ನರಸಿಂಹ ಯಜ್ಞ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು. ಸಂಜೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು.