ಹರಿಹರ: ನಗರದಲ್ಲಿ ಭಾನುವಾರ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಹಾಗೂ ಸಾರ್ವಜನಿಕ ವಿನಾಯಕ ಸಂಘ ಸಂಯುಕ್ತಾಶ್ರಯದಲ್ಲಿ ಪ್ರಥಮ ಬಾರಿಗೆ ಜಂಟಿ ಬೃಹತ್ ಗಣೇಶ ವಿಸರ್ಜನಾ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಹಿಂದೂ ಮಹಾಗಣಪತಿಯ ಏಳನೇ ವರ್ಷದ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಹಾಗೂ ಗಾಂಧಿ ಮೈದಾನದ ಸಾರ್ವಜನಿಕ ವಿನಾಯಕ ಸಂಘದಿಂದ ಪ್ರತಿಷ್ಠಾಪಿಸಿದ 64ನೇ ವರ್ಷದ ಗಣೇಶನ ವಿಸರ್ಜನಾ ಮೆರವಣಿಗೆಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಟ್ರ್ಯಾಕ್ಟರ್ ಓಡಿಸುವ ಮೂಲಕ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆ ವಿಭಜಕ, ಕಟ್ಟಡದ ಮೇಲೆ, ಎಲ್ಲಿ ನೋಡಿದರಲ್ಲಿ ಜನಜಂಗುಳಿ ತುಂಬಿತ್ತು. ಹರಿಹರ ತಾಲೂಕು ಸೇರಿದಂತೆ ದಾವಣಗೆರೆ, ಹೊನ್ನಾಳಿ, ರಾಣೇಬೆನ್ನೂರು, ಹರಪನಹಳ್ಳಿ ಯಿಂದ ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯ ಪ್ರಯುಕ್ತ ನಗರದಲ್ಲಿ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಲಾಗಿತ್ತು. ಸಾರ್ವಜನಿಕರು ಮೆರವಣಿಗೆಯುದ್ದಕ್ಕೂ ಅನ್ನ ಸಂತರ್ಪಣೆ, ತಂಪು ಪಾನೀಯ, ಮಜ್ಜಿಗೆ ವಿತರಣೆ ಮಾಡುತ್ತಿದ್ದರು. ನಗರವು ಜನಸಾಗರದಲ್ಲಿ ಮಿಂದೆದ್ದಿತು. ಪೊಲೀಸರು ಭದ್ರತೆಗಾಗಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದರು. ಕೊರಳಲ್ಲಿ ಕೇಸರಿ ಶಾಲು, ತಲೆಗೆ ಕೇಸರಿ ಪೇಟ ಕಾಣುತ್ತಿದ್ದವು.
ಮಧ್ಯಾಹ್ನ 12ಕ್ಕೆ ನಗರದ ಪೇಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕ ವಿನಾಯಕ ಸಂಘದ ವಿಸರ್ಜನಾ ಮೆರವಣಿಗೆಯ ಸಹ ಕೂಡಿಕೊಳ್ಳುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಮೆರವಣಿಗೆಯು ನಗರದ ಪೇಟೆ ಆಂಜನೇಯ ದೇವಸ್ಥಾನ ರಸ್ತೆ, ಹಳೇ ಪಿಬಿ ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಹಾಗೂ ಮುಖ್ಯ ರಸ್ತೆಯ ಮೂಲಕ ಹಳೆ ಪಿ.ಬಿ ರಸ್ತೆಯಲ್ಲಿ ಸಾಗಿ ನಗರಸಭೆಯಿಂದ ವಿಸರ್ಜನೆಗಾಗಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ನೀರಿನ ಹೊಂಡದಲ್ಲಿ ರಾತ್ರಿ 10 ಗಂಟೆಗೆ ವಿಸರ್ಜನೆಯ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್, ಗೌರವಾಧ್ಯಕ್ಷ ಡಾ. ಶಶಿಕುಮಾರ್ ಮೆಹರ‌್ವಾಡೆ, ಸಮಿತಿಯ ಶೇಖರ್‌ಗೌಡ ಪಾಟೀಲ್, ರಾಜು ರೋಖಡೆ, ನಾಗರಾಜ್ ಬಂಡಾರಿ, ಸ್ವಾತಿ ಹನುಮಂತ, ರಟ್ಟಿಹಳ್ಳಿ ಹನುಮಂತ, ನಿತ್ಯಾನಂದ, ಕಾರ್ತಿಕ್, ಚಂದನ್ ಮೂರ್ಕಲ್ ಇತರರು ಇದ್ದರು.
ಹಿಂದೂ ಮಹಾಗಣಪತಿ, ಸಾರ್ವಜನಿಕ ವಿನಾಯಕ ಸಂಘದ ಗಣಪತಿ ಜತೆಗೆ ಭರಂಪುರದ ಹರಿಹರ ಕಾ ರಾಜ್, ಗರಡಿ ಮನೆ ವೃತ್ತ ಗರಡಿ ಸರ್ಕಾರ್ ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಜತೆಗೂಡಿ ಸಾಗಿದವು.
ಗಣೇಶ ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಜಿಪಂ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಿಖಿಲ್ ಕೊಂಡಜ್ಜಿ ಭಾಗವಹಿಸಿ ದೇವರ ದರ್ಶನ ಪಡೆದರು.
ಎಸ್‌ಪಿ, ಎಎಸ್‌ಪಿ, 3 ಡಿವೈಎಸ್‌ಪಿ, 15 ಸಿಪಿಐ, 31 ಪಿಎಸೈ, 54 ಎಎಸ್‌ಐ, 200 ಪಿಸಿಎಚ್‌ಸಿ, 20 ಮಹಿಳಾ ಪಿಸಿ, 100 ಗೃಹರಕ್ಷಕ ದಳ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕಡಿ, 4 ಡಿಎಆರ್ ತುಕಡಿ, ಹಾಗೂ 25ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಮತ್ತು 3ಕ್ಕೂ ಹೆಚ್ಚು ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.
ನವರತ್ನ ಜುವೇಲರಿ ಮಾಲೀಕರಿಂದ ಮುಖ್ಯ ರಸ್ತೆಯಲ್ಲಿ, ಮಂಗಳಮುಖಿಯರಿಂದ ಗಾಂಧಿ ವೃತ್ತದ ಬಳಿ ಅನ್ನ ಸಂತರ್ಪಣೆ, ವುಡ್ ಲ್ಯಾಂಡ್ ಹೋಟೆಲ್ ರಸ್ತೆ, ಹಳೆ ಪಿಬಿ ರಸ್ತೆಯಲ್ಲಿ ಪ್ರಸಾದ ಹಾಗೂ ವಿವಿಧೆಡೆ ಪಾನೀಯ ವ್ಯವಸ್ಥೆ ಮಾಡಲಾಗಿತು.
ಶೋಭಾಯಾತ್ರೆಯಲ್ಲಿ ಭಾಗಿಯಾದ ಬಹುತೇಕರು ಕೇಸರಿ ಬಣ್ಣದ ಶಾಲು, ಪೇಟ ಧರಿಸಿದ್ದರು. ಮೆರವಣಿಗೆಯುದ್ದಕ್ಕೂ ಕೇಸರಿಯ ರಂಗು ಮೂಡಿತ್ತು.