ಬಳಕೆ ಇಲ್ಲದೆ ಗ್ರಾಮ ಪಂಚಾಯಿತಿ ಮುಂದೆ ತುಕ್ಕು ಹಿಡಿದು ನಿಂತಿರುವ ಕಸ ಸರಬರಾಜು ವಾಹನ.Garbage disposal unit
- ತುಕ್ಕು ಹಿಡಿಯುತ್ತಿದೆ ಕಸದ ವಾಹನ
- ಅಭಿವೃದ್ಧಿಗೆ ಮುಳುವಾದ ಪಿಡಿಒಗಳ ಬದಲಾವಣೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಹೋಬಳಿಯ ಕೊಡಗನೂರು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದರೂ ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷೃ ವಹಿಸಿದೆ.
ಕಳೆದ ಮೂರು ವರ್ಷಗಳಿಂದ ಕಸ ವಿಲೇವಾರಿ ವಾಹನವು ಕಚೇರಿ ಮುಂದೆಯೇ ನಿಂತು ತುಕ್ಕು ಹಿಡಿಯುತ್ತಿದ್ದರೆ, ಗ್ರಾಮದ ಕಸದ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಗಿತಗೊಂಡ ಘಟಕ ನಿರ್ಮಾಣ
ಕೊಡಗನೂರು ಗ್ರಾಪಂ ಸುಮಾರು 1200 ಮನೆಗಳನ್ನು ಹೊಂದಿದ್ದು, ಇದರ ವ್ಯಾಪ್ತಿಗೆ ದೊಡ್ಡಮಾಗಡಿ, ದಿಂಡದಹಳ್ಳಿ, ಬೊಮ್ಮೇನಹಳ್ಳಿ ಸೇರಿ ಒಟ್ಟು 7 ಗ್ರಾಮಗಳು ಸೇರುತ್ತವೆ. ಇಷ್ಟು ದೊಡ್ಡ ವ್ಯಾಪ್ತಿ ಹೊಂದಿದ್ದರೂ, ಇಲ್ಲಿಯವರೆಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿಲ್ಲ. ಎರಡು ವರ್ಷಗಳ ಹಿಂದೆ ವಡೇರಹಳ್ಳಿ ಸಮೀಪದ 2 ಎಕರೆ ಸರ್ಕಾರಿ ಜಾಗದಲ್ಲಿ ಘಟಕ ನಿರ್ಮಾಣಕ್ಕೆ ಬುನಾದಿ ಹಾಕಲಾಗಿತ್ತು. ಆದರೆ, ಆ ಕೆಲಸ ಅಲ್ಲಿಗೇ ನಿಂತಿದ್ದು, ಈಗ ಆ ಜಾಗ ಪಾಳು ಬಿದ್ದಿದೆ.
2022 ರಲ್ಲಿ ಸರ್ಕಾರದಿಂದ ಕಸ ವಿಲೇವಾರಿಗಾಗಿ ನೀಡಲಾದ ವಾಹನವು ಕೆಲಸವಿಲ್ಲದೆ ಕಚೇರಿ ಮುಂದೆ ನಿಂತು ಹಾಳಾಗುತ್ತಿದೆ. ಹಸಿ ಹಾಗೂ ಒಣ ಕಸ ವಿಂಗಡಣೆಗೆಂದು ತರಿಸಲಾದ ಸಾವಿರಾರು ಪ್ಲಾಸ್ಟಿಕ್ ಬಕೆಟ್‌ಗಳು ಗೋದಾಮಿನಲ್ಲಿ ಧೂಳು ಹಿಡಿಯುತ್ತಿವೆ. ಜನಪ್ರತಿನಿಧಿಗಳ ನಿರಾಸಕ್ತಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತು ವ್ಯರ್ಥವಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಇಲ್ಲಿ ಮೂರ್ನಾಲ್ಕು ಪಿಡಿಒಗಳು ಬದಲಾಗಿದ್ದಾರೆ. ಈ ನಿರಂತರ ವರ್ಗಾವಣೆ ಮತ್ತು ಹೊಂದಾಣಿಕೆಯ ಕೊರತೆಯಿಂದಾಗಿ ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಗ್ರಾಮ ಪಂಚಾಯಿತಿಯ ಅವಧಿ ಮುಗಿಯುತ್ತಾ ಬಂದರೂ ಮೂಲ ಸೌಕರ್ಯವಾದ ಸ್ವಚ್ಛತೆಗೆ ಮಾತ್ರ ಈ ಪಂಚಾಯಿತಿ ಮನ್ನಣೆ ನೀಡಿಲ್ಲ.
ಕೊಡಗನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ವಾಹನ ಬಳಕೆಯಾಗದಿರುವುದು ಗಮನಕ್ಕೆ ಬಂದಿದೆ. ಪಂಚಾಯಿತಿ ವ್ಯಾಪ್ತಿಯ ಜಾಗದಲ್ಲಿ ಶೀಘ್ರವೇ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿಚಾರದಲ್ಲಿ ಕೆಲವು ಗೊಂದಲಗಳಿದ್ದವು. ಸಿಇಒ ಅವರು ಭೇಟಿ ನೀಡಿ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಸುಸಜ್ಜಿತ ಘಟಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.