ದಾವಣಗೆರೆಯ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ರೋಗಿಗಳ ಸಂಬಂಧಿಕರ ಜತೆ ಮಾತನಾಡಿದರು. 
ದಾವಣಗೆರೆ

ಸರ್ಕಾರಿ ವೈದ್ಯರ ಕರ್ತವ್ಯ ನಿರ್ಲಕ್ಷೃ ಸಲ್ಲ

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಕ್ಲಿನಿಕ್‌ಗೆ ಆದ್ಯತೆ ನೀಡಿದ್ರೆ ಕ್ರಮ
  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಎಚ್ಚರಿಕೆ
  • ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ
ದಾವಣಗೆರೆ: ವೈದ್ಯರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಬಾರದು. ಸರ್ಕಾರಿ ಕೆಲಸ ಕಡೆಗಣಿಸಿ ಖಾಸಗಿ ಕ್ಲಿನಿಕ್‌ಗಳಿಗೆ ಆದ್ಯತೆ ನೀಡುವ ವೈದ್ಯರು ಸೇವೆಯಿಂದ ದೂರ ಉಳಿಸಬಹುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.
ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾತನಾಡಿದರು.
ಸೇವಾ ಮನೋಭಾವವುಳ್ಳ ವೈದ್ಯರನ್ನು ನೇಮಿಸಿ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿ ಎಂದು ಡಿಎಚ್‌ಒ ಅವರಿಗೆ ಸೂಚಿಸಿದರು.
ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಉತ್ತಮ ಆರೋಗ್ಯ ಸೇವೆ ನೀಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಪಿಜಿ ವೈದ್ಯರೇ ಹೆಚ್ಚಿನ ರೋಗಿಗಳನ್ನು ನೋಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ತಕ್ಷಣ ಗಮನಹರಿಸಲು ಸೂಚನೆ ನೀಡಿದರು. ಔಷಧ ಉಗ್ರಾಣದ ಸಮಸ್ಯೆಗಳ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಸಂಬಂಧಿಸಿದವರಿಗೆ ತಿಳಿಸಿದರು. ಸಮಸ್ಯೆಗಳನ್ನು ಮರೆಮಾಚದೆ ತಿಳಿಸಿದರೆ ಸಅವುಗಳನ್ನು ಬಗೆಹರಿಸಲು ಸಾಧ್ಯ ಎಂದು ಹೇಳಿದರು.
ಲ್ಯಾಬ್ ತಂತ್ರಜ್ಞರಿಂದ ಸಮರ್ಪಕ ಮಾಹಿತಿ ದೊರೆಯದಿರುವುದು ಹಾಗೂ ರೋಗಿಗಳು ರಸೀದಿ ಹಿಡಿದು ಓಡಾಡುವ ಪರಿಸ್ಥಿತಿ ಇರುವುದಾಗಿ ಬಂದಿರುವ ದೂರುಗಳ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದೂ ಸೂಚಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಫ್ಯಾನ್‌ಗಳನ್ನು ಅಳವಡಿಸುವುದು, ಮಹಿಳೆಯರಿಗಾಗಿ ಶೌಚಗೃಹ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸುವ ಕುರಿತು ಬೇಡಿಕೆ ಇದ್ದು, ನಿರ್ಮಿತಿ ಕೇಂದ್ರದ ಇಂಜಿನಿಯರ್‌ರಿಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ರಾತ್ರಿ ವೇಳೆ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಸಾಮಗ್ರಿಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆಯ ಹಳೆ ಭಾಗದಲ್ಲಿರುವ ಈ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿರುವುದರಿಂದ ಯಾರನ್ನೂ ಹೆಚ್ಚು ಸಮಯ ಕಾಯಿಸದೇ ಸಮರ್ಪಕ ಸೇವೆ ನೀಡಬೇಕು ಎಂದು ಸೂಚಿಸಿದರು.
* ಎಚ್‌ಪಿವಿ ಲಸಿಕೆ ಕುರಿತು ಜಾಗೃತಿ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ಪರಿಣಾಮಕಾರಿ ರಕ್ಷಣೆಯಾಗಿದೆ. 9ರಿಂದ 14 ವರ್ಷದ ಹೆಣ್ಣುಮಕ್ಕಳು ತಮ್ಮ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಹೆಣ್ಣುಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಈ ಲಸಿಕೆ ಮಹತ್ವದ ಹೆಜ್ಜೆಯಾಗಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಸಂಸದೆ ಡಾ. ಪ್ರಭಾ ಹೇಳಿದರು.
ಮಾ.13 ರಿಂದ ರಾಜ್ಯಾದ್ಯಂತ ಈ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಗೆ 15,175 ಡೋಸ್ ಲಸಿಕೆ ಬಂದಿದ್ದು, ಮೊದಲ ಹಂತದಲ್ಲಿ 7,535, ಎರಡನೇ ಹಂತದಲ್ಲಿ 7,640 ಡೋಸ್ ಲಭ್ಯವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 3,570 ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿಎಚ್‌ಒ ಡಾ. ಷಣ್ಮುಖಪ್ಪ ಹಾಗೂ ಆಸ್ಪತ್ರೆ ಅಧೀಕ್ಷಕ ಡಾ. ಮಧು ಇತರರಿದ್ದರು.