ಹೊನ್ನಾಳಿ ಪಟ್ಟಣದಲ್ಲಿ ಶುಕ್ರವಾರ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್‌ಅನ್ನು ಶಾಸಕ ಡಿ.ಜಿ. ಶಾಂತನಗೌಡ ವಿತರಿಸಿದರು. ಸುಮಾ, ಬಸವರಾಜ್, ಕೌಶಿಕ್, ಗಿರೀಶ್ ಇತರರು ಇದ್ದರು. fishermen
- ಶಾಸಕ ಡಿ.ಜಿ. ಶಾಂತನಗೌಡ ಹೇಳಿಕೆ
- ಹೊನ್ನಾಳಿಯಲ್ಲಿ ಮೀನುಗಾರಿಕೆ ಕಿಟ್ ವಿತರಣೆ
ಹೊನ್ನಾಳಿ: ಮೀನುಗಾರರ ಸಮಗ್ರ ಅಭಿವೃದ್ಧಿ ಹಾಗೂ ಅವರ ಕುಟುಂಬದ ಆರ್ಥಿಕ ಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. fishermen
ಹೊನ್ನಾಳಿ ಪಟ್ಟಣದಲ್ಲಿ ಶುಕ್ರವಾರ ಮೀನುಗಾರಿಕೆ ಇಲಾಖೆಯ ವತಿಯಿಂದ 15 ಫಲಾನುಭವಿಗಳಿಗೆ ಮೀನು ಹಿಡಿಯುವ ಸಲಕರಣೆಗಳ ಕಿಟ್ ವಿತರಿಸಿ ಮಾತನಾಡಿದರು.
ನಮ್ಮ ಸರ್ಕಾರ ಪ್ರತಿ ಸಮುದಾಯದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಮೀನುಗಾರಿಕೆ ಸಲಕರಣೆ ಕಿಟ್ ಪಡೆಯಲು ನೀಡುತ್ತಿದ್ದ 10 ಸಾವಿರ ರೂ. ಸಹಾಯಧನವನ್ನು 2026-27ನೇ ಸಾಲಿನಿಂದ 20 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ವಿಶೇಷ ಯೋಜನೆಯಡಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದ 35 ಅರ್ಹ ಫಲಾನುಭವಿಗಳಿಗೆ ದೋಣಿ, ಹರಿಗೋಲು ಸೇರಿ ವಿವಿಧ ಪರಿಕರಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೀನು ಸಾಕಾಣಿಕೆದಾರರಿಗೆ ಮೀನು ಮರಿ ಖರೀದಿಸಲು 5 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಮೀನು ಮಾರಾಟಕ್ಕೆ ತೆರಳಲು ದ್ವಿಚಕ್ರ ವಾಹನ ಖರೀದಿಗೆ 20 ಸಾವಿರ ರೂ. ಹಾಗೂ ಹೆಚ್ಚಿನ ಪ್ರಮಾಣದ ಮೀನುಗಳನ್ನು ಮಾರುಕಟ್ಟೆಗೆ ಸಾಗಿಸಲು ಬೊಲೆರೊ ಅಂತಹ ನಾಲ್ಕು ಚಕ್ರದ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಈಗಾಗಲೇ ಇಬ್ಬರು ಈ ಸಬ್ಸಿಡಿ ಪಡೆದಿದ್ದಾರೆ ಎಂದರು.
ಇದೇ ವೇಳೆ ಹೊನ್ನಾಳಿ ಪಟ್ಟಣದಲ್ಲಿ ಸುಸಜ್ಜಿತ ಮೀನು ಮಾರಾಟ ಮಳಿಗೆಯ ಅಗತ್ಯವಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು, ಪುರಸಭೆ ಮುಖ್ಯಾಧಿಕಾರಿಗಳಿಗೆ ಶೀಘ್ರವೇ ಲಿಖಿತವಾಗಿ ಮನವಿ ಸಲ್ಲಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ, ಬಸವರಾಜ್, ಕೌಶಿಕ್, ಗಿರೀಶ್ ಇತರರು ಇದ್ದರು.
ಮನೆ ವಿತರಣೆ
ಮತ್ಸ್ಯ ಆಶ್ರಯ ಯೋಜನೆಯಡಿ 2024-25ನೇ ಸಾಲಿನಲ್ಲಿ ಎರಡು ಹಂತಗಳಲ್ಲಿ ಒಟ್ಟು 35 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಶಾಸಕರ ಅಧ್ಯಕ್ಷತೆಯಲ್ಲಿ ವಿತರಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅಣ್ಣಪ್ಪಸ್ವಾಮಿ ತಿಳಿಸಿದರು.