rainಹೊನ್ನಾಳಿ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ವಿಶ್ವನಾಥ್ ಅವರು ಕೃಷಿ ಪರಿಕರಗಳ ಅಂಗಡಿಗೆ ದಿಢೀರ್ ಭೇಟಿ ನೀಡಿ ಕ್ರಿಮಿನಾಶಕ ಔಷಧಗಳನ್ನು ಪರಿಶೀಲಿಸಿದರು. 
ದಾವಣಗೆರೆ

ಹೊನ್ನಾಳಿ, ನ್ಯಾಮತಿಯಲ್ಲಿ ಉತ್ತಮ ಮಳೆ rain

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಭೂಮಿ ಹದಗೊಳಿಸುವಲ್ಲಿ ಕೃಷಿಕರು ನಿರತ
  • ಕಳಪೆ ಬೀಜ, ಗೊಬ್ಬರ ಹೆಚ್ಚಿನ ಬೆಲೆಗೆ ಮಾರಿದರೆ ಕಟ್ಟುನಿಟ್ಟಿನ ಕ್ರಮ
  • ಕೃಷಿ ಸಹಾಯಕ ನಿರ್ದೇಶಕ ವಿಶ್ವನಾಥ್ ಎಚ್ಚರಿಕೆ

ಹೊನ್ನಾಳಿ:ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಪೂರ್ವ ಮಳೆಯಾಗುತ್ತಿದ್ದು, ಇದುವರೆಗೆ ಹೊನ್ನಾಳಿ ತಾಲೂಕಿನಲ್ಲಿ 72.01 ಮಿ.ಮೀ. ಹಾಗೂ ನ್ಯಾಮತಿಯಲ್ಲಿ 107.01 ಮಿ.ಮೀ ಮಳೆಯಾಗಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ವಿಶ್ವನಾಥ್ ತಿಳಿಸಿದರು. rain

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೂರ್ವ ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರು ಈಗಾಗಲೇ ಬಿತ್ತನೆ ಮಾಡಲು ಭೂಮಿಯನ್ನು ಹದ ಮಾಡಿಕೊಂಡು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿದ್ದಾರೆ," ಎಂದರು.

"ಈ ವರ್ಷವೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಜೊತೆಗೆ ಅಗತ್ಯ ರಸಗೊಬ್ಬರಗಳ ಸಮರ್ಪಕ ವಿತರಣೆಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ," ಎಂದು ತಿಳಿಸಿದರು.

ಖಡಕ್ ಎಚ್ಚರಿಕೆ

ಕಳಪೆ ಬೀಜ ವಿತರಣೆ, ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಅಥವಾ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು. ರೈತರಿಗೆ ಕಡ್ಡಾಯವಾಗಿ ಡಿಬಿಟಿ (DBT) ಮೂಲಕ ಯೂರಿಯಾ ಗೊಬ್ಬರವನ್ನು ವಿತರಣೆ ಮಾಡಿ ಅಧಿಕೃತ ಬಿಲ್‌ಗಳನ್ನು ನೀಡಲು ಸೂಚಿಸಲಾಗಿದೆ.

ಅನಧಿಕೃತ ಬೀಜ ಖರೀದಿಸಬೇಡಿ

"ತಾಲೂಕಿನ ರೈತರು ಯಾವುದೇ ಕಾರಣಕ್ಕೂ ಬಿಡಿಯಾದ (ಲೂಸ್) ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಅಧಿಕೃತ ಮಾರಾಟಗಾರರಿಂದಲೇ ಬಿಲ್‌ಗಳನ್ನು ಪಡೆದು ಉತ್ತಮ ಗುಣಮಟ್ಟದ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಬಳಕೆ ಮಾಡಬೇಕು. ತಾಲೂಕಿನಲ್ಲಿ ಯಾವುದೇ ಅನಧಿಕೃತ ಬಿಡಿ ಬಿತ್ತನೆ ಬೀಜ ದಾಸ್ತಾನು ಹಾಗೂ ಮಾರಾಟ ಮಾಡುವವರು ಕಂಡುಬಂದಲ್ಲಿ ತಕ್ಷಣ ಈ ಕುರಿತು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು," ಎಂದು ಕೋರಿದರು.

ದಾಸ್ತಾನು ಸಮರ್ಪಕ

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ 6 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತರು ಡಿಬಿಟಿ ಹಾಗೂ ಆಧಾರ್ ಕಾರ್ಡ್‌ಗಳ ವಿವರ ನೀಡಿ ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಬೆಳೆ ವೈವಿಧ್ಯತೆಗೆ ಮನವಿ

ಅವಳಿ ತಾಲೂಕಿನಲ್ಲಿ ರೈತರು ಕೇವಲ ಮೆಕ್ಕೆಜೋಳ ಬೆಳೆಯುವುದರ ಬದಲಾಗಿ ರಾಗಿ, ಜೋಳ, ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳನ್ನು ಹೆಚ್ಚಾಗಿ ಬೆಳೆಯಬೇಕು. ಇದರೊಂದಿಗೆ ನೈಸರ್ಗಿಕ ಕೃಷಿಗೆ ಒತ್ತು ನೀಡಿ, ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.