ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೊ.ಸ. ಪ್ರಸನ್ನ ಕುಮಾರ್ ಮಾತನಾಡಿದರು. ಕಂಪ್ಲಿ ಗುರುರಾಜಾಚಾರ್ಯ, ಡಾ. ಆನಂದತೀರ್ಥಾಚಾರ್ಯ ಸಿ.ಕೆ, ವಾಚಸ್ಪತಿ ಆಚಾರ್ಯ ಕಡೂರು, ರಾಮಚಂದ್ರ ರಾವ್ ಇದ್ದರು. 
ದಾವಣಗೆರೆ

ರಾಯರ ಮಠದ ಸುವರ್ಣ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಬುಧವಾರ ಉದ್ಘಾಟನೆ
  • ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
ದಾವಣಗೆರೆ : ನಗರದ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ‘ಸುವರ್ಣ ಸಂಭ್ರಮ’ಕ್ಕೆ ಚಾಲನೆ ದೊರಕಿದ್ದು, ಫೆ. 25ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನ ಕುಮಾರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರ್ಮಿಕ ಕಾರ್ಯಗಳು, ಪಂಡಿತರ ಪ್ರವಚನ, ಸಾಂಸ್ಕೃತಿಕ ಚಟುವಟಿಕೆಗಳ ಮಾಹಿತಿ ನೀಡಿದರು.
ಬುಧವಾರ ಸಂಜೆ 5ಕ್ಕೆ ಆಗಮಿಸಲಿರುವ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರನ್ನು ಸ್ವಾಗತಿಸಿ ಸರ್ವಜ್ಞಾಚಾರ್ಯ ಸೇವಾ ಸಂಘದಿಂದ ಕರೆತರಲಾಗುವುದು. ನಂತರ ಸುವರ್ಣ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ಮತ್ತು ಶ್ರೀಗಳ ದರ್ಬಾರ್ ನಡೆಯಲಿದೆ ಎಂದು ತಿಳಿಸಿದರು.
ಸುವರ್ಣ ಮಹೋತ್ಸವದ ನೆನಪಿಗಾಗಿ ಶ್ರೀ ಮುಖ್ಯ ಪ್ರಾಣದೇವರಿಗೆ ಹಾಗೂ ರಾಯರಿಗೆ ಸುವರ್ಣ ಕವಚ ಸಮರ್ಪಣೆ ಮಾಡಲು ನಿರ್ಧರಿಸಲಾಗಿದೆ. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ವಾಚಸ್ಪತಿ ಆಚಾರ್ಯ ಕಡೂರು ಮಾತನಾಡಿ, ಸುವರ್ಣ ಮಹೋತ್ಸವದ ಅಂಗವಾಗಿ 7 ದಿನಗಳ ಕಾಲ ದ್ರವ್ಯ, ತಪ, ಯೋಗ, ಸ್ವಾಧ್ಯಾಯ ಮುಂತಾದ ಯಜ್ಞಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗುರುರಾಜಾಚಾರ್ಯ ಕಂಪ್ಲಿ, ಡಾ. ಆನಂದತೀರ್ಥಾಚಾರ್ಯ ಸಿ.ಕೆ. ಮಾತನಾಡಿದರು. ರಾಮಚಂದ್ರ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.

ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ

ಗುರುವಾರ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರಿಂದ, ಫೆ. 20ರಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರಿಂದ, 21ರಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರಿಂದ, 22ರಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ ನಡೆಯಲಿದೆ.
ಫೆ. 23ರಂದು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳು, 24ರಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳು, 25ರಂದು ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳಿಂದ ಸಂಸ್ಥಾನ ಪೂಜೆ ಮತ್ತು ಅನುಗ್ರಹ ಸಂದೇಶ ನೆರವೇರಲಿದೆ. ಶ್ರೀ ಪಲಿಮಾರು ಮಠದ (ಕಿರಿಯ ಪಟ್ಟ) ಶ್ರೀ ವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತರಿರುವರು.