ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಡಾ. ಆನಂದತೀರ್ಥಾಚಾರ್ಯ ಸಿ.ಕೆ. ಮಾತನಾಡಿದರು. ಕಂಪ್ಲಿ ಗುರುರಾಜಾಚಾರ್ಯ, ಕೊ.ಸ. ಪ್ರಸನ್ನ ಕುಮಾರ್, ಎನ್.ಡಿ. ಶ್ರೀನಿವಾಸರಾವ್ ನರಗನಹಳ್ಳಿ ಇದ್ದರು.
- 17ರಿಂದ 25ರ ವರೆಗೆ ಕಾರ್ಯಕ್ರಮ ವೈವಿಧ್ಯ
- ವಿವಿಧ ಮಠಾಧೀಶರ ಸಾನ್ನಿಧ್ಯ
ದಾವಣಗೆರೆ : ಶ್ರೀ ಗುರುರಾಜ ಸೇವಾ ಸಂಘ ಹಾಗೂ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಫೆ. 17ರಿಂದ 25ರ ವರೆಗೆ ‘ಸುವರ್ಣ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯ ಡಾ. ಆನಂದತೀರ್ಥಾಚಾರ್ಯ ಸಿ.ಕೆ. ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 9 ದಿನಗಳ ಕಾಲ ಧಾರ್ಮಿಕ ಕಾರ್ಯಗಳು, ಪಂಡಿತರಿಂದ ಪ್ರವಚನ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದರು.
ಶ್ರೀ ಗುರುರಾಜ ಸೇವಾ ಸಂಘ 1966ರಲ್ಲಿ ಆರಂಭವಾಯಿತು. 1976ರಲ್ಲಿ ಪ್ರತಿಷ್ಠಾಪನೆ ನೆರವೇರಿತು. ಮಠ ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಂಡ ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಫೆ. 18ರಂದು ಸಂಜೆ 5ಕ್ಕೆ ಆಗಮಿಸಲಿರುವ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರನ್ನು ಸ್ವಾಗತಿಸಿ ಸರ್ವಜ್ಞಾಚಾರ್ಯ ಸೇವಾ ಸಂಘದಿಂದ ಕರೆತರಲಾಗುವುದು. ನಂತರ ಸುವರ್ಣ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ಮತ್ತು ಶ್ರೀಗಳ ದರ್ಬಾರ್ ನಡೆಯಲಿದೆ. ಎಂದರು.
ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನ ಕುಮಾರ್ ಮಾತನಾಡಿ, ಮಠದ ವತಿಯಿಂದ ಕರೊನಾ ಸಂದರ್ಭದಲ್ಲಿ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಲಾಯಿತು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ತರಬೇತಿ ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳ್ನು ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು. ಎನ್.ಡಿ. ಶ್ರೀನಿವಾಸರಾವ್ ನರಗನಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.
ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ
ಫೆ. 19ರಂದು ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರಿಂದ, 20ರಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರಿಂದ, 21ರಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರಿಂದ, 22ರಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ ನಡೆಯಲಿದೆ.
ಫೆ. 23ರಂದು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳು, 24ರಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳು, 25ರಂದು ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳಿಂದ ಸಂಸ್ಥಾನ ಪೂಜೆ ಮತ್ತು ಅನುಗ್ರಹ ಸಂದೇಶ ನೆರವೇರಲಿದೆ. ಶ್ರೀ ಪಲಿಮಾರು ಮಠದ (ಕಿರಿಯ ಪಟ್ಟ) ಶ್ರೀ ವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತರಿರುವರು.
ಪಂಡಿತರಿಂದ ಪ್ರವಚನ
ಫೆ. 17 ಮತ್ತು 18ರಂದು ಸಂಜೆ 6ರಿಂದ 7.30ರ ವರೆಗೆ ಬೆಂಗಳೂರಿನ ಪಂಡಿತ ಬ್ರಹ್ಮಣ್ಯಾಚಾರ್ ಅವರಿಂದ ‘ಪ್ರಾತಃ ಸಂಕಲ್ಪ ಗದ್ಯ’ ಕುರಿತು ಪ್ರವಚನ ಹಮ್ಮಿಕೊಳ್ಳಲಾಗಿದೆ.
19ರಂದು ಶ್ರೀ ಗುರುಸಾರ್ವಭೌಮರ 405ನೇ ಪಟ್ಟಾಭಿಷೇಕ ದಿನದ ಅಂಗವಾಗಿ ‘ಶ್ರೀ ರಾಘವೇಂದ್ರ ಸ್ತೋತ್ರ’ ಕುರಿತು ಪಂಡಿತ ವೆಂಕಟಗಿರೀಶಾಚಾರ್ಯ ಎ. ಅವರು, ಶ್ರೀ ರಾಘವೇಂದ್ರ ಮಂಗಳಾಷ್ಟಕ ಕುರಿತು ಪುರಂದರಾಚಾರ್ಯ ಹಯಗ್ರೀವ ಪ್ರವಚನ ನೀಡಲಿದ್ದಾರೆ.
20ರಂದು ಕೃಷ್ಣಾಚಾರ್ಯ ಮಣ್ಣೂರು, ಕು.ಶಿ. ಹರಿದಾಸ ಭಟ್, ವಾಸುದೇವಾಚಾರ್ಯ ಜೆ, 21ರಂದು ಗೋಪಾಲಾಚಾರ್ಯ ಮಣ್ಣೂರು, ಕೃಷ್ಣರಾಜ ಕುತ್ಪಾಡಿ, ಜೆ. ಗೋಪಾಲಕೃಷ್ಣಾಚಾರ್ಯ, 22ರಂದು ರಘೋತ್ತಮಾಚಾರ್ಯ ಉದ್ರಿ, ವ್ಯಾಸನಕೆರೆ ಪ್ರಭಂಜನಾಚಾರ್ಯ, ಹುಲಿರಾಜ್ ಎನ್.ಪಿ, 23ರಂದು ಕಲ್ಲಾಪುರ ಪವಮಾನಾಚಾರ್ಯ, ವೆಂಕಟ ನರಸಿಂಹಾಚಾರ್ಯ, ಕಲ್ಲಾಪುರ ಪವಮಾನಾಚಾರ್ಯ, ಪವಮಾನಾಚಾರ್ಯ ಪಂಚಮುಖಿ, 24ರಂದು ಆಯನೂರು ಮಧುಸೂದನಾಚಾರ್ಯ, ಪ್ರಾಣೇಶಾಚಾರ್ಯ ಕಡೂರು, 25ರಂದು ಸುಧೀಂದ್ರ ಮೂಲಿಮನಿ, ಸತ್ಯನಾರಾಯಣಾಚಾರ್ಯ ಪ್ರವಚನ ನೀಡಲಿದ್ದಾರೆ.
ಸಾಂಸ್ಕೃತಿಕ ಸಿಂಚನ
ಸುವರ್ಣ ಸಂಭ್ರಮ ಅಂಗವಾಗಿ ಪ್ರತಿ ದಿನ ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ. 19ರಂದು ನಮನ ಅಕಾಡೆಮಿಯ ಮಾಧವಿ ಗೋಪಾಲಕೃಷ್ಣ ತಂಡದವರಿಂದ ನೃತ್ಯ ಪ್ರದರ್ಶನ, 20ರಂದು ಮೈಸೂರು ರಾಮಚಂದ್ರಾಚಾರ್ಯ ತಂಡದವರಿಂದ ದಾಸವಾಣಿ, 21ರಂದು ಶ್ರೀ ಕೃಷ್ಣ ಮಿತ್ರ ವೃಂದದಿಂದ ಯಕ್ಷಗಾನ-ಪೌರಾಣಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ.
22ರಂದು ಚೆನ್ನೈ, ಬೆಂಗಳೂರು, ಶಿವಮೊಗ್ಗದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. 23ರಂದು ವಿದ್ವಾನ್ ಎಂ. ದ್ವಾರಕೀಶ್ ಅವರಿಂದ ವೀಣಾ ವಾದನ, 24ರಂದು ಪಂಡಿತ ಆನಂದ್ ಪಾಟೀಲ್ ಅವರಿಂದ ದಾಸ ವಾರಿಧಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುವರ್ಣ ಮಹೋತ್ಸವದ ನೆನಪಿಗಾಗಿ ಶ್ರೀ ಮುಖ್ಯ ಪ್ರಾಣದೇವರಿಗೆ ಹಾಗೂ ರಾಯರಿಗೆ ಸುವರ್ಣ ಕವಚ ಸಮರ್ಪಣೆ ಮಾಡಲು ನಿರ್ಧರಿಸಲಾಗಿದೆ. ಭಕ್ತಾದಿಗಳು ಶಕ್ತ್ಯಾನುಸಾರ ಸೇವೆ ಸಲ್ಲಿಸಲು ಕೋರಲಾಗಿದೆ.