ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ರೈತರ ಪೂರ್ವಭಾವಿ ಸಭೆಯಲ್ಲಿ ರಾಜ್ಯ ರೈತ ಸಂಘದ ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪಗೌಡ, ಕೆ.ಸಿ. ಬಸಪ್ಪ, ಬಸವರಾಜ್, ಕೆ.ಆರ್. ಬಸಪ್ಪ ಅರಬಗಟ್ಟೆ ಇತರರಿದ್ದರು.Farmer 
ದಾವಣಗೆರೆ

ರೈತರ ವಿರುದ್ಧ ಹೋದರೆ ತಕ್ಕ ಪಾಠ ನಿಶ್ಚಿತ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ರಾಜ್ಯಾಧ್ಯಕ್ಷ ಕರಿಬಸಪ್ಪಗೌಡ ಎಚ್ಚರಿಕೆ
  • ಅಹೋರಾತ್ರಿ ಧರಣಿ ಪೂರ್ವಭಾವಿ ಸಭೆ
ಹೊನ್ನಾಳಿ: ಪೊಲೀಸರಿಂದ ಬೂಟಿನೇಟು ಹಾಗೂ ಗೋಲಿ ಬಾರ್ ಮಾಡಿಸಿದ ಸರ್ಕಾರಗಳಿಗೆ ಇತಿಹಾಸದಲ್ಲಿ ರೈತರು ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕರಿಬಸಪ್ಪಗೌಡ ಹೇಳಿದರು.
ಹೊನ್ನಾಳಿ-ನ್ಯಾಮತಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅರ್ಧಕ್ಕೆ ನಿಂತಿ ರುವುದು ಹಾಗೂ ವಿವಿಧ ಇಲಾಖೆಗಳಲ್ಲಿ ರೈತರ ಕೆಲಸಗಳು ವಿಳಂಬವಾಗುತ್ತಿರುವುದನ್ನು ಖಂಡಿಸಿ, ಮುಂದಿನ ಸೋಮವಾರ ಅಥವಾ ಬುಧವಾರ ಹೊನ್ನಾಳಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಹಮ್ಮಿಕೊಳ್ಳಲಿರುವ ಅಹೋರಾತ್ರಿ ಧರಣಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಿಡದಿ ಸಮೀಪದ ಮಂಡೇನಹಳ್ಳಿ ಹಾಗೂ ಬೈರಮಂಗಲ ಬಳಿ ಟೌನ್‌ಶಿಪ್ ಬೇಡ ಎಂದು ರೈತರು ಕಳೆದ 400 ದಿನಗಳಿಂದ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. ರೈತರು ಸ್ವಇಚ್ಛೆಯಿಂದ ಭೂಮಿ ಕೊಟ್ಟರೆ ಮಾತ್ರ ಟೌನ್‌ಶಿಪ್ ಮಾಡುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು, ಈಗ ಏಕಾಏಕಿ ಸರ್ವೇ ಮಾಡಲು ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಇದನ್ನು ವಿರೋಧಿಸಿದ ರೈತ ಮಹಿಳೆಯನ್ನು ಪುರುಷ ಪೊಲೀಸರು ಎಳೆದುಕೊಂಡು ಹೋಗುವ ಸನ್ನಿವೇಶ ರಕ್ತ ಕುದಿಯುವಂತೆ ಮಾಡುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆಯಿಲ್ಲದೆ ನಾಶವಾಗಿವೆ. ಇಂತಹ ದುಸ್ತರ ಪರಿಸ್ಥಿತಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ಮಾಡುವುದು ಯಾರಿಗಾಗಿ? ಸರ್ಕಾರ ತಕ್ಷಣವೇ ಬಿಡದಿ ಬಳಿಯ ಟೌನ್‌ಶಿಪ್ ಯೋಜನೆಯನ್ನು ಕೈಬಿಡಬೇಕು. ರೈತರ ಮೇಲಿನ ಲಾಠಿಚಾರ್ಜ್, ಗುಂಡಿಗೆ ನಾವು ಹೆದರು ವುದಿಲ್ಲ. ಅಂದು ರೈತರ ಮೇಲೆ ಗುಂಡು ಹಾರಿಸಿದ್ದ ಆರ್. ಗುಂಡೂರಾವ್ ಸರ್ಕಾರಕ್ಕೆ ಏನಾಯಿತು ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.
ಹಿಂದಿನ ಸರ್ಕಾರ ಹೊನ್ನಾಳಿ- ನ್ಯಾಮತಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 519 ಕೋಟಿ ರೂ. ಬಿಡುಗಡೆ ಮಾಡಿತ್ತು. ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸ್ಥಗಿತಗೊಂಡಿದೆ. ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಅವರು ಈ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ ಎಂದು ಟೀಕಿಸಿದರು. ರೈತ ಸಂಘದ ತಾಲೂಕಾಧ್ಯಕ್ಷ ಕೆ.ಸಿ. ಬಸಪ್ಪ ಮಾತನಾಡಿ, ಇಡೀ ಕರ್ನಾಟಕ ಬರದಿಂದ ತತ್ತರಿಸುತ್ತಿದ್ದರೂ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ. ರೈತರು ಸಂಕಷ್ಟದಲ್ಲಿದ್ದರೂ ಅವರ ಕಷ್ಟ ಕೇಳಲು ಒಬ್ಬ ಜನಪ್ರತಿನಿಧಿಯೂ ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಬಸವರಾಜ್, ಕೆ.ಆರ್. ಬಸಪ್ಪ ಅರಬಗಟ್ಟೆ ಇತರರಿದ್ದರು.

ಮುಗ್ಧ ರೈತರ ಮೇಲಿನ ಪ್ರಕರಣ ಹಿಂಪಡೆಯಿರಿ

ರೈತರ ಅನುಮತಿ ಇಲ್ಲದೆ ಸರ್ವೇಗೆ ಬಂದ ಅಧಿಕಾರಿಗಳು ಹಾಗೂ ಹಲ್ಲೆ ನಡೆಸಿದ ಪೊಲೀಸರ ಮೇಲೆ ಪ್ರಕರಣ ದಾಖಲಿಸಬೇಕಿದ್ದ ಸರ್ಕಾರ, ಮುಗ್ಧ ರೈತರು ಮತ್ತು ಮಹಿಳೆಯರ ಮೇಲೆ ಕೇಸ್ ಜಡಿದಿದೆ. ತಕ್ಷಣವೇ ಈ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಇಡೀ ರಾಜ್ಯದ ರೈತರು ಸರ್ಕಾರದ ವಿರುದ್ಧ ದಂಗೆ ಏಳಬೇಕಾಗುತ್ತದೆ. ಈಗಾಗಲೇ ಕೆಎಐಡಿಬಿ ಮೂಲಕ ಕನಿಷ್ಠ ಪರಿಹಾರ ನೀಡಿ ವಶಪಡಿಸಿಕೊಂಡಿರುವ ಸಾವಿರಾರು ಎಕರೆ ಜಮೀನುಗಳು ಬರಡಾಗಿ ಬಿದ್ದಿವೆ, ಅಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಉತ್ತರಿಸಿ ಎಂದು ಕರಿಬಸಪ್ಪಗೌಡ ಆಗ್ರಹಿಸಿದರು.