ಆನಗೋಡು ಗ್ರಾಮದಲ್ಲಿ ಮಂಗಳವಾರ ಕಾರ್ಮಿಕರ ಸಂಚಾರಿ ಆರೋಗ್ಯ ಘಟಕಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಚಾಲನೆ ನೀಡಿದರು. ಎಸ್.ಆರ್. ಅರವಿಂದ್, ಡಾ.ಕೆ.ಎನ್. ಕಸ್ತೂರಿ, ರಾಜಶೇಖರ್ ಹಿರೇಮಠ್, ಮುಮ್ತಾಜ್ ಬೇಗಂ, ರಾಜಪ್ಪ, ಆರ್. ಸುಮಲತಾ ಇತರರಿದ್ದರು.
- ಶಾಸಕ ಕೆ.ಎಸ್. ಬಸವಂತಪ್ಪ ಹೇಳಿಕೆ
- ಕಾರ್ಮಿಕರ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ
ಮಾಯಕೊಂಡ: ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಆನಗೋಡು ಗ್ರಾಮದಲ್ಲಿ ಮಂಗಳವಾರ ಕಾರ್ಮಿಕರ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಂಚಾರಿ ಆರೋಗ್ಯ ಘಟಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ ಎಂದರು.
ಶ್ರಮಿಕರ ಆರೋಗ್ಯ ಹಿತದೃಷ್ಟಿಯಿಂದ ವಾಹನಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಗೊಳಿಸಲಾಗಿದ್ದು, ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಎದುರಾದ್ದಲ್ಲಿ ಅವರಿದ್ದಲ್ಲಿಯೇ ವೈದ್ಯರ ಸಮೇತ ಈ ಘಟಕ ಹೋಗಿ ಚಿಕಿತ್ಸೆ ಮತ್ತು ಔಷಧ ನೀಡುತ್ತದೆ. ಕಾರ್ಮಿಕರ ಕಾರ್ಡ್ ಪಡೆದಿರುವವರಿಗೆ ಮೊದಲ ಆದ್ಯತೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ತಾಕೀತು ಮಾಡಿದರು.
ಸಂಚಾರಿ ಆರೋಗ್ಯ ಘಟಕವು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಹೋಗಲಿದ್ದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಇದೇ ವೇಳೆ ಕಾರ್ಮಿಕರಿಗೆ ಕೆಲಸದ ಸುರಕ್ಷತೆ ಸಾಮಗ್ರಿಗಳನ್ನು ವಿತರಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್. ಅರವಿಂದ್, ಸಂಚಾರಿ ಕ್ಲಿನಿಕ್‌ನ ಜಿಲ್ಲಾ ಮೆಡಿಕಲ್ ಅಧಿಕಾರಿ ಡಾ.ಕೆ.ಎನ್. ಕಸ್ತೂರಿ, ಕಾರ್ಮಿಕ ಅಧಿಕಾರಿ ರಾಜಶೇಖರ್ ಹಿರೇಮಠ್, ಮುಮ್ತಾಜ್ ಬೇಗಂ, ರಾಜಪ್ಪ, ಪಿಡಿಒ ಆರ್. ಸುಮಲತಾ, ಮುಖಂಡರಾದ ಕರಿಬಸಪ್ಪ, ಪ್ರಕಾಶ್, ಬಸವರಾಜ್, ರವಿ, ಜಾಕೀರ್, ರಾಜಣ್ಣ ಇತರರಿದ್ದರು.