ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ, ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ. ಎಚ್.ಡಿ. ಮಹೇಶಪ್ಪ, ಡಾ. ಸುನೀಲ್ ಕುಮಾರ್ ಬಿ.ಎಸ್, ಡಾ. ವೀರಭದ್ರಸ್ವಾಮಿ ಬಿ.ಎನ್, ಡಾ. ವೀರಗಂಗಾಧರ ಸ್ವಾಮಿ ಟಿ.ಎಂ. ಇದ್ದರು.
- ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾಹಿತಿ
- 318 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
- ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ದಾವಣಗೆರೆ : ನಗರದ ಜಿಎಂ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಭಾನುವಾರ ನಡೆಯಲಿದ್ದು ಇದರೊಂದಿಗೆ ವಿವಿಯು ಐತಿಹಾಸಿಕ ಮೈಲಿಗಲ್ಲನ್ನು ದಾಖಲಿಸಲಿದೆ ಎಂದು ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟಿಕೋತ್ಸವವು ವಿಶ್ವವಿದ್ಯಾಲಯದ ಮೊದಲ ಪದವಿ ತಂಡದ ಯಶಸ್ವಿ ಶೈಕ್ಷಣಿಕ ಪಯಣವನ್ನು ಸಂಭ್ರಮಿಸುವ ಮಹತ್ವದ ಕ್ಷಣವಾಗಿದೆ ಎಂದು ತಿಳಿಸಿದರು.
ಮೂರು ಸ್ನಾತಕೋತ್ತರ ವಿಭಾಗಗಳ ಒಟ್ಟು 318 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಗುವುದು. ಎಂಬಿಎ ವಿಭಾಗದ 263 ವಿದ್ಯಾರ್ಥಿಗಳು, ಎಂಸಿಎ ವಿಭಾಗದ 44 ಹಾಗೂ ಎಂಕಾಂ ವಿಭಾಗದ 11 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಜಿಎಂಯು ಕ್ಯಾಂಪಸ್‌ನ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನಿಲ್ ಕುಮಾರ್ ಬಿ.ಎಸ್, ಉಪ ಕುಲಸಚಿವರು (ಮೌಲ್ಯಮಾಪನ), ಡೀನ್‌ಗಳು, ನಿರ್ದೇಶಕರು ಹಾಗೂ ಹಿರಿಯ ಅಧ್ಯಾಪಕರು ಉಪಸ್ಥಿತರಿರಲಿದ್ದಾರೆ.
ನಿರ್ವಹಣಾ ಮಂಡಳಿ, ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಸಮಿತಿ ಹಾಗೂ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ ಸೇರಿ ವಿಶ್ವವಿದ್ಯಾಲಯದ ಶಾಸನಬದ್ಧ ಮತ್ತು ಆಡಳಿತಾತ್ಮಕ ಮಂಡಳಿಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್, ಉಪ ಕುಲಸಚಿವ (ಮೌಲ್ಯಮಾಪನ) ಡಾ. ವೀರಭದ್ರಸ್ವಾಮಿ ಬಿ.ಎನ್, ಮಾರ್ಕೆಟಿಂಗ್ ಮತ್ತು ಪ್ರಮೋಷನ್ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ ಸುದ್ದಿಗೋಷ್ಠಿಯಲ್ಲಿದ್ದರು.
ಬರಲಿವೆ ಹೊಸ ಕೋರ್ಸ್
ಕೃಷಿ ತಂತ್ರಜ್ಞಾನದಲ್ಲಿ ಎಂಟೆಕ್ ಹಾಗೂ ಸೆಮಿಕಂಡಕ್ಟರ್ ಎಂಟೆಕ್ ಸೇರಿ ಹಲವು ವಿನೂತನ ಕೋರ್ಸ್‌ಗಳನ್ನು ಮುಂಬರುವ ದಿನಗಳಲ್ಲಿ ಆರಂಭಿಸುವ ಉದ್ದೇಶವಿದೆ ಎಂದು ಕುಲಪತಿ ಡಾ. ಶಂಕಪಾಲ್ ತಿಳಿಸಿದರು.
ಫಿಜಿಯೋಥೆರಪಿ ಒಳಗೊಂಡಂತೆ ಆರೋಗ್ಯ ಕ್ಷೇತ್ರ ಮತ್ತು ಜೈವಿಕ ತಂತ್ರಜ್ಞಾನ ವಿಷಯದಲ್ಲೂ ಹಲವು ಕೋರ್ಸ್ ಆರಂಭಿಸುವ ಚಿಂತನೆಯಿದೆ ಎಂದು ಹೇಳಿದರು.
2023ರ ಸೆಪ್ಟೆಂಬರ್‌ನಲ್ಲಿ ವಿವಿ ಆರಂಭವಾಯಿತು. ಪ್ರಸ್ತುತ 9 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಖ್ಯೆಯನ್ನು 15 ಸಾವಿರಕ್ಕೆ ಹೆಚ್ಚಿಸುವ ಉದ್ದೇಶವಿದೆ. ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಬ್ಲಾಕ್ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.
ಎಂಬಿಎ ವಿಭಾಗದ 192, ಎಂಸಿಎ ವಿಭಾಗದ 35 ಹಾಗೂ ಎಂಕಾಂ ವಿಭಾಗದ 5 ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿವೆ.