- ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ
- ಮೋಸ ಹೋದ ಮಹಿಳೆ
ದಾವಣಗೆರೆ : ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಉಡುಗೊರೆ ಕಳುಹಿಸುವ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 47.85 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ವಿದ್ಯಾನಗರದ ನಿವಾಸಿಯೊಬ್ಬರು ವಂಚನೆಗೆ ಒಳಗಾದವರು. ಇವರಿಗೆ ಕಳೆದ ಅಕ್ಟೋಬರ್‌ನಲ್ಲಿ ಫೇಸ್‌ಬುಕ್‌ನಲ್ಲಿ ಲಂಡನ್ ಮೂಲದ ಡಾ. ನೀಲ್ ಆಶ್ಲೇ ಎಂಬ ವ್ಯಕ್ತಿ ಪರಿಚಯವಾಗಿದ್ದ. ತಾನು ಸ್ಕಾಟ್‌ಲೆಂಡ್‌ನಲ್ಲಿ ವೈದ್ಯನಾಗಿದ್ದು, ಪತ್ನಿ ಮೃತಪಟ್ಟಿರುವುದಾಗಿ ಹೇಳಿ ಮಹಿಳೆಯ ವಿಶ್ವಾಸ ಗಳಿಸಿದ್ದ. ತನ್ನ ಮಗನ ಜನ್ಮದಿನದ ಅಂಗವಾಗಿ ಹಾಗೂ ಸಹಾಯ ಮಾಡುವ ಉದ್ದೇಶದಿಂದ ಲಂಡನ್‌ನಿಂದ ಬೆಲೆಬಾಳುವ ಉಡುಗೊರೆಗಳನ್ನು ಕಳುಹಿಸಿಕೊಡುವುದಾಗಿ ನಂಬಿಸಿದ್ದ.
ಅ. 17ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು, ತಾವು ದೆಹಲಿ ವಿಮಾನ ನಿಲ್ದಾಣದಿಂದ ಮಾತನಾಡುತ್ತಿರುವುದಾಗಿ ಹೇಳಿ, ನಿಮಗೊಂದು ಗಿಫ್ಟ್ೃ ಬಾಕ್ಸೃ್ ಬಂದಿದೆ ಎಂದು ನಂಬಿಸಿದ್ದಾರೆ. ಅದರ ಕ್ಲಿಯರೆನ್ಸ್ ವೆಚ್ಚವಾಗಿ ಮೊದಲು 35 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಪಡೆದುಕೊಂಡಿದ್ದಾರೆ.
ಗಿಫ್ಟ್ೃ ಬಾಕ್ಸ್‌ನಲ್ಲಿ ವಿದೇಶಿ ಕರೆನ್ಸಿ, ಡಾಲರ್ ಹಾಗೂ ಬೆಲೆಬಾಳುವ ಕೈಗಡಿಯಾರಗಳಿವೆ. ಇವುಗಳನ್ನು ಪಡೆಯಲು ದಂಡ ಪಾವತಿಸಬೇಕು, ಆರ್‌ಬಿಐ ಶುಲ್ಕ, ಆದಾಯ ತೆರಿಗೆ ಇನ್ನಿತರ ಕಾರಣಗಳನ್ನು ನೀಡಿ ಅಕ್ಟೋಬರ್‌ನಿಂದ ಡಿಸೆಂಬರ್ 31ರ ವರೆಗೆ ಮಹಿಳೆಯ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 47.85 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.