Crime Crime
ದಾವಣಗೆರೆ

ಮಗನನ್ನು ಜೈಲಿಂದ ಬಿಡಿಸಿದ್ದೇ ತಾಯಿಯ ಪ್ರಾಣಕ್ಕೆ ಮುಳುವು

ಜಾಮೀನು ಕೊಡಿಸಲು ಮನೆ ಮಾರಾಟ ಮಾಡಿದ್ದ ಬುಳ್ಳಮ್ಮ

ದಾವಣಗೆರೆ: ಕೊಲೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬುದು ಆ ತಾಯಿಗೂ ಗೊತ್ತು. ಆದರೆ ಮಗ ಕೊಲೆ ಮಾಡಿ ಜೈಲಿನಲ್ಲಿ ಇರುವುದನ್ನು ನೋಡಿಕೊಂಡು ಇರಲು ಸಾಧ್ಯವಾಗಲಿಲ್ಲ. ಜಾಮೀನು ಕೊಡಿಸಲು ಕೋರ್ಟಿಗೆ ಹೋಗಬೇಕೆಂದರೆ ಕೈಯಲ್ಲಿ ಹಣ ಇಲ್ಲ. ಮಗನಿಗಿಂತ ಆಸ್ತಿ ಹೆಚ್ಚಲ್ಲ ಎಂದು ತಾಯಿ, ತಾನು ವಾಸವಾಗಿದ್ದ ಮನೆಯನ್ನೇ ಮಾರಾಟ ಮಾಡಿ ಕೋರ್ಟಿನಲ್ಲಿ ಹೋರಾಡಿ ಜಾಮೀನು ಕೊಡಿಸುತ್ತಾರೆ. ಇದನ್ನೇ ಹೆತ್ತ ಕರುಳು ಎನ್ನೋದು. ಆದರೆ, ಎಂಟು ವರ್ಷಗಳಿಂದ ಜೈಲಿನಲ್ಲಿದ್ದವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ ತಾಯಿಗೆ ಮಗ ಕೊಟ್ಟ ಉಡುಗೊರೆ ಸಾವು!

ಕುಡಿಯಲು ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ನೆಪದಲ್ಲಿ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದಲ್ಲಿ ಗುರುವಾರ ಹೆತ್ತವ್ವನನ್ನೇ ಕೊಂದ ಹನುಮಂತ (32) ಎಂಬ ವ್ಯಕ್ತಿಯ ಹಿನ್ನೆಲೆ ಇದು.

ವಿಜಯನಗರ ಜಿಲ್ಲೆಯ ಹರಕನಾಳ್ ಗ್ರಾಮದ ಬುಳ್ಳಮ್ಮ ಅವರಿಗೆ 9 ಜನ ಹೆಣ್ಣು ಮಕ್ಕಳ ನಂತರ ಗಂಡು ಸಂತಾನ ಆಗಿತ್ತು. ವಂಶೋದ್ಧಾರಕ ಹುಟ್ಟಿದ ಎಂದು ಆಗ ಸಂಭ್ರಮಿಸಿದ್ದ ತಾಯಿ ಮಗನಿಗೆ ಆಂಜನೇಯನ ಹೆಸರನ್ನಿಟ್ಟಿದ್ದರು. ಬೆಳೆದ ನಂತರ ಮಗ ಕೊಟ್ಟಿದ್ದು ಬರೀ ನೋವು ಮಾತ್ರ.

ಕುಡಿಯಲು ಹಣ ಕೊಡಲಿಲ್ಲ ಎನ್ನುವ ಸಿಟ್ಟಿನಲ್ಲೇ ಹರಪನಹಳ್ಳಿಯಲ್ಲಿ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪದ ಮೇಲೆ ಹನುಮಂತ ಎಂಟು ವರ್ಷಗಳಿಂದ ಜೈಲಿನಲ್ಲಿದ್ದ . ಮಗ ಜೈಲಿನಲ್ಲಿ ಇರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ತಾಯಿ ಬುಳ್ಳಮ್ಮ, ಹರಕನಾಳ್ ಗ್ರಾಮದಲ್ಲಿದ್ದ ಮನೆ ಮಾರಿ, ಈ ಹಣದಲ್ಲೇ ಕಾನೂನು ಹೋರಾಟ ಮೂರು ತಿಂಗಳ ಹಿಂದೆ ಮಗನಿಗೆ ಜಾಮೀನು ಕೊಡಿಸಿದ್ದರು. ಮನೆ ಮಾರಾಟ ಮಾಡಿದ ನಂತರ ಇರಲು ನೆಲೆ ಇಲ್ಲದೆ ಹರಕನಾಳ್ ಗ್ರಾಮದಿಂದ ದೊಡ್ಡಘಟ್ಟದಲ್ಲಿರುವ ಹೆಣ್ಣು ಮಕ್ಕಳ ಮನೆಗೆ ಬಂದು ಇದ್ದರು. ಜಾಮೀನು ಮೇಲೆ ಹೊರಬಂದ ಹನುಮಂತ ಪೂನಾ ಬೆಂಗಳೂರು ಹೊರವಲಯ ಹೆದ್ದಾರಿಯಲ್ಲಿ ಈಚೆಗಷ್ಟೇ ಆರಂಭವಾಗಿರುವ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ತಾಯಿ ಬುಳ್ಳಮ್ಮ ಪದೇಪದೆ ಮಗನಿಗೆ ಫೋನ್ ಮಾಡಿ, ಬೇಗ ಮನೆ ಮಾಡಿ ನನ್ನನ್ನು ಕರೆದುಕೊಂಡು ಹೋಗು, ಎಷ್ಟು ದಿನ ಹೆಣ್ಣುಮಕ್ಕಳ ಮನೆಯಲ್ಲಿ ಇರಬೇಕು. ಇಲ್ಲಿಗೆ ಬಂದು ತುಂಬಾ ದಿನಗಳಾದವು ಎಂದು ಹೇಳುತ್ತಿದ್ದರು.

ಎರಡು ದಿನಗಳ ಹಿಂದೆ ಹನುಮಂತ ದೊಡ್ಡಘಟ್ಟಕ್ಕೆ ಹೋದಾಗ, ಮಗ ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ ಎಂದು ತಾಯಿ ಬುಳ್ಳಮ್ಮ ಭಾವಿಸಿದ್ದರು. ಆದರೆ ಅವನು ತಾಯಿ ತನ್ನೊಂದಿಗೆ ಇರಲಿ ಎಂದು ಅವರನ್ನು ಕರೆದುಕೊಂಡು ಬರಲು ಹೋಗಿರಲಿಲ್ಲ. ಹನುಮಂತನ ಮೂವರೂ ಅಕ್ಕಂದಿರು ದೊಡ್ಡಘಟ್ಟದಲ್ಲೇ ಇದ್ದಾರೆ. ಮಲಗಿದ್ದ ತಾಯಿ ಬಳಿ ಹನುಮಂತ ಹೋಗಿ ಕುಡಿಯಲು ಹಣ ಕೇಳಿದ್ದಾನೆ.

ಜೈಲಿನಿಂದ ಬಿಡಿಸಿಕೊಂಡು ಬರಲು ಮನೆಯನ್ನೇ ಮಾರಾಟ ಮಾಡಿದ್ದ ತಾಯಿಗೆ, ಕುಡಿಯಲು ಹಣ ಕೊಡುವುದು ದೊಡ್ಡ ವಿಷಯವೇನಾಗಿರಲಿಲ್ಲ. ಆದರೆ ಕೆಟ್ಟ ಚಟ ಎಂಬ ಕಾರಣಕ್ಕೆ ದುಡ್ಡು ಕೊಡಲು ನಿರಾಕರಿಸಿದ್ದರು. ಅಷ್ಟರಲ್ಲಾಗಲೇ ಕುಡಿದಿದ್ದ ಹನುಮಂತ, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಅಮಲಿನಲ್ಲಿ ತಾಯಿಯನ್ನೇ ಕೊಂದಿದ್ದಾನೆ. ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವ್ವನನ್ನು ಕೊಂದ ವಿಷಯ ಯಾರಿಗೂ ಹೇಳಬೇಡ ಎಂದು ಸಹೋದರಿಗೂ ಬೆದರಿಕೆ ಹಾಕಿದ್ದಾನೆ.

ಕ್ರಿಮಿನಲ್ ಹಿನ್ನೆಲೆ

ಹನುಮಂತನಿಗೆ ಒಳ್ಳೆಯವರ ಸಹವಾಸವೇ ಇರಲಿಲ್ಲ. ಕುಡುಕರು, ಪುಂಡ-ಪೋಕರಿಗಳೇ ಅವನ ಸ್ನೇಹಿತರು. ಸ್ನೇಹಿತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ 8 ವರ್ಷಗಳಿಂದ ಜೈಲಿನಲ್ಲಿದ್ದ. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದ್ದು, ತೀರ್ಪು ಬಂದಿಲ್ಲ. ಕೋಟಾ ನೋಟು ಪ್ರಕರಣದಲ್ಲೂ ಆರೋಪಿಯಾಗಿದೂ, ಈ ಪ್ರಕರಣ ಕೂಡ ವಿಚಾರಣೆ ಹಂತದಲ್ಲಿದೆ. ಈಗ ತಾಯಿಯನ್ನು ಕೊಂದು ಮತ್ತೆ ಜೈಲಿಗೆ ಹೋಗಿದ್ದಾನೆ. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಹನುಮಂತನಿಗೆ ತಾಯಿ ಬುಳ್ಳಮ್ಮ ಜಾಮೀನು ಕೊಡಿಸದೆ ಇದ್ದರೆ ಅವರ ಜೀವವಾದರೂ ಉಳಿಯುತ್ತಿತ್ತು.