ಸೇವಾಲಾಲ್ ದೇವಾಲಯದ ಮುಖ್ಯದ್ವಾರ.Sewalal 
ದಾವಣಗೆರೆ

ಸೇವಾಲಾಲ್ ಜಯಂತ್ಯುತ್ಸವಕ್ಕೆ ಸಜ್ಜು

ಪ್ರಮುಖ ಮುಖ್ಯಾಂಶಗಳು

  • ನಾಳೆಯಿಂದ 3 ದಿನಗಳ ಕಾಲ ಕಾರ್ಯಕ್ರಮ
  • ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ
ಷಣ್ಮುಖ.ಬಿ.ಈ. ನ್ಯಾಮತಿ
ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಭಾರತದ ಪ್ರತಿ ಸಮುದಾಯಕ್ಕೂ ತನ್ನದೇ ಆದ ವಿಶೇಷತೆ ಇದೆ. ಅಂತೆಯೇ ಬಂಜಾರ(ಬಣಜಾರ್) ಸಮುದಾಯವು ಕಲೆ, ಸಂಸ್ಕೃತಿ ಮತ್ತು ಆಚರಣೆಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ.
ಈ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲರು ಜನಿಸಿದ ಪುಣ್ಯಭೂಮಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಫೆ.13ರಿಂದ ಮೂರು ದಿನಗಳ ಕಾಲ ಜಯಂತ್ಯುತ್ಸವ ನಡೆಯಲಿದೆ.
ಇಲ್ಲಿಗೆ ಕರ್ನಾಟಕವಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಲಕ್ಷಾಂತರ ಭಕ್ತರು ಪ್ರತಿ ವರ್ಷ ಮಾಲಾಧಾರಿಗಳಾಗಿ ತಂಡೋಪತಂಡವಾಗಿ ಕಾಲ್ನಡಿಗೆಯಲ್ಲಿ ಬರುತ್ತಾರೆ. ಇಲ್ಲಿ ಮಾಲೆ ವಿಸರ್ಜಿಸುವ ಮೂಲಕ ವ್ರತ ಸಂಪೂರ್ಣಗೊಳಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ.
ವರ್ಷದಿಂದ ವರ್ಷಕ್ಕೆ ಕ್ಷೇತ್ರವು ಹೆಚ್ಚು ಪ್ರಸಿದ್ಧಿ ಹೊಂದುತ್ತಿದ್ದು, ಎಲ್ಲ ಧರ್ಮ, ಜಾತಿಯ ಜನಾಂಗದವರು ಕುಟುಂಬ ಸಮೇತರಾಗಿ ಬಂದು ಸೇವಾಲಾಲರ ಹಾಗೂ ಮರಿಯಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಫೆ.13 ಕಾಟಿ ಪೂಜೆ, 14ಕ್ಕೆ ಕುಂಭಾಭಿಷೇಕ, 15 ಭೋಗ್ ಕಾರ್ಯಕ್ರಮ ನಡೆಸಲಾಗುತ್ತದೆ.

ಪೌರಾಣಿಕ ಹಿನ್ನೆಲೆ

ಸೇವಾ ಲಾಲರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಮಾತೆ ದಂಪತಿ ಪುತ್ರನಾಗಿ ಜನಿಸಿದರು. ಬಾಲ್ಯದಲ್ಲಿ ಚಿನ್ನಿಕಟ್ಟೆ ಸುತ್ತಮುತ್ತ ಗೋವು ಮೇಯಿಸಿಕೊಂಡು ಬರಲು ಹೋಗುತ್ತಿದ್ದರು. ಆಗ ಸ್ನೇಹಿರೊಂದಿಗೆ ಆಟವಾಡುತ್ತ ಬಂಡೆಕಲ್ಲುಗಳನ್ನು ನಗಾರಿಯನ್ನಾಗಿ ಮಾಡಿಕೊಂಡು ಬಾರಿಸುತ್ತಿದ್ದರು, ಕೆಸರನ್ನು ಹುಗ್ಗಿಯನ್ನಾಗಿ ಹಾಗೂ ನೀರನ್ನು ತುಪ್ಪವನ್ನಾಗಿ ಪರಿವರ್ತಿಸುತ್ತಿದ್ದರು. ಬಸವಣ್ಣ, ಬುದ್ಧ, ಕಬೀರರಂತೆ ಮಾನವತಾವಾದಿಯಾಗಿದ್ದ ಇವರು ಸಮುದಾಯಕ್ಕೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಬೋಧಿಸಿದರು.
ಒಮ್ಮೆ ಸ್ನೇಹಿತರು ಸೇವಾಲರನ್ನು ಪರೀಕ್ಷಿಸಲೆಂದು ಹುಡುಗನಿಗೆ ಹುಡುಗಿಯ ವೇಷ ಹಾಕಿಸಿ ಅವರ ಬಳಿ ಬಂದರು. ಈಕೆಗೆ ಮದುವೆಯಾಗಿ 12 ವರ್ಷ ಕಳೆದಿದೆ. ಆದರೆ ಮಕ್ಕಳಾಗಿಲ್ಲ. ನಿಮ್ಮ ದಿವ್ಯಶಕ್ತಿಯಿಂದ ಮಕ್ಕಳಾ ಗುವಂತೆ ಆಶೀರ್ವದಿಸಿ ಎಂದು ಕೋರಿದರು. ಸ್ನೇಹಿತರ ಈ ಕುತಂತ್ರವನ್ನು ಅರಿತ ಸೇವಾಲಾಲರು ಮಕ್ಕಳಾಗುವಂತೆ ಮತ್ತು ಈಕೆಯ ವಂಶವು ಬೆಳೆಯಲಿ ಎಂದು ಆಶೀರ್ವದಿಸಿದರು.
ಈ ಮಾತನ್ನು ಲೇವಡಿ ಮಾಡುತ್ತ ಮನೆಯತ್ತ ಸಾಗುತ್ತಿದ್ದ ಸೇಹಿತರಿಗೆ ಆಘಾತವಾಗಿತ್ತು. ಹುಡುಗಿಯ ವೇಷ ಧರಿಸಿದ್ದ ಹುಡುಗ ನಿಜವಾಗಿಯೂ ಹುಡುಗಿಯಾಗಿ ಪರಿವರ್ತನೆಗೊಂಡಿದ್ದ. ಗಾಬರಿ ಯಾದ ಸ್ನೇಹಿತರು ಮತ್ತೆ ಸೇವಾಲಾಲರ ಬಳಿ ಬಂದು, ತಮ್ಮ ತಪ್ಪನ್ನು ಮನ್ನಿಸಿ ಮೊದಲಿನಂತೆ ಮಾಡಲು ಕೋರಿದರು. ಅದಕ್ಕೆ ಸೇವಾಲಾಲರು, ಒಮ್ಮೆ ನುಡಿದ ಮಾತು ಹುಸಿಯಾಗದು. ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮರಿಯಮ್ಮ ದೇವಿಯಿಂದ ದೊರೆತ ದಿವ್ಯ ಶಕ್ತಿಯನ್ನು ಅವರು ತಮ್ಮ ಸಮುದಾಯವನ್ನು ಉದ್ಧರಿಸಲು ಬಳಸಿ ಮಹಾರಾಷ್ಟ್ರದ ಪೌರಾಗಢದಲ್ಲಿ ಐಕ್ಯರಾದರು ಎಂಬ ಇತಿಹಾಸ ಇದೆ.

ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಬಾರಿ 3 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಶೌಚಗೃಹ ಸೇರಿ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಫೆ.13ಕ್ಕೆ ಕಾಟಿ ಪೂಜೆಯ ನಂತರ ಸತತ ಮೂರು ದಿನಗಳ ಕಾಲ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಭಕ್ತರು ತಮ್ಮೂರಿನ ದೇವಸ್ಥಾನಗಳಲ್ಲಿಯೇ ಗುರುಸ್ವಾಮಿಗಳ ಸಮ್ಮುಖದಲ್ಲಿ 11, 21 ಅಥವಾ 41 ದಿನಗಳ ಕಾಲ ಕಠಿಣ ವ್ರತಾಚರಣೆಯ ಮಾಲೆ ಧರಿಸಿ ಸೂರಗೊಂಡನಕೊಪ್ಪಕ್ಕೆ ಬಂದು ಮಾಲೆ ವಿಸರ್ಜನೆ ಮಾಡುತ್ತಾರೆ. ಈ ಮೂಲಕ ತಮ್ಮ ದುಶ್ಚಟಗಳನ್ನು ಶಾಶ್ವತವಾಗಿ ತ್ಯಜಿಸುವ ಸಂಕಲ್ಪ ಮಾಡುತ್ತಾರೆ.