ಶ್ರೀ ಹಳದಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. Procession
ದಾವಣಗೆರೆ

ತುಂಗಭದ್ರಾ ನದಿಯಲ್ಲಿ ವಿಸರ್ಜನೆಗೊಂಡ ಗಣೇಶ

50ನೇ ವರ್ಷದ ಹಿಂದೂ ಮಹಾಸಭಾ ಗೌರಿ-ಗಣೇಶ ವಿಸರ್ಜನೆ

ಹೊನ್ನಾಳಿ: ಪಟ್ಟಣದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗೌರಿ-ಗಣೇಶ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ- ಗಣೇಶ ಮೂರ್ತಿಯನ್ನು ಭಾನುವಾರ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳ ಅದ್ಧೂರಿ ಮೆರವಣಿಗೆ ಮೂಲಕ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಗಣೇಶ ವಿಸರ್ಜನೆಯ ಪ್ರಯುಕ್ತ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ನಂತರ ಹಳದಮ್ಮ ದೇವಿ ದೇವಸ್ಥಾನದಿಂದ ಪುಷ್ಪಗಳಿಂದ ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಕಲಾ ಮೇಳಗಳು, ಮಂಗಳವಾದ್ಯಗಳೊಂದಿಗೆ ದುರ್ಗಿಗುಡಿ ಸರ್ಕಲ್, ಮರಳೋಣಿ ರಸ್ತೆ ಮೂಲಕ ಸಾಗಿ ಹಿರೇಮಠ, ಸಂಗೊಳ್ಳಿ ರಾಯಣ್ಣ ವೃತ್ತ, ಪೇಟೆ ಬೀದಿ ಮೂಲಕ ಭಕ್ತ ಸಮೂಹದೊಂದಿಗೆ ನದಿಯವರೆಗೆ ಸಾಗಿತು.

ಹೊನ್ನಾಳಿ ಪಟ್ಟಣ ಸಂಪೂರ್ಣ ಕೇಸರಿಮಯ ವಾಗಿತ್ತು, ಆಂಜನೇಯಸ್ವಾಮಿ, ಭಾರತಮಾತೆ, ಶಿವಾಜಿ ಪ್ರತಿಮೆಯನ್ನು ಪ್ರಮುಖ ವೃತ್ತಗಳಲ್ಲಿ ಇಡಲಾಗಿತ್ತು, ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಮತಿ ರಸ್ತೆಯ ಹಿರೇಕಲ್ಮಠದವರೆಗೆ, ತುಮ್ಮಿಕಟ್ಟೆ ರಸ್ತೆ ಉದ್ದಕ್ಕೂ ವೀರ ಸಾರ್ವಕರ್, ಭಗತ್‌ಸಿಂಗ್, ಚಂದ್ರಶೇಖರ್ ಅಜಾದ್, ವಿಷ್ಣು ದಿಗಂಬರ ಪಲೂಸ್ಕರ್, ಸಂಗೊಳ್ಳಿ ರಾಯಣ್ಣ, ಮದನ್‌ಲಾಲ್ ಧೀಂಗ್ರಾ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳ ಫ್ಲೆಕ್ಸ್ ರಾರಾಜಿಸುತ್ತಿದ್ದವು.

ಡಿವೈಎಸ್ಪಿ ನೇತೃತ್ವ

ಚನ್ನಗಿರಿ ಉಪವಿಭಾಗ ಡಿವೈಎಸ್ಪಿ ರುದ್ರೇಶ್ ಉಜ್ಜನಿಕೊಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಹಾಗೂ ನ್ಯಾಮತಿ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದರು. ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್‌ನ್ನು ಬಲಗೊಳಿಸಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದ ಹಾಗೆ ಗಣೇಶ ವಿಜರ್ಸನಾ ಕಾರ್ಯಕ್ರಮ ಸಾಂಗೋಪಾಂಗವಾಗಿ ನೆರವೇರಿತು.

ಗಣೇಶ ಪ್ರತಿಷ್ಠಾಪನೆಗೆ 50ರ ಸಂಭ್ರಮ

ಹಳದಮ್ಮ ದೇವಸ್ಥಾನದಲ್ಲಿ ಪ್ರತಿವರ್ಷ ಪ್ರತಿಷ್ಠಾಪನೆಗೊಳ್ಳುವ ಹಿಂದೂ ಮಹಾಸಭಾ ಗೌರಿ-ಗಣೇಶ ಸಮಿತಿಗೆ 50 ವರ್ಷ ತುಂಬಿದ್ದರಿಂದ ಸಮಿತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶಿವಮೊಗ್ಗ ಹಾಗೂ ಚಿತ್ರದುರ್ಗದಲ್ಲಿ ನಡೆಯುವ ಬೃಹತ್ ಶೋಭಾಯಾತ್ರೆಯಂತೆ ಹೊನ್ನಾಳಿಯಲ್ಲೂ ಈ ಬಾರಿ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು.

ಡಿಜೆ ಸದ್ದಿಗೆ ಯುವಕರ ಸ್ಟೆಪ್

ಗೌರಿ-ಗಣೇಶ ಮೆರವಣಿಗೆಯಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿತ್ತು, ಯುವಕರು ಹಾಗೂ ಯುವತಿಯರು ಮೆಚ್ಚಿನ ನಟರ ಹಾಡುಗಳಿಗೆ ಸಕತ್ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದರು. ಮಂಗಳೂರಿನ ಚಂಡೆವಾದ್ಯ, ಡೊಳ್ಳು ಕುಣಿತ, ಮಂಗಳವಾದ್ಯ ಹಾಗೂ ವಿವಿಧ ಕಲಾಮೇಳಗಳು ಭವ್ಯ ಶೋಭಾಯಾತ್ರೆಯಲ್ಲಿ ಕಂಡು ಬಂತು. ರಸ್ತೆ ಇಕ್ಕೆಲಗಳಲ್ಲಿ, ಖಾಸಗಿ ಕಟ್ಟಡಗಳ ಮೇಲೆ ಯುವತಿಯರು, ಮಹಿಳೆಯರು, ವೃದ್ಧರು ಬೃಹತ್ ಶೋಭಾಯಾತ್ರೆಯನ್ನು ನೋಡಿ ಕಣ್ತುಂಬಿಕೊಂಡರು. ಯುವತಿಯರು ಸಹ ಗುಂಪುಗುಂಪಾಗಿ ಬಂದು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತ ಡ್ಯಾನ್ಸ್ ಮಾಡಿದರು.