ಚನ್ನಗಿರಿ ತಾಲೂಕಿನ ಬಸವಾಪುರ ಗ್ರಾಮದ ಬಳಿ ಭದ್ರಾ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಗೊಂಡು ಕುಸಿಯುತ್ತಿರುವುದು.connection
- ಬಸವಾಪುರ ಗ್ರಾಮದ ಭದ್ರಾ ನಾಲೆ ಸೇತುವೆ ಕುಸಿತ
- ಜೀವ ಭಯದಲ್ಲಿ ಸಾರ್ವಜನಿಕರ ಸಂಚಾರ
- 3 ಕಿಮೀ ಹೆಚ್ಚುವರಿ ಅಲೆದಾಟ
ಚನ್ನಗಿರಿ: ತಾಲೂಕಿನ ಬಸವಾಪುರ ಗ್ರಾಮದ ಬಳಿ ಭದ್ರಾನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸಂಪರ್ಕ ಸೇತುವೆಯು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದಾಗಿ ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಹಾಗೂ ವಾಹನ ಸವಾರರು ಭಯಭೀತರಾಗಿದ್ದಾರೆ. connection
ತಾಲೂಕಿನ ದೇಗರದಳ್ಳಿ, ಗುರುರಾಜಪುರ, ಲಕ್ಷ್ಮಯ್ಯ ಕ್ಯಾಂಪ್ ಮತ್ತು ಬಸವಾಪುರ ಗ್ರಾಮಗಳ ಜನರ ಸುಗಮ ಸಂಚಾರಕ್ಕಾಗಿ 1991ರಲ್ಲಿ ವಿಶೇಷ ಅನುದಾನದಡಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ಮೂರು ದಶಕಗಳಿಂದ ಉತ್ತಮ ಸ್ಥಿತಿಯಲ್ಲಿದ್ದ ಈ ಸೇತುವೆಯ ಪಿಲ್ಲರ್ ಹಾಗೂ ತಳಭಾಗವು ಕಳೆದ ಎರಡು ದಿನಗಳಿಂದ ಕುಸಿಯಲು ಪ್ರಾರಂಭವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಸಂಪೂರ್ಣ ನೆಲಸಮವಾಗುವ ಹಂತ ತಲುಪಿದೆ.
ಈ ಭಾಗದ ನಾಲ್ಕು ಪ್ರಮುಖ ಗ್ರಾಮಗಳಿಗೆ ಕೊಂಡಿಯಂತಿರುವ ಈ ಸೇತುವೆಯನ್ನು ಆಶ್ರಯಿಸಿ 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ನೂರಾರು ರೈತ ಕುಟುಂಬಗಳು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ನಿತ್ಯ ಈ ಸೇತುವೆಯನ್ನೇ ನೆಚ್ಚಿಕೊಂಡಿವೆ. ಸ್ಥಳೀಯರು ಆಸ್ಪತ್ರೆ, ಶಾಲೆ-ಕಾಲೇಜು, ವ್ಯಾಪಾರ ಹಾಗೂ ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಚನ್ನಗಿರಿ ಪಟ್ಟಣ ಅಥವಾ ಶಿವಮೊಗ್ಗ ನಗರಕ್ಕೆ ಹೋಗಬೇಕಾದರೆ ಈ ಸೇತುವೆಯೇ ಮುಖ್ಯ ದಾರಿಯಾಗಿದೆ.
ಒಂದು ವೇಳೆ ಈ ಸೇತುವೆ ಸಂಪೂರ್ಣವಾಗಿ ಕುಸಿದರೆ, ಗ್ರಾಮಸ್ಥರು ಸಿದ್ದಾಪುರ ಅಥವಾ ಗುರುರಾಜಪುರ ಗ್ರಾಮದ ಮಾರ್ಗವಾಗಿ 3ಕಿ.ಮೀ.ಗೂ ಅಧಿಕ ದೂರ ಬಳಸಿ ಸಂಚರಿಸಬೇಕಾಗುತ್ತದೆ. ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ತಲೆಹಾಕಿಲ್ಲ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ, ಯಾರೊಬ್ಬರೂ ಸ್ಥಳ ಪರಿಶೀಲನೆಗೆ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಬಸವಾಪುರ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಜನ ಜೀವನ ಮತ್ತು ಕೃಷಿ ಚಟುವಟಿಕೆಗಳು ಈ ಭದ್ರಾ ನಾಲೆಯನ್ನೇ ಅವಲಂಬಿಸಿವೆ. ಹೋರಾಟದ ಫಲವಾಗಿ ಮಂಜೂರಾದ ಈ ಸೇತುವೆ ಬಿದ್ದರೆ ಪಟ್ಟಣದೊಂದಿಗಿನ ನಮ್ಮ ಸಂಪರ್ಕವೇ ಕಡಿದುಹೋಗುತ್ತದೆ. ಅಧಿಕಾರಿಗಳು ತಕ್ಷಣವೇ ಸೇತುವೆಯನ್ನು ದುರಸ್ತಿಪಡಿಸಬೇಕು ಅಥವಾ ಹೊಸ ಸೇತುವೆ ನಿರ್ಮಿಸಿಕೊಡಬೇಕು.
— ರಂಗನಾಥ್, ರೈತ ಮುಖಂಡ, ಬಸವಾಪುರ.