ಸಾವಯವ ಕೃಷಿ ಪದ್ಧತಿಯಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಅಡಕೆ ತೋಟ.organic farming 
ದಾವಣಗೆರೆ

ರಾಸಾಯನಿಕದ ಹಂಗು ಮರೆತು ಸಾವಯವ ಕೃಷಿಯಲ್ಲಿ ಸಾಧನೆ organic

ಪ್ರಮುಖ ಮುಖ್ಯಾಂಶಗಳು

  • 10 ಎಕರೆ ತೋಟದಲ್ಲಿ ಸಮಗ್ರ ಬೆಳೆ ಪದ್ಧತಿ
  • ವಾರ್ಷಿಕ 18 ಲಕ್ಷ ಆದಾಯ!
  • ಕೃಷಿ ಇಲಾಖೆ ಕಾರ್ಯಾಗಾರದಿಂದ ತರಬೇತಿ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೈತರು ಕೀಟ ನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸಿ ರಾಸಾಯನಿಕಯುಕ್ತ ಕೃಷಿ ಪದ್ಧತಿಗೆ ವಾಲುತ್ತಿದ್ದಾರೆ.
ಆದರೆ, ಇದಕ್ಕೆ ಅಪವಾದ ಎಂಬಂತೆ ದಾವಣಗೆರೆ ಜಿಲ್ಲೆಯ ಅನಗೋಡು ಹೋಬಳಿ ಹೆಬ್ಬಾಳು ಬಡಾವಣೆಯ ಪ್ರಗತಿಪರ ರೈತ ಆರ್.ವಿ. ಅಶೋಕ್ ಅವರು ಕಳೆದ 12 ವರ್ಷಗಳಿಂದ ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ತಮ್ಮ ಕೃಷಿ ಮತ್ತು ತೋಟಗಾರಿಕೆಯಿಂದ ಉತ್ತಮ ಲಾಭಗಳಿಸಿ ಕೃಷಿಯು ಲಾಭದಾಯಕ ಎಂದು ತೋರಿಸಿಕೊಟ್ಟಿದ್ದಾರೆ.
10 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. 5 ಎಕರೆಯಲ್ಲಿ ಅಡಕೆ ತೋಟವಿದ್ದು, ಸುಮಾರು 3000 ಅಡಕೆ ಮರಗಳು ಫಸಲಿಗೆ ಬಂದಿವೆ. 2.5 ಎಕರೆಯಲ್ಲಿ ಏಲಕ್ಕಿ ಉಳಿದ 2.5 ಎಕರೆಯಲ್ಲಿ ಮಳೆಗಾಲದ ಮೆಕ್ಕೆಜೋಳ ಬೆಳೆಯುತ್ತಾರೆ. ಅಡಕೆ ತೋಟದಲ್ಲಿ ಮಿಶ್ರಬೆಳೆಯಾಗಿ ಅನೇಕ ಬಗೆಯ ಗಿಡಗಳನ್ನು ಬೆಳೆದಿದ್ದಾರೆ. ಅವುಗಳಲ್ಲಿ 500 ತೆಂಗು, 1000 ಬಾಳೆ, 50 ಹಲಸು, 30 ಮಾವು, 2000 ಕರಿಬೇವು, 500 ಸಾಗವಾನಿ (ತೇಗ), 300 ಬಟರ್ ಫ್ರೂಟ್, 1500 ಮಹಾಗನಿ, 150 ಬೇವು, 70 ರಾಮಫಲ, 100 ಸೀತಾಫಲ, 10 ನೇರಳೆ ಮತ್ತು 100 ಸೇಬು ಗಿಡಗಳು ಪ್ರಮುಖವಾಗಿವೆ. ಇದರ ಜತೆಗೆ, ಅಡಕೆ ಮರಗಳ ಬುಡದಲ್ಲಿ ಕಾಳುಮೆಣಸು, ಜಾಯಿಕಾಯಿ ಸೇರಿ ಹಲವು ಬೆಳೆಗಳನ್ನು ಅಂತರ್‌ಬೆಳೆಯಾಗಿ ಬೆಳೆದಿದ್ದಾರೆ.
ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ ಸಾವಯವ ಪದ್ಧತಿಯನ್ನು ಬಲಪಡಿಸಲು ಜೀವಾಮೃತ, ಕೋಳಿ, ಕುರಿ ಮತ್ತು ಹಸುವಿನ ಸಗಣಿ ಗೊಬ್ಬರವನ್ನು ಬಳಸುತ್ತಾರೆ. ಅಲ್ಲದೆ ಪ್ರತ್ಯೇಕವಾಗಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು, ಅದರಿಂದ ತಯಾರಿಸಿದ ಗೊಬ್ಬರವನ್ನು ಅಡಕೆ ಮರಗಳಿಗೆ ನೀಡುತ್ತಾರೆ. ಹಸುಗಳ ಗಂಜಲ ಹಾಗೂ 2-3 ಕೆಜಿ ಬೆಲ್ಲ ಮಿಶ್ರಣ ಮಾಡಿ ಕೊಳೆಯಲು ಬಿಟ್ಟು, ನಂತರ ಅದನ್ನು ಡ್ರಿಪ್ ಮೂಲಕ ಎಲ್ಲ ಗಿಡಗಳಿಗೂ ನೀಡಲಾಗುತ್ತಿದೆ.
ಕೃಷಿ ಆದಾಯ: ಗೊಬ್ಬರ ಇತರೆ ನಿರ್ವಹಣೆಗೆ ವಾರ್ಷಿಕ ಸರಾಸರಿ 2 ರಿಂದ 3 ಲಕ್ಷ ರೂ. ಖರ್ಚು ಬರುತ್ತದೆ. ಆದರೆ ವಾರ್ಷಿಕ 15 ರಿಂದ 18 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಅಶೋಕ್ ಅವರಿಗೆ ಈವರೆಗೂ ಸಮಗ್ರ ಕೃಷಿ ಪ್ರಶಸ್ತಿ, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿ ಕತ್ತಲಗೆರೆ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದಿಂದ ಹಲವು ಪ್ರಶಸ್ತಿಗಳು ಸಂದಿವೆ.

ಅಧಿಕಾರಿಗಳ ಭೇಟಿ

ರೈತ ಆರ್.ವಿ. ಅಶೋಕ್ ಅವರ ಜಮೀನಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಭೇಟಿ ನೀಡಿ ಪ್ರಗತಿಪರ ಸಾಧನೆಗಳನ್ನು ಪರಿಶೀಲಿಸಿದ್ದಾರೆ. ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ಹಲವಾರು ರೈತರಿಗೆ ಅವರ ತೋಟದಲ್ಲಿಯೇ ತರಬೇತಿ ಕಾರ್ಯಗಾರಗಳನ್ನು ನಡೆಸಲಾಗಿದೆ.

ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರಾಗುತ್ತದೆ ಮತ್ತು ಖರ್ಚು ಅಧಿಕವಾಗುತ್ತದೆ. ಪ್ರತಿ ರೈತರು ಸಾವಯವ ಕೃಷಿ ಅನುಸರಿಸಿ ಬಹು ಬೆಳೆಗಳನ್ನು ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು.

ಆರ್.ವಿ. ಅಶೋಕ್ ಅವರು ನಮ್ಮ ಇಲಾಖೆಯಿಂದ ತರಬೇತಿ ಪಡೆದಿದ್ದು, 10-12 ವರ್ಷಗಳಿಂದ ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. ಅವರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಬೆಳೆದಿದ್ದಾರೆ.