ಡಿಸಿಸಿ ಬ್ಯಾಂಕಿನ ಅಧಿಕಾರಿ- ಸಿಬ್ಬಂದಿಗೆ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ, ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ.ಜೆ.ಆರ್ ಷಣ್ಮುಖಪ್ಪ, ಕೆ.ಎಚ್. ಷಣ್ಮುಖಪ್ಪ, ಸಿರಿಗೆರೆ ರಾಜಣ್ಣ, ಶೈಲಜಾ ಆರ್. ಚವ್ಹಾಣ್, ಎಲ್.ರುದ್ರನಾಯ್ಕ, ಎಚ್.ಕೆ ಪಾಲಾಕ್ಷಪ್ಪ, ಆರ್. ವೆಂಕಟಸ್ವಾಮಿ, ಎ.ಎಚ್. ಸಾಗರ್, ಕೆ.ಜೆ. ಸುರೇಶ್ ಇದ್ದರು.  
ದಾವಣಗೆರೆ

ಸ್ವಂತ ಆದಾಯದ ಮೂಲದತ್ತ ಒತ್ತು ನೀಡಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್‌ಗಳಿಗೆ ಷಣ್ಮುಖಪ್ಪ ಕಿವಿಮಾತು
  • ಸ್ವಾವಲಂಬಿ ಜೀವನಕ್ಕೆ ಬೆಳಕಾದ ಬ್ಯಾಂಕ್‌ಗಳು
  • ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರ

ದಾವಣಗೆರೆ: ನಬಾರ್ಡ್ ನೀಡುತ್ತಿದ್ದ ಸಹಾಯಧನದ ಮೊತ್ತ ಇಳಿಸಿದ್ದರ ಹಿನ್ನೆಲೆಯಲ್ಲಿ ಡಿ.ಸಿ.ಸಿ ಬ್ಯಾಂಕುಗಳು ಸ್ವಂತ ಆದಾಯದ ಮೂಲವನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ.ಜೆ.ಆರ್.ಷಣ್ಮುಖಪ್ಪ ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿ- ಸಿಬ್ಬಂದಿಗೆ ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಒಂದು ದಿನದ ರಾಜ್ಯ ಮಟ್ಟದ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್‌ನ ಠೇವಣಿಗಳ ಮೇಲೆ ಸಿಬ್ಬಂದಿ ಹೆಚ್ಚಿನ ಗಮನ ವಹಿಸಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಸಹಕಾರ ಕಾಯ್ದೆಗಳಲ್ಲಿ ಹಲವಾರು ತಿದ್ದುಪಡಿಗಳಾಗಿದ್ದು, ಈ ಬಗ್ಗೆ ಅರಿವು ಪಡೆಯಲು ಇಂತಹ ತರಬೇತಿ ಶಿಬಿರಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಾಕಷ್ಟು ವಾಣಿಜ್ಯ ಬ್ಯಾಂಕುಗಳು ಇದ್ದಾಗ್ಯೂ ರೈತರು ಸಹಕಾರ ಕ್ಷೇತ್ರದ ಮೂಲಕ ತಮ್ಮ ಆರ್ಥಿಕ ಚಟುವಟಿಕೆ ಕೈಗೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಗ್ರಾಹಕರ ಜತೆ ಉತ್ತಮ ಒಡನಾಟದ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬಿ ಜೀವನಕ್ಕೆ ಪೂರಕ ಶಕ್ತಿಯಾಗಿ ಬ್ಯಾಂಕು ಬೆಳೆದು ನಿಂತಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಎಚ್. ಷಣ್ಮುಖಪ್ಪ ಮಾತನಾಡಿ ಬ್ಯಾಂಕಿನ ಅಭಿವೃದ್ಧಿಯು ಅಲ್ಲಿನ ಆಡಳಿತ ಮಂಡಳಿ, ನೌಕರ ವರ್ಗ ಸಮನಾದ ಜವಾಬ್ದಾರಿಯನ್ನು ಅಲವಂಬಿಸಿದೆ. ಗ್ರಾಹಕರೊಂದಿಗಿನ ಉತ್ತಮ ಬಾಂಧವ್ಯ ಅತಿಮುಖ್ಯ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ ರೈತರಿಗೆ ಬೆನ್ನೆಲುಬಾಗಿ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕಿನ ಅಧಿಕಾರಿ- ನೌಕರರು ಕಾಲಕಾಲಕ್ಕೆ ಬದಲಾಗುವ ಕಾಯ್ದೆ- ನಿಯಮಗಳ ಬಗ್ಗೆ ತಿಳಿದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಲು ಇಂತಹ ತರಬೇತಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಶೈಲಜಾ ಆರ್. ಚವ್ಹಾಣ್, ವೃತ್ತಿಪರ ನಿರ್ದೇಶಕರಾದ ಎಲ್.ರುದ್ರನಾಯ್ಕ, ಎಚ್.ಕೆ ಪಾಲಾಕ್ಷಪ್ಪ, ಸಹಕಾರ ಒಕ್ಕೂಟದ ವ್ಯವಸ್ಥಾಪಕ ಕೆ.ಎಂ. ಜಗದೀಶ್, ದ್ವಿತೀಯ ದರ್ಜೆ ಸಹಾಯಕ ವಿ. ರಂಗನಾಥ್ ಇತರರಿದ್ದರು.
ಚೈತ್ರಾ- ಕಾವ್ಯಾ ಪ್ರಾರ್ಥನೆ ನಡೆಸಿಕೊಟ್ಟರು. ಕೆ.ಜಿ ಸುರೇಶ್ ಸ್ವಾಗತಿಸಿದರು. ಕೆ.ಎಚ್. ಸಂತೋಷ್‌ಕುಮಾರ್ ವಂದಿಸಿದರು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ; ಅನುತ್ಪಾದಕ ಆಸ್ತಿಗಳು ಮತ್ತು ಅದರ ನಿರ್ವಹಣೆ ಕುರಿತು ನಬಾರ್ಡ್‌ನ ಪ್ರಧಾನ ವ್ಯವಸ್ಥಾಪಕ ಆರ್. ವೆಂಕಟಸ್ವಾಮಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧಿಕಾರಿಗಳಿಗೆ ಅಗತ್ಯ ಜ್ಞಾನ- ಕೌಶಲಗಳು ಕುರಿತು ಶಿಕ್ಷಣ ತಜ್ಞ ಎ.ಎಚ್. ಸಾಗರ್ ಉಪನ್ಯಾಸ ನೀಡಿದರು.