ದಾವಣಗೆರೆ ಹೊರವಲಯದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿ.  
ದಾವಣಗೆರೆ

ಬಿಸಿಲಿನ ತಾಪದಷ್ಟೇ ಹೆಚ್ಚಿದ ಬೆಂಕಿ ಅವಘಡ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಮೂರೇ ತಿಂಗಳಲ್ಲಿ 370 ಅಗ್ನಿ ದುರಂತ
  • 2.22 ಕೋಟಿ ಸಾರ್ವಜನಿಕ ಆಸ್ತಿ ಹಾನಿ
  • ನಿಲ್ಲದ ಅಗ್ನಿಶಾಮಕ ಪಡೆಯ ಜಾಗೃತಿ ಪಯಣ
ದಾವಣಗೆರೆ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಇಳಿಮುಖವಾಗುವ ಲಕ್ಷಣಗಳಿಲ್ಲ. ಅಗ್ನಿಶಾಮಕ ದಳದ ಜಾಗೃತಿ ನಡುವೆಯೂ ಬೆಂಕಿ ದುರಂತಗಳ ಸಂಖ್ಯೆಯೂ ಏರುತ್ತಲಿದೆ. ವರ್ಷಾರಂಭದ ಮೂರು ತಿಂಗಳಲ್ಲಿ 370 ಅಗ್ನಿ ಅವಘಡ ಸಂಭವಿಸಿದ್ದು, 2.22 ಕೋಟಿ ರೂ. ಮೊತ್ತದ ಆಸ್ತಿ ಹಾನಿಯಾಗಿದೆ.
2021ನೇ ಸಾಲಿನಲ್ಲಿ 471 ಬೆಂಕಿ ದುರಂತ ಆಗಿದ್ದವು. 2022ರಲ್ಲಿ 468, 2023ರಲ್ಲಿ 827, 2024ನೇ ವರ್ಷದಲ್ಲಿ 685, 2025ರಲ್ಲಿ 680 ಅಗ್ನಿ ದುರಂತ ವರದಿಯಾಗಿದ್ದವು.
ಈ ವರ್ಷ ಮೂರು ತಿಂಗಳವಧಿಯಲ್ಲಿ ಜಿಲ್ಲೆಯ ಐದು ಅಗ್ನಿಶಾಮಕ ಠಾಣೆಗಳ ವ್ಯಾಪ್ತಿಯಲ್ಲಿ 370 ಅಗ್ನಿ ಅವಘಡಗಳಾಗಿದ್ದು 10 ಪ್ರಾಣಿಗಳು ಅಸು ನೀಗಿವೆ. ಈ ಅವಧಿಯಲ್ಲಿ 3.18 ಕೋಟಿ ರೂ.ಗಳಷ್ಟು ಸಾರ್ವಜನಿಕ ಆಸ್ತಿ ರಕ್ಷಣೆಯಾಗಿದೆ. ತುರ್ತು ರಕ್ಷಣಾ ಕಾರ್ಯದ ಕರೆಗಳಲ್ಲಿ ಒಟ್ಟು ಐವರು ಸಾವಿಗೀಡಾಗಿದ್ದು 15 ಮಂದಿ ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ವರ್ಷದ ಅಗ್ನಿ ಅನಾಹುತಗಳನ್ನು ಅವಲೋಕಿಸಿದಾಗ ಗ್ರಾಮಾಂತರ ಭಾಗದಲ್ಲೇ ಹೆಚ್ಚಿನ ಅವಘಡಗಳು ವರದಿಯಾಗಿವೆ. ಹುಲ್ಲಿನ ಬಣವೆ, ಕಬ್ಬಿನ ಗದ್ದೆ, ತೋಟಗಳಲ್ಲಿ ಹೆಚ್ಚಿನ ಅನಾಹುತ ಆಗಿವೆ.
2023ನೇ ಸಾಲಿನಲ್ಲಿ ಸಂಭವಿಸಿದ 827 ಅಗ್ನಿ ದುರಂತಗಳಲ್ಲಿ ಒಟ್ಟು 7.58 ಕೋಟಿ ರೂ.ಗಳಷ್ಟು ಆಸ್ತಿ ನಷ್ಟವಾಗಿದ್ದರೆ, 97 ಕೋಟಿ ರೂ. ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ! 8 ಜನರನ್ನು ರಕ್ಷಣೆ ಮಾಡಲಾಗಿದೆ. ಮೂರು ಪ್ರಾಣಿಗಳು ಮೃತಪಟ್ಟಿದ್ದವು. ಗ್ರಾಮೀಣ ಭಾಗದಲ್ಲೇ 610 ಪ್ರಕರಣ ನಡೆದಿವೆ.
2024ರಲ್ಲಿ ವರದಿಯಾಗಿದ್ದ 685 ದುರಂತಗಳಲ್ಲಿ 462 ಗ್ರಾಮಾಂತರದ್ದಾದರೆ 207 ನಗರಗಳದು. ಒಟ್ಟು 6.46 ಕೋಟಿ ರೂ. ಹಾನಿಯಾಗಿದ್ದರೆ 11.40 ಕೋಟಿ ಸಾರ್ವಜನಿಕ ಆಸ್ತಿ ರಕ್ಷಿಸಲಾಗಿದೆ. 7 ಜನರನ್ನು ಪಾರು ಮಾಡಲಾಗಿದ್ದು, ಒಬ್ಬರು ಮೃತಪಟ್ಟಿದ್ದರು. ಮೂರು ಪ್ರಾಣಿಗಳೂ ಅಸು ನೀಗಿದ್ದವು. ಇತರೆ ಅಪಘಾತದ 61 ರಕ್ಷಣಾ ಕರೆಗಳ ಪೈಕಿ 24 ಮಂದಿ ರಕ್ಷಿಸಲ್ಪಟ್ಟರೆ, 33 ಮಂದಿ ಮೃತಪಟ್ಟರು.
680 ಬೆಂಕಿ ದುರಂತಗಳಿಗೆ 2025ನೇ ವರ್ಷ ತುತ್ತಾಯಿತು. 7.85 ಕೋಟಿ ರೂ. ಗಳಷ್ಟು ಸಾರ್ವಜನಿಕ ಆಸ್ತಿ ನಷ್ಟವಾದರೆ, 24.67 ಕೋಟಿ ರೂ. ಮೊತ್ತದ ಆಸ್ತಿ ರಕ್ಷಿಸಲಾಯಿತು. ದುರಂತದಲ್ಲಿ ಒಬ್ಬರು ಮೃತಪಟ್ಟರೆ, 8 ಜನರನ್ನು ಪ್ರಾಣಾಪಾಯದಿಂದ ರಕ್ಷಿಸಲಾಯಿತು. ಗ್ರಾಮಾಂತರದ 459 ಅಗ್ನಿ ಅವಘಡಗಳು ವರದಿಯಾಗಿದ್ದವು. ಇತರೆ ಅಪಘಾತಗಳ 55 ತುರ್ತು ರಕ್ಷಣಾ ಕರೆಗಳ ಪೈಕಿ ಅಗ್ನಿಶಾಮಕ ದಳ ನಾಲ್ವರನ್ನು ರಕ್ಷಿಸಿದ್ದು, 39 ಮಂದಿ ಮೃತರಾಗಿದ್ದರು.

ಅರ್ಧದಷ್ಟು ಫೈರ್‌ಮೆನ್‌ಗಳಿಲ್ಲ!

ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಹಾಗೂ ಜಗಳೂರು ಕೇಂದ್ರಗಳಲ್ಲಿ ತಲಾ ಒಂದು ಅಗ್ನಿಶಾಮಕ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ. ಮಂಜೂರಾದ 92 ಅಗ್ನಿಶಾಮಕ ಸಿಬ್ಬಂದಿ (ಫೈರ್‌ಮೆನ್) ಪೈಕಿ 47 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ 45 ಹುದ್ದೆಗಳು ಖಾಲಿ ಇವೆ. ಮೂಲಗಳ ಪ್ರಕಾರ 2022ರಿಂದ ಹೊಸ ನೇಮಕಾತಿ ನಡೆದಿಲ್ಲ. ಹೀಗಾಗಿ ಇರುವ ಸಿಬ್ಬಂದಿಯೇ ಹೆಚ್ಚಿನ ಕಾರ್ಯಭಾರ ನಿರ್ವಹಿಸಬೇಕಿದೆ.
ಉಳಿದಂತೆ ಹರಿಹರ ಅಗ್ನಿಶಾಮಕ ಠಾಣೆಗೆ ಇರಬೇಕಿದ್ದ ಒಬ್ಬ ಠಾಣಾಧಿಕಾರಿಯೂ ಇಲ್ಲ! ಮಂಜೂರಾದ 25 ಅಗ್ನಿಶಾಮಕ ವಾಹನ ಚಾಲಕರ ಹುದ್ದೆಗಳಲ್ಲಿ 22 ಮಂದಿ ಸಕ್ರಿಯರಾಗಿದ್ದು ಮೂರು ಹುದ್ದೆ ಖಾಲಿ ಉಳಿದಿವೆ.

ಯಂತ್ರೋಪಕರಣ ಸೌಲಭ್ಯ

ಜಿಲ್ಲೆಯಲ್ಲಿ 7 ಜಲವಾಹನ, 1 ವಾಟರ್ ಬೋಜರ್ ಜತೆಗೆ ಆಕ್ಸಿಜನ್, ರಬ್ಬರ್(ಒಬಿಎಂ) ಬೋಟ್, ಸೂಟುಗಳ ಸೌಲಭ್ಯವಿವೆ. ಪೋರ್ಟಬಲ್ ಪಂಪ್, ಪೆಟ್ರೋಲ್ ಆಪರೇಟರ್, ವುಡ್ ಕಟ್ಟರ್ ಮೊದಲಾದ ಅನುಕೂಲತೆಗಳಿವೆ. ರಕ್ಷಣಾ ವಾಹನದ ಎಫ್‌ಸಿ ಮುಗಿದಿದ್ದು ಸದ್ಯಕ್ಕೆ ಚಾಲನೆಯಲ್ಲಿಲ್ಲ.

ಕಟ್ಟಡಕ್ಕಿಲ್ಲ ಕಾಯಕಲ್ಪ

ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿ ಒಳಗೊಂಡಂತೆ ಹಳೆಯ ಕಟ್ಟಡದ ಮೇಲ್ಚಾವಣಿಯಲ್ಲಿನ ಸರಳುಗಳು ಎದ್ದಿವೆ. ಇಲ್ಲಿ ಕೆಲಸ ಮಾಡುವ ಅಧಿಕಾರಿ- ಸಿಬ್ಬಂದಿ ಜೀವ ಕೈಲಿದು ಕೆಲಸ ಮಾಡುವ ಸ್ಥಿತಿ ಇದೆ. ಇದುವರೆಗೆ ದುರಸ್ತಿ ಅಥವಾ ಹೊಸ ಕಟ್ಟಡ ಭಾಗ್ಯದ ಸುದ್ದಿ ಬಂದಿಲ್ಲ! ಅಗ್ನಿಶಾಮಕ ಠಾಣಾಧಿಕಾರಿ ಸೇರಿ ಸಿಬ್ಬಂದಿ ಕಾರ್ಯ ನಿರ್ವಹಣೆಗೆ ಜಾಗವಿಲ್ಲದ್ದರಿಂದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ವಸತಿ ಗೃಹದ ಸಣ್ಣ ಕೊಠಡಿಯೇ ಅನಿವರ್ಯವಾಗಿದೆ!
ಬೇಸಿಗೆ ಹಿನ್ನೆಲೆಯಲ್ಲಿ ಭದ್ರಾ ನಾಲೆ, ನದಿ ಪಾತ್ರಗಳಲ್ಲಿ ಈಜಲು ಹೋಗಿ ಅನಾಹುತಕ್ಕೆ ತುತ್ತಾಗುತ್ತಿರುವುದು ಅಗ್ನಿಶಾಮಕ ದಳಕ್ಕೆ ಸವಾಲಾಗಿದೆ. ಮಕ್ಕಳು, ಯುವಕರು ಎಚ್ಚರ ವಹಿಸಬೇಕು. ಸುರಕ್ಷತೆಗೆ ಒತ್ತು ನೀಡಬೇಕು ಎನ್ನುತ್ತಾರೆ ಅಧಿಕಾರಿಗಳು.

ಶಾಲಾ-ಕಾಲೇಜು, ಆಸ್ಪತ್ರೆ ಇತರೆಡೆ ಅಗ್ನಿನಂದಕ ಇರಿಸುವ ಜತೆಗೆ ಅದರ ಬಳಕೆ ಜ್ಞಾನ ಹೊಂದಬೇಕು. ಅಡುಗೆ ಅನಿಲ ಇತರೆ ಅಗ್ನಿ ದುರಂತಗಳಾದಾಗ ಪ್ಯಾನಿಕ್ ಆಗದೆ, ಬೆಂಕಿಯನ್ನು ಸುರಕ್ಷಿತವಾಗಿ ನಂದಿಸುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಲೆಕ್ಟ್ರಿಕಲ್ ಸಾಮಗ್ರಿ ಸುಸ್ಥಿತಿಯಲ್ಲಿಡಬೇಕು. ಮನೆ-ಕಚೇರಿಗಳಲ್ಲಿ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡಬಾರದು.

--