ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿಣಿ ಸಮಿತಿ ಹಾಗೂ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಎಸ್ಪಿ ಎಚ್.ಟಿ. ಶೇಖರ್, ಅರವಿಂದ್, ಕಿಶೋರ್ ಕುಮಾರ್ ಇತರರಿದ್ದರು.  
ದಾವಣಗೆರೆ

ಬಾಲಕರ ದುಡಿಸಿಕೊಂಡಲ್ಲಿ ಎಫ್‌ಐಆರ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಎಚ್ಚರಿಕೆ
  • ಶಾಲೆ ವಂಚಿತ ಮಕ್ಕಳನ್ನು ಕರೆತರಲು ಸೂಚನೆ
  • ಡಿಸಿ ಕಚೇರಿಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆ
ದಾವಣಗೆರೆ: ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಕಾರ್ಮಿಕ ಇಲಾಖೆ ನಿಗಾ ವಹಿಸಬೇಕು. ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರ ವಿರುದ್ಧ ದಂಡ ವಿಧಿಸುವ ಜತೆಗೆ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿಣಿ ಸಮಿತಿ ಹಾಗೂ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಅಡಿಕೆ ಸುಲಿಯುವ ಋತುವಿನಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವ ಪ್ರಮಾಣ ಹೆಚ್ಚಿದ್ದು, ಈ ಅವಧಿಯಲ್ಲಿ ಡಿಡಿಪಿಐ, ಬಿಇಒ ನೇತೃತ್ವದಲ್ಲಿ ವಿಶೇಷ ನಿಗಾ ವಹಿಸುವಂತೆ ಡಿಸಿ ಸೂಚಿಸಿದರು.
ಬಾಲಕಾರ್ಮಿಕರ ಪತ್ತೆಗಾಗಿ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಜತೆ ಜಂಟಿ ಕಾರ್ಯಾಚರಣೆ ನಡೆಸಬೇಕು. ಬಾಲಕಾರ್ಮಿಕರು ಪತ್ತೆಯಾದ ಸ್ಥಳಗಳನ್ನು ಪೊಲೀಸ್ ಇಲಾಖೆಯೊಂದಿಗೆ ಜಂಟಿ ತಪಾಸಣೆ ನಡೆಸಬೇಕು ಎಂದೂ ಸೂಚಿಸಿದರು.
ಕಳೆದ ನವೆಂಬರ್‌ನಿಂದ ಏಪ್ರಿಲ್ ಅವಧಿಯಲ್ಲಿ ಜಿಲ್ಲೆಯ 430 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದ್ದು, 11 ಬಾಲಕಾರ್ಮಿಕರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಕಾರ್ಮಿಕಾಧಿಕಾರಿ ಅರವಿಂದ್ ಸಭೆಗೆ ತಿಳಿಸಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಮಾತನಾಡಿ, ಕಳೆದ ಸಾಲಿನಲ್ಲಿ ಶಾಲೆ ತೊರೆದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ 15 ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಎಲ್ಲಾ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು. ಜತೆಗೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಂಗುರ ಸಾರುವುದು, ವಿದ್ಯಾರ್ಥಿಗಳ ಜಾಗೃತಿ ಜಾಥಾಗಳ ಮೂಲಕ ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ ಎಂದರು.
ಎಸ್ಪಿ ಎಚ್.ಟಿ.ಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಿಶೋರ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.