ಜಿ.ಎಂ. ಗಂಗಾಧರಸ್ವಾಮಿ 
ದಾವಣಗೆರೆ

ಎಲ್ಲೆಂದರಲ್ಲಿ ಕಸ ಎಸೆದರೆ ದಂಡ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಎಚ್ಚರಿಕೆ
  • ನಿಯಮ ಉಲ್ಲಂಘಿಸಿದರೆ ಕ್ರಮ
ದಾವಣಗೆರೆ : ನಗರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವ ಜಾಗಗಳನ್ನು ಜಿಪಿಎಸ್ ಲೋಕೇಶನ್ ಮೂಲಕ ಗುರುತಿಸಿ, ಆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಆ ಸ್ಥಳಗಳ ಮೇಲೆ ಸತತ ಒಂದು ತಿಂಗಳು ಕಣ್ಣಿಡಲಾಗುವುದು. ನಿಯಮ ಮೀರಿ ಕಸ ಹಾಕುವವರಿಗೆ ಗರಿಷ್ಠ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸ ಎಲ್ಲೆಂದರಲ್ಲಿ ಎಸೆಯುವವರ ಹೆಸರು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ನಗರದ ಸ್ವಚ್ಛತೆಯನ್ನು ನಾಗರಿಕರು ಹಾಳು ಮಾಡಬಾರದು. ಈ ಹಿಂದೆ ಮಹಾನಗರ ಪಾಲಿಕೆ ವತಿಯಿಂದ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದರೂ ಸಹ, ಸಾರ್ವಜನಿಕರು ರಸ್ತೆ ಬದಿಗೆ ಕಸ ಎಸೆಯುವ ಅಭ್ಯಾಸವನ್ನು ಬಿಟ್ಟಿಲ್ಲ. ಇದರಿಂದಾಗಿ ನಗರದ ಸೌಂದರ್ಯ ಹಾಗೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೊದಲ ಹಂತದಲ್ಲಿ ದಂಡ ವಿಧಿಸಿ, ಫೋಟೋ ಪ್ರಕಟಿಸಿದ ನಂತರವೂ ಸುಧಾರಿಸದಿದ್ದರೆ, ಮುಂದಿನ ಹಂತವಾಗಿ ಅವರು ಎಲ್ಲೆಲ್ಲಿ ಕಸ ಹಾಕಿದ್ದಾರೋ, ಅದೇ ಕಸವನ್ನು ತಂದು ಅವರ ಮನೆಯ ಮುಂದೆಯೇ ಸುರಿಯಲು ನಿರ್ಧರಿಸಲಾಗಿದೆ. ನಿಯಮ ಉಲ್ಲಂಘಿಸುವವರ ಸೈಟ್ ಅಥವಾ ಮನೆಗೆ ದುಪ್ಪಟ್ಟು ತೆರಿಗೆ ವಿಧಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.
ಪೌರ ಕಾರ್ಮಿಕರು ಮನೆ ಮನೆಗೆ ಬಂದಾಗ ನಾಲ್ಕು ವಿಧದ ಕಸವನ್ನು ವಿಂಗಡಿಸಿ ನೀಡಬೇಕು. ಸ್ವಚ್ಛತೆ ಮಾತ್ರವಲ್ಲದೆ ನೀರಿನ ಮಿತವ್ಯಯದ ಕಡೆಗೂ ಗಮನ ಹರಿಸಬೇಕು. ಪ್ರತಿದಿನ ಮನೆ ಮುಂದೆ ನೀರು ಹಾಕಿ ಪೋಲು ಮಾಡುವ ಬದಲು ವಾರಕ್ಕೆ ಒಮ್ಮೆ ಮಾತ್ರ ತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನೀರು ಪೋಲು ಮಾಡಿದರೆ ಕ್ರಮ

ನಗರದಲ್ಲಿ ಬೆಳಗಿನ ಅವಧಿಯಲ್ಲಿ ವಾಹನಗಳನ್ನು ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್‌ಗಳ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಡಾಂಬರ್ ರಸ್ತೆಗಳು ಹಾಳಾಗುತ್ತಿವೆ ಎಂದು ಡಿಸಿ ಹೇಳಿದರು.
ನೀರನ್ನು ಪೋಲು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಅಂತಹ ಮನೆಗಳಿಗೆ ಭಾರಿ ಮೊತ್ತದ ದಂಡ ವಿಧಿಸುವುದರ ಜತೆಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಸೂಚಿಸಲಾಗಿದೆ ಎಂದರು.