- ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಲ್ಲಿ ಘಟನೆ
- ಮಚ್ಚು, ಚಾಕುವಿನಿಂದ ಮನಬಂದಂತೆ ಇರಿತ
- ಠಾಣೆಗೆ ಹೋಗಿ ಶರಣಾದ ಆರೋಪಿಗಳು
ಚನ್ನಗಿರಿ: ಹಣಕಾಸಿನ ವಿಚಾರದಲ್ಲಿ ಸಹೋದರ ಸಂಬಂಧಿಗಳ ನಡುವೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. murder
ಗ್ರಾಮದ ನಿವಾಸಿ, ಅಡಿಕೆ ವ್ಯಾಪಾರಿ ಅತಾವುಲ್ಲಾ (42) ಕೊಲೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆ ಕಾಗೆಕೊಡಮಗ್ಗಿ ಗ್ರಾಮದ ಶೇಕ್ ದಸ್ತಗೀರ್ (58) ಹಾಗೂ ಆತನ ಮಗ ಶೇಕ್ ಜಬೀವುಲ್ಲಾ (36) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಏನು ಕಾರಣ?
ಅತಾವುಲ್ಲಾ ಈ ಹಿಂದೆ ಅಡಿಕೆ ವ್ಯಾಪಾರಕ್ಕಾಗಿ ಕಾಗೆಕೊಡಮಗ್ಗಿ ಗ್ರಾಮದ ಶೇಕ್ ದಸ್ತಗೀರ್ ಬಳಿ ಹಣಕಾಸಿನ ಸಹಾಯ ಕೇಳಿದ್ದನು. ಆಗ ದಸ್ತಗೀರ್ ಹರಿಹರದಲ್ಲಿದ್ದ ತಮ್ಮ ಮಗಳ ಮೂಲಕ 14 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಅತಾವುಲ್ಲಾ ಹಣವನ್ನು ಸಕಾಲಕ್ಕೆ ಮರಳಿಸಿರಲಿಲ್ಲ. ಒತ್ತಡ ಹೆಚ್ಚಾದಾಗ ಸಮಾಜದ ಮುಖಂಡರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ, 5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಲಾಗಿತ್ತು.
ಇದಾಗಿ 9 ತಿಂಗಳು ಕಳೆದರೂ ಅತಾವುಲ್ಲಾ ಹಣ ನೀಡಿರಲಿಲ್ಲ. ದಸ್ತಗೀರ್ ಮಗಳು ಹಣ ಕೊಡಿಸುವಂತೆ ತಂದೆಯ ಮನೆಗೆ ಬಂದು ಒತ್ತಾಯ ಮಾಡಿದ್ದಳು. ಅದರಂತೆ ಹಣ ಕೇಳಿದಾಗ, ನಿಮ್ಮ ಮಗಳ ಜತೆ ನನಗೆ ಸಂಬಂಧವಿದೆ, ಅದರ ವಿಡಿಯೋಗಳು ಇವೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ ಎಂದು ಅತಾವುಲ್ಲಾ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.
ಶುಕ್ರವಾರ ನಲ್ಲೂರು ಗ್ರಾಮದಲ್ಲಿ ಮತ್ತೆ ಹಣದ ಮಾತುಕತೆ ನಡೆಸುವ ವೇಳೆ ಮಾತುಕತೆ ವಿಕೋಪಕ್ಕೆ ತಿರುಗಿ, ಆರೋಪಿಗಳು ತಮ್ಮೊಂದಿಗೆ ತಂದಿದ್ದ ಮಚ್ಚು ಹಾಗೂ ಅಡಕೆ ಸುಲಿಯುವ ಚಾಕುವಿನಿಂದ ಅತಾವುಲ್ಲಾಗೆ ಮನಬಂದಂತೆ ಇರಿದಿದ್ದಾರೆ. ನಂತರ ಆರೋಪಿಗಳಿಬ್ಬರು ಚನ್ನಗಿರಿ ಠಾಣೆಗೆ ಬಂದು ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.