ದಾವಣಗೆರೆಯಲ್ಲಿ ಶನಿವಾರ ಮಾಜಿ ದೇವದಾಸಿಯರಿಗಾಗಿ ಆರೋಗ್ಯ ಜಾಗೃತಿ ಮತ್ತು ಸಮಗ್ರ ಆರೋಗ್ಯ ತಪಾಸಣಾ ಅಭಿಯಾನಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ರಾಜಾನಾಯ್ಕ, ಡಾ. ಶುಕ್ಲಾ ಶೆಟ್ಟಿ, ಡಾ. ಮೂಗನಗೌಡ ಪಾಟೀಲ್, ಡಾ.ಬಿ.ಎಸ್. ಪ್ರಸಾದ್, ಡಾ. ಅರುಣ್ ಕುಮಾರ್ ಅಜ್ಜಪ್ಪ, ಡಾ. ಕುಮಾರ್ ಇದ್ದರು. 
ದಾವಣಗೆರೆ

ಮಾಜಿ ದೇವದಾಸಿಯರಿಗೆ ಆರ್ಥಿಕ ನೆರವು

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ಸಮಗ್ರ ಆರೋಗ್ಯ ತಪಾಸಣಾ ಅಭಿಯಾನಕ್ಕೆ ಚಾಲನೆ
ದಾವಣಗೆರೆ : ಎನ್‌ಆರ್‌ಎಲ್‌ಎಂ ಯೋಜನೆಯ ಹಣ ಮತ್ತು ವಿಶೇಷ ಅನುದಾನವನ್ನು ಒಟ್ಟುಗೂಡಿಸಿ ಮಾಜಿ ದೇವದಾಸಿಯರಿಗೆ ಆರ್ಥಿಕ ನೆರವು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಯೋಜನೆ ರೂಪಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಜಿಲ್ಲೆಯ ಮಾಜಿ ದೇವದಾಸಿಯರಿಗಾಗಿ ‘ಸ್ಪಂದನ’ ಮಹಿಳಾ ಆರೋಗ್ಯ ಕಾರ್ಯಕ್ರಮದಡಿ ಶನಿವಾರ, ನಗರದ ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಮತ್ತು ಸಮಗ್ರ ಆರೋಗ್ಯ ತಪಾಸಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿನ್ನೆಲೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಜಿ ದೇವದಾಸಿಯರ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು. ಅವರಿಗೆ ವಸತಿ, ನಿವೇಶನ ಸೌಲಭ್ಯವಿದೆಯೆ, ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆಯೆ, ಕೌಶಲ ತರಬೇತಿ ಪಡೆದಿದ್ದಾರೆಯೆ, ಸ್ವಸಹಾಯ ಸಂಘಗಳ ಚಟುವಟಿಕೆಗಳಲ್ಲಿ ತೊಡಗಿದ್ದಾರೆಯೆ ಎಂಬ ವಿವರಗಳನ್ನು ಕಲೆಹಾಕಿ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು.
ಮಾಜಿ ದೇವದಾಸಿಯರು ಸರ್ಕಾರದಿಂದ ನೀಡುವ ಕೌಶಲ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು. ನೀವು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಿವೇಶನವಿಲ್ಲದ ಮಾಜಿ ದೇವದಾಸಿಯರು ಬಹಳ ಜನರಿದ್ದಾರೆ. ನಿವೇಶನ ಇದ್ದವರು ಮನೆ ಕಟ್ಟಿಕೊಳ್ಳಲು ಸರ್ಕಾರ 1.5 ಲಕ್ಷದಿಂದ 2 ಲಕ್ಷದ ವರೆಗೆ ನೆರವು ನೀಡುತ್ತದೆ. 2 ಸಾವಿರ ರೂ. ಪಿಂಚಣಿ ದೊರೆಯುತ್ತದೆ. ಸರ್ಕಾರದಿಂದ ನೀಡುವ ಆರ್ಥಿಕ ಸಹಾಯಧನ ಬಳಸಿಕೊಂಡು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಎಸ್.ಎಸ್. ಕೇರ್ ಟ್ರಸ್ಟ್ ಮಹಿಳೆಯರ ಆರೋಗ್ಯ ರಕ್ಷಣೆ ಹಾಗೂ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡಿದೆ. ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತ ಬಂದಿದೆ. ಮಾಜಿ ದೇವದಾಸಿಯರೂ ನಿದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಜಿಲ್ಲೆಯ ಮಾಜಿ ದೇವದಾಸಿಯರಿಗೆ ಟ್ರಸ್ಟ್ ವತಿಯಿಂದ ಆರೋಗ್ಯ ಕಾರ್ಡ್ ನೀಡಲಾಗುವುದು. ಅದನ್ನು ಬಳಸಿಕೊಂಡು ಬಾಪೂಜಿ ಸಂಸ್ಥೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಪಡೆಯಬಹುದು ಎಂದು ಹೇಳಿದರು. ಎಸ್‌ಎಸ್ ಜನಕಲ್ಯಾಣ ಟ್ರಸ್ಟ್‌ನಿಂದ ನೀಡುವ ವಿದ್ಯಾರ್ಥಿವೇತನವನ್ನು ಬಳಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಪಡೆಯುವಂತೆ ತಿಳಿಸಿದರು.
ಆ. 30ರೊಳಗೆ ಜಿಲ್ಲೆಯ ಎಲ್ಲ ಮಾಜಿ ದೇವದಾಸಿಯರ ಆರೋಗ್ಯ ತಪಾಸಣೆ ಮಾಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ಶುಕ್ಲಾ ನಶೆಟ್ಟಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಮೂಗನಗೌಡ ಪಾಟೀಲ್, ಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಅಜ್ಜಪ್ಪ, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕುಮಾರ್ ಇದ್ದರು. ಡಾ. ದಿವ್ಯಾ ಪ್ರಾರ್ಥಿಸಿದರು.
ಮಾಜಿ ದೇವದಾಸಿಯರಾದ ಹನುಮಕ್ಕ, ಮೈಲಮ್ಮ ಅನಿಸಿಕೆ ಹಂಚಿಕೊಂಡರು.

209 ಮಾಜಿ ದೇವದಾಸಿಯರಿಗೆ ಮಾಸಾಶನ

ಜಿಲ್ಲೆಯಲ್ಲಿ ಹೊಸದಾಗಿ ಗುರುತಿಸಲಾಗಿರುವ 209 ಮಾಜಿ ದೇವದಾಸಿಯರಿಗೆ ಈ ವರ್ಷ ಮಾಸಾಶನ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಹೇಳಿದರು.
2007-08ರಲ್ಲಿ ನಡೆಸಿದ್ದ ಸಮೀಕ್ಷೆಯ ವೇಳೆ 1604 ಮಾಜಿ ದೇವದಾಸಿಯರನ್ನು ಗುರುತಿಸಲಾಗಿತ್ತು. 2025ರ ಡಿಸೆಂಬರ್‌ನಲ್ಲಿ ಮರುಸಮೀಕ್ಷೆ ನಡೆದು, 209 ಮಹಿಳೆಯರ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.
ಅವರ ಪೈಕಿ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ ಮತ್ತು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ 127 ಮಾಜಿ ದೇವದಾಸಿಯರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡಲು ಶಿಫಾರಸು ಮಾಡಲಾಗಿದೆ. ಅವರ ಆಧಾರ್ ಕಾರ್ಡ್, ಭಾವಚಿತ್ರ ಮುಂತಾದ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಒಂದು ವಾರದೊಳಗೆ ಈ ಮಹಿಳೆಯರಿಗೆ ಮಾಸಾಶನ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಹಿಂದೆ ಗುರುತಿಸಲಾಗಿದ್ದ ಮಾಜಿ ದೇವದಾಸಿಯರ ಪೈಕಿ 659 ಮಹಿಳೆಯರು ಮೃತಪಟ್ಟಿದ್ದಾರೆ. 15 ಮಂದಿ ವಲಸೆ ಹೋಗಿದ್ದು ಅವರಿಗೂ ಮಾಸಾಶನಕ್ಕೆ ಶಿಫಾರಸು ಮಾಡಲಾಗಿದೆ.20 ಮಹಿಳೆಯರು ತಮಗೆ ಸೌಲಭ್ಯ ಬೇಡ ಎಂದು ನಿರಾಕರಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 910 ಮಾಜಿ ದೇವದಾಸಿಯರಿದ್ದಾರೆ. ಅವರಲ್ಲಿ 902 ಮಂದಿಗೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸುವ ಗುರಿಯಿದೆ. ಈ ವರ್ಷ 25 ಫಲಾನುಭವಿಗಳಿಗೆ ನೀಡಲು ಅವಕಾಶವಿದೆ. ಸರ್ಕಾರದಿಂದ 45 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಇದುವರೆಗೆ ನಿವೇಶನ ಇರುವ 867 ಜನರಿಗೆ ವಸತಿ ಸೌಲಭ್ಯಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 2025-26ನೇ ಸಾಲಿಗೆ 52 ಮಹಿಳೆಯರಿಗೆ ಸೂರು ಕಲ್ಪಿಸಲು ಅವಕಾಶವಿದೆ ಎಂದು ಹೇಳಿದರು.