ದಾವಣಗೆರೆ ತಾಲೂಕಿನಲ್ಲಿ ಬಿತ್ತನೆಗಾಗಿ ಭೂಮಿ ಹದ ಮಾಡುತ್ತಿರುವ ರೈತ ಕುಟುಂಬ.  
ದಾವಣಗೆರೆ

ಗಂಗಾವತರಣಕ್ಕೆ ಹಾತೊರೆವ ರೈತರು

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ವಾಡಿಕೆಗಿಂತ 46 ಮಿ.ಮೀ. ಮಳೆಯ ಕೊರತೆ
  • ದಾವಣಗೆರೆ ಜಿಲ್ಲೆಯಲ್ಲಿ ಚುರುಕಾಗದ ಬಿತ್ತನೆ ಕಾರ್ಯ
  • ಎಲ್-ನಿನೋ ಪ್ರಭಾವ ವರುಣನ ಅಭಾವ
ದಾವಣಗೆರೆ: ಜಿಲ್ಲೆಯಾದ್ಯಂತ ನಿರೀಕ್ಷಿತ ಮುಂಗಾರು ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬಿತ್ತನೆಗೆ ಹಿನ್ನಡೆಯಾಗಿದೆ. ಮುಗಿಲಿನತ್ತ ಮುಖಮಾಡಿರುವ ರೈತರು ಗಂಗಾವತರಣಕ್ಕೆ ಹಾತೊರೆಯುತ್ತಿದ್ದಾರೆ. ಇಳಿದು ಬಾ ತಾಯೆ.. ಎಂದು ಮೊರೆ ಇಡುತ್ತಿದ್ದಾರೆ.
ಬದಲಾದ ಕಾಲಮಾನದ ಹಿನ್ನೆಲೆಯಲ್ಲಿ, ಮುಂಗಾರಿನ ಅಭಿಷೇಕ ಮಾಡಬೇಕಿದ್ದ ಮೃಗಶಿರ ಮಳೆ ಸಮರ್ಪಕವಾಗಿ ಆಗಿಲ್ಲ. ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಒಟ್ಟು ವಾಡಿಕೆ ಮಳೆ 79 ಮಿ.ಮೀ. ಇದೆ. ಜೂ.14ರವರೆಗೆ ವಾಡಿಕೆ ಇರುವ 33.4 ಮಿ.ಮೀ. ಪೈಕಿ 18.2 ಮಿ.ಮೀ.ನಷ್ಟು ಮಳೆ ಹನಿದಿದೆ. ಆದರಿನ್ನೂ 46 ಮಿ.ಮೀ. ಸರಾಸರಿ ಮಳೆಯ ಕೊರತೆ ಎದುರಾಗಿದೆ.
ಕಳೆದ ಬಾರಿ ಇದೇ ಹೊತ್ತಿನಲ್ಲಿ ಉತ್ತಮ ಮಳೆಯಾಗಿ ಶೇ.20ರಷ್ಟು ಬಿತ್ತನೆಯಾಗಿತ್ತು. ಈ ಬಾರಿ ಮಳೆರಾಯನ ದರ್ಶನವಿಲ್ಲದೆ 7000 ಹೆ. ಪ್ರದೇಶದಲ್ಲಿ ಅಂದರೆ ಶೇಕಡ 3.2ರಷ್ಟು ಮಾತ್ರವೇ ಬಿತ್ತನೆ ಆಗಿದೆ. ಅದೂ ಸಹ ನ್ಯಾಮತಿ, ಜಗಳೂರು ಹಾಗೂ ಸಂತೆಬೆನ್ನೂರಿನ ಕೆಲ ಭಾಗದಲ್ಲಿ ಮೆಕ್ಕೆಜೋಳ ಹಾಗೂ ಸೋಯಾಬಿನ್ ಬಿತ್ತನೆಯ ಸಣ್ಣ ಪ್ರಯೋಗ ನಡೆದಿದೆ. 
ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಮುಖ್ಯ ಬೆಳೆ ಮೆಕ್ಕೆಜೋಳ. ಇದರ ಬಿತ್ತನೆಗೆ ಇನ್ನೂ ಸಮಯಾವಕಾಶವಿದೆ. ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಾಸರಿ ಮಳೆಯ ಕೊರತೆ ಆಗಬಹುದು. ಇಂತಹ ಸಂದರ್ಭದಲ್ಲಿ ರಾಗಿ, ಸೂರ್ಯಕಾಂತಿ ಸೇರಿ ಅಲ್ಪಾವಧಿ- ಮಧ್ಯಮಾವಧಿಯ ತೊಗರಿ ಬೆಳೆಗೆ ಆದ್ಯತೆ ನೀಡಬಹುದಾಗಿದೆ. 
ಒಮ್ಮೆಗೆ ಮಾನ್ಸೂನ್ ಪ್ರವೇಶ ಉತ್ತಮವಾಗಿ ಆದಲ್ಲಿ ಜಿಲ್ಲೆಗೆ ಅದೃಷ್ಟವೂ ಬರಬಹುದು ಎಂಬುದಾಗಿಯೂ ರೈತರು ಕನಸು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ರಾಗಿ ಪ್ರದೇಶ ಹೆಚ್ಚು ವಿಸ್ತರಣೆ ಆಗುತ್ತಿದೆ. ಮಳೆ ಅಭಾವವಾದಲ್ಲಿ ದನಕರುಗಳಿಗೆ ಮೇವು, ಉತ್ತಮ ಎಂಎಸ್ಪಿ ಸಿಗುವ ಕಾರಣಕ್ಕೆ ಮೆಕ್ಕೆಜೋಳಕ್ಕಿಂತ ರಾಗಿ ಬೆಳೆಯುವುದು ಅನುಕೂಲ ಎಂಬ ಕೃಷಿ ಅಧಿಕಾರಿಗಳ ಸಲಹೆ ಈಗಿನ ಸಂದರ್ಭಕ್ಕೆ ಹೇಳಿಮಾಡಿಸಿದಂತಿದೆ.

ತಲುಪೀತೆ ನಿಗದಿತ ಗುರಿ? 

ಜಿಲ್ಲೆಯಲ್ಲಿ 2,14,938 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಇದರಲ್ಲಿ 1,27,245 ಹೆಕ್ಟೇರ್ ಮೆಕ್ಕೆಜೋಳ, 63,800 ಹೆ. ಭತ್ತ, 13,659 ಹೆ. ರಾಗಿ, 2500 ಹೆ. ತೊಗರಿ, 3315 ಹೆ. ಶೇಂಗಾ, 1,120 ಹೆ. ಹತ್ತಿ, 3299 ಹೆ. ಇತರ ಬೆಳೆ ಬೆಳೆಯುವ ನಿರೀಕ್ಷೆ ಇತ್ತು.
ಈಗಾಗಲೇ ಭತ್ತದ ಕಟಾವು ಮುಗಿಯುತ್ತ ಬಂದಿದ್ದು ಮುಂದಿನ ವಾರದಲ್ಲಿ ಅನ್ನದಾತರು ಬಿತ್ತನೆಗೆ ಸಸಿ ಮಾಡಿ ಮಾಡಲಿದ್ದಾರೆ. 
ಕೃಷಿ ಇಲಾಖೆಯ ಪ್ರಕಾರ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರಗಳಿಗೆ ಕೊರತೆ ಇಲ್ಲ. ಸದ್ಯಕ್ಕೆ 14500 ಟನ್ ಯೂರಿಯಾ ಲಭ್ಯತೆ ಇದ್ದಾಗ್ಯೂ ಒಂದೂವರೆ ತಿಂಗಳಲ್ಲಿ ಯೂರಿಯಾ ಅಭಾವ ಕಾಡಬಹುದು ಎನ್ನಲಾಗುತ್ತದೆ. ಉಳಿದಂತೆ 34,500 ಟನ್ ಕಾಂಪ್ಲೆಕ್ಸ್ ಗೊಬ್ಬರ ಸಂಗ್ರಹವಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 60,444 ಕ್ವಿಂಟಾಲ್ ಪ್ರಮಾಣದ ಬಿತ್ತನೆ ಬೀಜದ ಬೇಡಿಕೆ ಇದೆ. ಆದರೆ ಅದಕ್ಕೂ ಹೆಚ್ಚಿನ 77,000 ಕ್ವಿಂ. ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರ ಹಾಗೂ ಅಂಗಡಿಗಳಲ್ಲಿ ದಾಸ್ತಾನಿದೆ. ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಶೇಂಗಾ, ಸೋಯಾಬಿನ್, ಸೂರ್ಯಕಾಂತಿ, ಅಲಸಂದಿ, ಅವರೆ ಮೊದಲಾದ ಬಿತ್ತನೆ ಬೀಜಗಳ ಮಾರಾಟಕ್ಕೆ ಲಭ್ಯವಿವೆ. 
ಆದರೆ ಹದ ಮಳೆಯ ಸುಳಿವು ಕಾಣದೆ ರೈತರು ಚಿಂತೆಗೆ ಜಾರಿದ್ದಾರೆ. ಇನ್ನು ಒಂದೆರಡು ದಿನದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಆದರೆ ಇದರಿಂದ ಹೆಚ್ಚೇನು ಪ್ರಯೋಜನವಾಗದು. ಜಿಲ್ಲೆಯಾದ್ಯಂತ ಜಡಿ ಮಳೆಯಾದಲ್ಲಿ ಬಿತ್ತನೆಯ ಕಾರ್ಯ ಚುರುಕು ಪಡೆಯಬಹುದು. ಅದರ ಹೊರತಾಗಿ ರೈತರ ಸಂಕಷ್ಟ ತಪ್ಪಿದ್ದಲ್ಲ.

ಪರ್ಯಾಯ ಬೆಳೆ ಯೋಜನೆಯತ್ತ ಹೆಜ್ಜೆ 

ಎಲ್‌ನಿನೋ ಪ್ರಭಾವದಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಅಭಾವ ಕಾಡುವ ಸಾಧ್ಯತೆ ಇದೆ. ಹೀಗಾಗಿ ವಾರಾಂತ್ಯದವರೆಗೂ ಮಳೆಯ ಪ್ರಮಾಣ ಕಾದು ನೋಡಿ, ಪರ್ಯಾಯ ಬೆಳೆ ಯೋಜನೆ ತಯಾರಿಸುವ ದಿಕ್ಕಿನಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯೂ ಹೆಜ್ಜೆ ಇಟ್ಟಿದೆ. ರಾಗಿ, ಹುರುಳಿ, ಅಲಸಂದಿ, ಸಜ್ಜೆ, ನವಣೆ ಇತರ ಸಿರಿಧಾನ್ಯಗಳ ಉತ್ತೇಜನಕ್ಕೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ. 

ಈ ಬಾರಿ ಎಲ್ಲೆಡೆ ಮಳೆಯ ಸರಾಸರಿ ಕೊರತೆ ಆಗಬಹುದು. ಹೀಗಾಗಿ ರೈತರು ಬಿರುಸು ಮಳೆಯಾದ ಬಳಿಕವೇ ಬಿತ್ತನೆ ಮಾಡುವುದು ಸೂಕ್ತ,. ಒಣನೆಲದಲ್ಲಿ ಬಿತ್ತನೆ ಮಾಡಬಾರದು. ಮಳೆ ಅಭಾವ ಹೆಚ್ಚಿದಲ್ಲಿ ಮೆಕ್ಕೆಜೋಳ ಬದಲಾಗಿ ರಾಗಿ ಇತರೆ ಅಲ್ಪಾವಧಿಯ ಬೆಳೆ ಬೆಳೆಯುವತ್ತ ಗಮನ ಹರಿಸಬೇಕು.— ಕೆ. ಜಿಯಾವುಲ್ಲಾ, ಜಂಟಿ ಕೃಷಿ ನಿರ್ದೇಶಕ.

— ಕೆ. ಜಿಯಾವುಲ್ಲಾ, ಜಂಟಿ ಕೃಷಿ ನಿರ್ದೇಶಕ.

ವಿಚಿತ್ರ ಎನಿಸುವ ಕಾಲಮಾನವಿದು. ಹೀಗಾಗಿ ಮೊದಲಿನಂತೆ ಮಳೆಯ ನಿಗದಿತ ಅವಧಿ ಹೇಳಲಾಗದು. ರೈತರು ಸಮಚಿತ್ತದಿಂದ ಮಳೆ ಬರುವವರೆಗೆ ತಾಳ್ಮೆಯಿಂದಿದ್ದು ನಂತರದಲ್ಲಿ ಬಿತ್ತನೆ ಮಾಡುವುದು ಸೂಕ್ತ. ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ ನೀಡಬೇಕು. ಆರ್ಥಿಕತೆ ದೃಷ್ಟಿಯಿಂದ ಹೈನುಗಾರಿಕೆ, ಜೇನು ಸಾಕಣೆ ಕಡೆಗೂ ಗಮನ ಹರಿಸಬೇಕು.

— ಹೆದ್ನೆ ಮುರುಗೇಶಪ್ಪ, ಪ್ರಗತಿಪರ ರೈತ.