ಕುಕ್ಕುವಾಡ ಗ್ರಾಮದಲ್ಲಿ ಜಲಾವೃತವಾದ ಭತ್ತದ ಗದ್ದೆ 
ದಾವಣಗೆರೆ

ಧರೆಗೊರಗಿದ ಭತ್ತದ ಪೈರು ಚಿಂತೆಯಲ್ಲಿ ಬೆಳೆಗಾರರು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಂತ ಚಾಪೆ ಹಾಸಿದ 467.72 ಹೆ. ಬೆಳೆ
  • ಉತ್ತಮ ಧಾರಣೆ ಇದ್ದರೂ ಕೈಗೆ ಸಿಗದ ಪರಿಸ್ಥಿತಿ
  • ಕೃತಿಕಾ ಮಳೆಯಬ್ಬರಕ್ಕೆ ಇನ್ನಷ್ಟು ಹಾನಿ ಭೀತಿ
ದಾವಣಗೆರೆ: ಕೃತಿಕಾ ಮಳೆಯಬ್ಬರಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಕೆಲವು ವಾಣಿಜ್ಯ ಬೆಳೆಗಳು ಚೇತರಿಸಿಕೊಂಡಿವೆ. ಆದರೆ, ಹಲವೆಡೆ ಹುಲುಸಾಗಿದ್ದ ಭತ್ತದ ಫಸಲು ನೆಲಕ್ಕೆ ಚಾಪೆಯಂತೆ ಹಾಸಿದ್ದು ಅನ್ನದಾತರನ್ನು ಚಿಂತೆಗೀಡು ಮಾಡಿದೆ.
ಭತ್ತ ಬೆಳೆಗಾರರಿಗೆ ಈ ಬಾರಿ ಅನಾಯಾಸವಾಗಿ ಭದ್ರೆ ಆಸರೆ ದಕ್ಕಿತ್ತು. ಕಳೆದ ಎರಡ್ಮೂರು ವಾರದಲ್ಲಿ ಶೇ.30ರಷ್ಟು ಭತ್ತ ಕಟಾವಾಗಿ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯೂ ಸಿಗುತ್ತಿತ್ತು. ಅಷ್ಟರೊಳಗೆ ಸುರಿದ ವಾರಪ್ಪೊತ್ತಿನ ಮಳೆಯಿಂದಾಗಿ ಬೆಳೆಗಾರರ ಕನಸು ಭಗ್ನವಾಗಿದೆ.
ಮೇ 22ರವರೆಗೆ 41 ಮಿ.ಮೀ. ವಾಡಿಕೆ ಮಳೆ ಇದ್ದರೆ ವಾಸ್ತವಿಕವಾಗಿ 62.7 ಮಿ.ಮೀ. ಮಳೆ ಹನಿದಿದೆ. ಇದರಿಂದ ಭತ್ತದ ಗದ್ದೆಗಳು ಜಲಾವೃತವಾಗಿ ತೆನೆಗಳು ನೀರಿನಲ್ಲಿ ಮುಳುಗಿವೆ. ಹುಲ್ಲು ಸಹ ಕೊಯ್ಲು ಮಾಡಲಾಗದೆ ಕೊಳೆಯಲು ಆರಂಭಿಸಿದೆ. ಕೈಗೆ ಬಂದ ತುತ್ತು ನೀರು ಪಾಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ ಅಂದಾಜು 467.72 ಹೆ. ಪ್ರಮಾಣದ ಭತ್ತ ಹಾನಿಗೀಡಾಗಿದೆ. ಇದರಲ್ಲಿ ಚನ್ನಗಿರಿ ತಾಲೂಕಿನಲ್ಲಿ 278.4 ಹೆ. ಹರಿಹರ ತಾಲೂಕಿನಲ್ಲಿ 120 ಹೆ., ದಾವಣಗೆರೆ 66.8 ಹಾಗೂ ಹೊನ್ನಾಳಿ ತಾಲೂಕಿನಲ್ಲಿ 2.52 ಹೆ. ಪ್ರದೇಶದ ಭತ್ತದ ಫಸಲು ನಾಶವಾಗಿದೆ. ಇನ್ನೂ 2-3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯಿದ್ದು ಮತ್ತಷ್ಟು ಹಾನಿಯಾಗುವ ಸಂಭವನೀಯತೆ ಇದೆ.
ಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಕಾರಣಕ್ಕೆ ಅಚ್ಚುಕಟ್ಟಿನ ಕೆಲವೆಡೆ ಈ ಬಾರಿ ಭತ್ತದ ಕೊರತೆ ಕಾಡಿದ್ದರೆ ದಾವಣಗೆರೆ ಜಿಲ್ಲೆಯಲ್ಲಿ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಭತ್ತ ಬಿತ್ತನೆಯಾಗಿತ್ತು. ಆರ್‌ಎನ್‌ಆರ್, ಜ್ಯೋತಿ ತಳಿಯ ಭತ್ತದ ಪೈರೊಡೆದಿತ್ತು. ಉತ್ತಮ ಇಳುವರಿಯಾಗಿದ್ದರೂ ಮಳೆ ಕಾರಣಕ್ಕೆ ರೈತರ ಕೈಗೆ ಅಸಲು ವೆಚ್ಚ ಸಹ ಸಿಗದಂತಾಗಿದೆ. ಎಕರೆಗೆ ಸುಮಾರು 1.5ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂಬುದು ಅನ್ನದಾತರ ಅಳಲು.
ರಾಜ್ಯ ಸರ್ಕಾರ ಈ ಬಾರಿ ಎ ಗ್ರೇಡ್ ಭತ್ತಕ್ಕೆ 2461, ಸಾಮಾನ್ಯ ಭತ್ತಕ್ಕೆ 2441 ರೂ. ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಏ. 8ರಿಂದ ತಿಂಗಳ ಕಾಲ ನೋಂದಣಿಗೆ ಸಮಯ ನಿಗದಿಯಾಗಿತ್ತು. ಈ ಹೊತ್ತಿಗಾಗಲೆ ಭತ್ತ ಖರೀದಿ ಕೇಂದ್ರ ಸುದ್ದಿಯಲ್ಲಿ ಇರಬೇಕಿತ್ತು. ಆದರೆ ಹೊರಗಿನ ಮಾರುಕಟ್ಟೆಯಲ್ಲಿ ಬೆಂಬಲಬೆಲೆಗಿಂತಲೂ ಉತ್ತಮ ದರ ಸಿಗುವ ಹಿನ್ನೆಲೆಯಲ್ಲಿ ರೈತರು ಸಹ ಖರೀದಿ ಕೇಂದ್ರದ ಚಿಂತೆ ಕೈಬಿಟ್ಟ್ಟಿದ್ದರು.
ದಾವಣಗೆರೆ ಎಪಿಎಂಸಿಯಲ್ಲಿ ಮೇನಲ್ಲಿ (20ನೇ ತಾರೀಕಿನವರೆಗೆ ) 83003 ಕ್ವಿಂಟಾಲ್ ಭತ್ತ ಆವಕವಾಗಿದೆ. ರೈತರಿಗೆ ಗರಿಷ್ಠ 2880 ರೂ., 2538 ಸರಾಸರಿ ದರ ದಕ್ಕಿದೆ. ಕಳೆದ ಬಾರಿ ಇದೇ ವೇಳೆಗೆ 1,63,471 ಕ್ವಿಂಟಾಲ್ ಭತ್ತ ಆವಕವಾಗಿತ್ತು. ಗರಿಷ್ಠ 2414 ರೂ., 1890 ರೂ. ಮಾದರಿ ದರ ದೊರೆತಿತ್ತು.
ಮಾರುಕಟ್ಟೆಗೆ ಸಾಗಣೆ ವೆಚ್ಚ, ಒಣಗಿಸುವ ಗೋಜೇ ಬೇಡ ಎಂದು ಅನೇಕ ರೈತರು ಗದ್ದೆ ಬಳಿಯೇ ನೇರ ಮಾರಾಟ ಮಾಡಿದ್ದಾರೆ. ಗರಿಷ್ಠ 2600 ರೂ.ವರೆಗೆ ದರ ದೊರೆತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಭತ್ತ್ತ ಬೆಳೆಗಾರರ ಅಳಲಿಗೆ ಸ್ಪಂದಿಸಬೇಕು. ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಅನ್ನದಾತರ ಮೊರೆ.

ಜಿಲ್ಲೆಯಲ್ಲಿ ಅಂದಾಜು 467.72 ಹೆ. ಪ್ರಮಾಣದ ಭತ್ತ ಹಾನಿಗೀಡಾಗಿದೆ. ರೈತರು ಗದ್ದೆಯಲ್ಲಿ ನೀರು ನಿಲ್ಲದಂತೆ ಗಮನ ಹರಿಸಬೇಕಾಗಿದೆ. ಕಂದಾಯ ಇಲಾಖೆ ಜತೆಗೆ ಜಂಟಿ ಸಮೀಕ್ಷೆ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ.

— ಕೆ. ಜಿಯಾವುಲ್ಲಾ, ಜಂಟಿ ಕೃಷಿ ನಿರ್ದೇಶಕ.

ರೈತರು ಸಾಲ ಮಾಡಿ ಬೆಳೆದ ಭತ್ತ ಮಣ್ಣು ಪಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಜಿಲ್ಲಾ ಸಚಿವರು, ಸಂಸದರು ಹಾಗೂ ಶಾಸಕರು ರೈತರ ಪರ ಕಾಳಜಿ ವಹಿಸಿ ರೈತರ ಹೊಲಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಬೇಕು. ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕೊಡಿಸಬೇಕು.

— ಬಿ.ಎಂ. ಸತೀಶ್ ಕೊಳೇನಹಳ್ಳಿ, ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ.

ಜ.9ರಿಂದಲೇ ಭದ್ರಾ ನೀರು ಸಿಕ್ಕಿದ್ದರಿಂದ ಅಚ್ಚುಕಟ್ಟಿನ ಭತ್ತ ಬೆಳೆಗಾರರು ಉತ್ತಮ ಬೆಳೆ ಕಂಡರು. ಮಳೆಯಿಂದಾಗಿ ಭತ್ತ ನಾಶವಾಗಿದ್ದು ಎಕರೆಗೆ ಸುಮಾರು 45ರಿಂದ 50 ಚೀಲ ನಷ್ಟವಾಗಿದೆ. ಈ ಸಲ ಉತ್ತಮ ದರ ಇದ್ದರೂ ಭತ್ತ ಬೆಳೆಗಾರರಿಗೆ ಸುಖವಿಲ್ಲದಂತಾಗಿದೆ.

— ಎಚ್.ಆರ್. ಲಿಂಗರಾಜು, ಭಾರತೀಯ ರೈತ ಒಕ್ಕೂಟ ಜಿಲ್ಲಾಧ್ಯಕ್ಷ.

ಕುಕ್ಕುವಾಡ ಗ್ರಾಮದಲ್ಲಿ ಸುಮಾರು 25 ಎಕರೆ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ನಾಲೆಯ ಬಸಿನೀರು ತಗ್ಗು ಪ್ರದೇಶಕ್ಕೆ ಬರುತ್ತಿದೆ. ನನ್ನ ಒಂದು ಎಕರೆ ಭತ್ತ ಕೂಡ ಚಾಪೆ ಹಾಸಿದ್ದು 90 ಸಾವಿರ ರೂ. ಹಾನಿಯಾಗಿದೆ. ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ.

— ಪ್ರವೀಣ್, ಕುಕ್ಕುವಾಡ ಗ್ರಾಮದ ರೈತ.