ಜಗಳೂರು ತಾಲೂಕಿನ ಲಿಂಗಣ್ಣನಹಳ್ಳಿ, ಅರಿನಗುಂಡಿ, ಕಟ್ಟಿಗೆಹಳ್ಳಿ ಮತ್ತು ತೋರಣಗಟ್ಟೆ ಗ್ರಾಮದ ರೈತರು ಸೋಮವಾರ ಖಾಸಗಿ ವಿದ್ಯುತ್ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದರು.Protest
- ವಿದ್ಯುತ್ ಲೈನ್ ತೆರವಿಗೆ ಆಗ್ರಹ
- ರೈತರಿಗೆ ಭಯ ಹುಟ್ಟಿಸುತ್ತಿರುವ ಅಧಿಕಾರಿಗಳು
ಜಗಳೂರು: ವಿದ್ಯುತ್ ಕಂಬಗಳಿಗೆ ಪರಿಹಾರ ನೀಡದ ಖಾಸಗಿ ಕಂಪನಿ, ಅಡಕೆ ಬೆಳೆಯಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ತೆರವಿಗೆ ಆಗ್ರಹ, ರೈತರಿಗೆ ಭಯ ಹುಟ್ಟಿಸುತ್ತಿರುವ ಕಂಪನಿ ಅಧಿಕಾರಿಗಳು, ನ್ಯಾಯ ಕೊಡಿಸಿ ಎಂದು ಕೈಯಲ್ಲಿ ವಿಷದ ಬಾಟಲು ಹಿಡಿದು ಪ್ರತಿಭಟಿಸಿದ ರೈತರು.
ಹೌದು, ಜಗಳೂರು ತಾಲೂಕಿನ ಲಿಂಗಣ್ಣನಹಳ್ಳಿ, ಅರಿಷಿನಗುಂಡಿ, ಕಟ್ಟಿಗೆಹಳ್ಳಿ ಮತ್ತು ತೋರಣಗಟ್ಟೆ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಪ್ರತಿಭಟನೆಯ ಮೂಲಕ ಖಾಸಗಿ ವಿದ್ಯುತ್ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಐತಿಹಾಸಿಕ ಗುಹೇಶ್ವರನ ಗುಡ್ಡದಲ್ಲಿ 2001ರಲ್ಲಿ ಅಳವಡಿಸಿದ (25 ವರ್ಷಗಳ ಹಿಂದೆ) ಖಾಸಗಿ ವಿದ್ಯುತ್ ಕಂಪನಿಯು 54 ರೈತರ ಜಮೀನುಗಳಲ್ಲಿ ಪರಿಹಾರದ ನೆಪದಲ್ಲಿ 33 ಕೆವಿ ವಿದ್ಯುತ್ ಕಂಬಗಳನ್ನು ಅಳವಡಿಸಿದೆ. ಆದರೆ ಸರಿಯಾಗಿ ಪರಿಹಾರ ಹಣ ನೀಡದೆ ಅಲೆದಾಡಿಸುವ ಜತೆ ವಿದ್ಯುತ್ ಕಂಬಗಳ ತೆರವಿಗೆ ಕ್ರಮವಹಿಸದೆ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದ್ದಾರೆ.
ಕಸಬಾ ಹೋಬಳಿಯ ವ್ಯಾಪ್ತಿಯ ಜಮೀನಿನಲ್ಲಿ ಖಾಸಗಿ ವಿದ್ಯುತ್ ಕಂಪನಿಯು 33 ಕೆವಿ ಮಾರ್ಗ ನಿರ್ಮಿಸಲು ಕೃಷಿ ಭೂಮಿಯನ್ನು ಪರಿವರ್ತನೆಗೊಳಿಸದೆ ಮತ್ತು ಅಕ್ಕಪಕ್ಕದ ಜಮೀನುಗಳ ರೈತರ ಬಳಿ ಸರಿಯಾದ ಪೂರ್ವಾನುಮತಿ ಪಡೆಯದೆ 54 ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡಿದೆ. ರೈತರಿಂದ 15 ವರ್ಷಗಳಿಗೆ ಒಪ್ಪಿಗೆ ಪತ್ರ ಬರೆಸಿಕೊಂಡಿದ್ದರು. ಆಗ ಕೇವಲ ಮೂರು ನಾಲ್ಕು ಸಾವಿರ ನೀಡಿ ಕೈತೊಳೆದುಕೊಂಡಿದ್ದ ಕಂಪನಿ ಅಗ್ರಿಮೆಂಟ್ ಮುಗಿದರೂ ರೈತರಿಂದ ರಿನಿವಲ್ ಮಾಡಿಸಿಕೊಳ್ಳದೇ ಮತ್ತೆ ದುರಸ್ತಿ ಕಾರ್ಯ ಮಾಡಲು ಮುಂದಾಗಿತ್ತು ಎಂದು ಆರೋಪಿಸಿದ್ದಾರೆ.
ರೈತರ ಜಮೀನುಗಳಲ್ಲಿ ಅಡಕೆ ತೋಟಗಳು ತಲೆ ಎತ್ತಿದ್ದು ಅವುಗಳನ್ನು ಕಟಾವು ಮಾಡಿ ಲೈನ್ ದುರಸ್ತಿ ಮಾಡುತ್ತೇವೆ ಎಂದು ತಿಳಿಸಿ ತಾಲೂಕು ಆಡಳಿತದ ಕಂದಾಯ ನಿರೀಕ್ಷಕರು ಮತ್ತು ಭೂಮಾಪನಾ ಇಲಾಖೆಯಿಂದ ಕಳೆದ ನವೆಂಬರ್ 1ರಂದು ಸರ್ವೇ ಮಾಡಿಸಿ ತೋಟಗಾರಿಕೆ ಇಲಾಖೆ ಅಧಿಸೂಚನೆಯಂತೆ ಪರಿಹಾರ ನೀಡುತ್ತೇವೆ ಎಂದು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಕಾನೂನು ಪ್ರಕಾರ ಕೊಡಲು ಬರುವುದಿಲ್ಲ ಎಂದು ಸಬೂಬು ನೀಡಿದ್ದರಿಂದ ರೊಚ್ಚಿಗೆದ್ದ ರೈತರು ಕಂಪನಿ ವಿರುದ್ಧ ಸಿಡಿದೆದ್ದು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ನಾಗರಾಜ್ ಮಾತನಾಡಿ, ಕಂಪನಿಯವರು ಬಫರ್ ಜೋನ್‌ನಲ್ಲಿವೆ ಎಂದು ರೈತರ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ. ಸರ್ವೇ ನಂತರ ಮೌಲ್ಯಮಾಪನ ವರದಿ ಬಂದಮೇಲೆ ಪರಿಹಾರ ನೀಡುತ್ತೇವೆ ಎಂದಿದ್ದರು. ಶಾಸಕ ಬಿ. ದೇವೇಂದ್ರಪ್ಪ ಸಮ್ಮುಖದಲ್ಲಿ ಮೂರು ಬಾರಿ ಸಭೆ ನಡೆಸಲಾಗಿತ್ತು. ಶಾಸಕರು ಸಹ ಖಡಕ್ ಎಚ್ಚರಿಕೆ ನೀಡಿ ಪರಿಹಾರ ನೀಡುವಂತೆ ಸೂಚಿಸಿದ್ದರು. ಆದರೆ ಈಗ ಕಂಪನಿಯವರು ಪರಿಹಾರ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕಂಪನಿ ಪರಿಹಾರ ನೀಡದೇ ಇದ್ದರೆ ವಿದ್ಯುತ್ ಕಂಬಗಳನ್ನು ಪವನ್ ವಿದ್ಯುತ್ ಕಂಪನಿ ತೆರವುಗೊಳಿಸಲಿ ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ರಾಮಯ್ಯ, ಪಿಎಸ್‌ಐ ಗಾದ್ರಿಲಿಂಗಪ್ಪ ಪ್ರತಿಭಟನಾ ರೈತರನ್ನು ಮನವೊಲಿಸುವ ಯತ್ನ ನಡಿಸಿದರು. ಆದರೆ ಪಟ್ಟು ಬಿಡದ ರೈತರೂ, ವರ್ಷದಿಂದ ಸರ್ಕಾರಿ ಕಚೇರಿಗೆ ಅಲೆದಾಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರೂ ತಹಸೀಲ್ದಾರ್ ಸೇರಿ ಯಾರು ಕೂಡ ನಮಗೆ ಧ್ವನಿಯಾಗದೇ ಕಂಪನಿ ಪರವಾಗಿ ನಿಂತಿದ್ದಾರೆ. ಹಾಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಕಂಪನಿಯವರು ಬಂದು ಸಭೆ ನಡೆಸಿ ಸಮಸ್ಯೆ ಪರಿಹರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು. ರೈತರಾದ ಜಯಣ್ಣ, ತಿಮ್ಮಣ್ಣ, ಸಣ್ಣ ತಿಮ್ಮಣ್ಣ, ನಾಗರಾಜ್, ಬಸವರಾಜ್, ರಾಜಣ್ಣ, ಶಿವಯ್ಯ ಹಾಲಪ್ಪ, ಸಿದ್ದೇಶ್, ವೀರೇಶ್, ಚಿತ್ತಪ್ಪ, ಅರಿಶಿಣಗುಂಡಿ ನಾಗರಾಜ್, ಸಂತೋಷ್ ಇತರರಿದ್ದರು.