ಮಾಯಕೊಂಡ ಹೋಬಳಿ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಜಮೀನನ್ನು ಉಳುಮೆ ಮಾಡುತ್ತಿರುವ ರೈತ. crop 
ದಾವಣಗೆರೆ

ಬಹುಬೆಳೆಯತ್ತ ರೈತರ ಚಿತ್ತ! crop

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಮೆಕ್ಕೆಜೋಳ ಬಿತ್ತನೆಗೆ ಹಿಂದೇಟು
  • ಹೆಚ್ಚಾಗಿ ರಾಗಿ ಬೆಳೆಯಲು ಕೃಷಿಕರ ಒಲವು
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಹಾಗೂ ಕಸಬಾ ಹೋಬಳಿಗಳ ನೂರಾರು ಗ್ರಾಮಗಳ ರೈತರು ಈ ಬಾರಿ ಮೆಕ್ಕೆಜೋಳ ಬಿತ್ತನೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. crop
ನಿರಂತರ ನಷ್ಟ, ದುಬಾರಿ ವೆಚ್ಚ ಹಾಗೂ ಕಳೆ ಬಾಧೆಯಿಂದ ಬೇಸತ್ತಿರುವ ಕೃಷಿಕರು, ಈ ಮುಂಗಾರು ಹಂಗಾಮಿನಲ್ಲಿ ಸಾಂಪ್ರದಾಯಿಕ ಮೆಕ್ಕೆಜೋಳದ ಬದಲಾಗಿ ರಾಗಿ, ತೊಗರಿ, ಅಲಸಂದೆ, ಸಿಹಿ ಕುಂಬಳ, ಬೂದು ಕುಂಬಳ ಸೇರಿ ಬಹುಬೆಳೆ ಪದ್ಧತಿಯತ್ತ ಹೆಜ್ಜೆ ಇಡುತ್ತಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಮೆಕ್ಕೆಜೋಳದ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಮುಳ್ಳುಸಜ್ಜೆ ಕಳೆ ಬಾಧೆ, ವಿವಿಧ ರೋಗಗಳು ಮತ್ತು ಕುಸಿಯುತ್ತಿರುವ ಇಳುವರಿ ರೈತರನ್ನು ಕಂಗಾಲು ಮಾಡಿದೆ. ಇದರೊಂದಿಗೆ ಕೃಷಿ ವೆಚ್ಚವೂ ದುಪ್ಪಟ್ಟಾಗಿದೆ. ಪ್ರಸ್ತುತ ಒಂದು ಕ್ವಿಂಟಾಲ್ ಬಿತ್ತನೆಗೆ ಬಳಸುವ ರಸಗೊಬ್ಬರದ ಬೆಲೆ 4,300 ರೂ. ದಾಟಿದ್ದರೆ, 4 ಕೆಜಿ ಮೆಕ್ಕೆಜೋಳದ ಬಿತ್ತನೆ ಬೀಜದ ಪ್ಯಾಕೆಟ್ ದರ 1,500 ರಿಂದ 1,800 ರೂ. ತಲುಪಿದೆ. ಬಿತ್ತನೆಯಿಂದ ಕಟಾವಿನವರೆಗೆ ಪ್ರತಿ ಎಕರೆಗೆ ಕನಿಷ ್ಠ 18,000 ದಿಂದ 20,000 ರೂ. ವೆಚ್ಚವಾಗುತ್ತಿದೆ.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದರೂ, ರಾಜ್ಯ ಸರ್ಕಾರದ ಖರೀದಿ ಕೇಂದ್ರಗಳು ಹೆಸರಿಗಷ್ಟೇ ಆರಂಭವಾಗಿದ್ದರಿಂದ ಸಾಮಾನ್ಯ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಸ್ಥಳೀಯ ವರ್ತಕರಿಗೆ ಪ್ರತಿ ಕ್ವಿಂಟಾಲ್‌ಗೆ 1,500 ರಿಂದ 1,700 ರೂ. ರಂತೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ರಾಗಿ ಕಟಾವು ಮತ್ತು ಒಕ್ಕಣೆ ಪ್ರಕ್ರಿಯೆ ಹೆಚ್ಚು ಶ್ರಮದಾಯಕವಾಗಿದ್ದರಿಂದ ರೈತರು ಅದರಿಂದ ದೂರ ಸರಿದಿದ್ದರು. ಆದರೆ, ಈಗ ರಾಗಿ ಬಿತ್ತನೆ, ಕಟಾವು ಹಾಗೂ ಹುಲ್ಲನ್ನು ಪೆಂಡಿ ಕಟ್ಟುವ ಅತ್ಯಾಧುನಿಕ ಯಂತ್ರಗಳು ಬಂದಿರುವುದರಿಂದ ರೈತರಲ್ಲಿ ರಾಗಿ ಬೆಳೆಯಲು ಹೊಸ ಉತ್ಸಾಹ ಮೂಡಿದೆ. ಸರ್ಕಾರ ರಾಗಿಗೆ 4,800 ರೂ. ಬೆಂಬಲ ಬೆಲೆ ನೀಡುತ್ತಿದ್ದು, ಪ್ರತಿ ಎಕರೆಗೆ ಕೇವಲ 8,000 ದಿಂದ 10,000 ರೂ. ವೆಚ್ಚವಾಗುತ್ತದೆ. ಎಕರೆಗೆ 12 ರಿಂದ 15 ಕ್ವಿಂಟಾಲ್ ಇಳುವರಿ ಸಿಗುವುದರ ಜತೆಗೆ, ದನಕರುಗಳಿಗೆ ಉತ್ತಮ ಮೇವು ಸಿಗುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎನ್ನುತ್ತಾರೆ ಕೃಷಿಕರು.
ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರು: ಕಳೆದ ವರ್ಷ ಮೇ ಕೊನೆ ವಾರ ಹಾಗೂ ಜೂನ್ ಮೊದಲ ವಾರದಲ್ಲಿ ನಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು 12 ರಿಂದ 13 ಟನ್ ಮೆಕ್ಕೆಜೋಳದ ಬಿತ್ತನೆ ಬೀಜ ಮಾರಾಟವಾಗಿತ್ತು. ಆದರೆ ಈ ಬಾರಿ ರೈತರು ಮೆಕ್ಕೆಜೋಳದ ಬೀಜ ಖರೀದಿಸುತ್ತಿಲ್ಲ. ಬದಲಾಗಿ ತೊಗರಿ ಮತ್ತು ರಾಗಿ ಬಿತ್ತನೆ ಬೀಜ ಖರೀದಿಸಲು ಮುಗಿಬಿದ್ದಿದ್ದಾರೆ ಎಂದು ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಬೀರಪ್ಪ ತಿಳಿಸಿದ್ದಾರೆ.
"

ಕಳೆದ ಮುಂಗಾರು ಹಂಗಾಮಿನಲ್ಲಿ ಮಾಯಕೊಂಡ ಹೋಬಳಿಯಲ್ಲಿ 6,450 ಹೆಕ್ಟೇರ್, ಆನಗೋಡು ಹೋಬಳಿಯಲ್ಲಿ 15,426 ಹೆಕ್ಟೇರ್ ಹಾಗೂ ದಾವಣಗೆರೆ ಕಸಬಾ ಹೋಬಳಿಯಲ್ಲಿ 3,424 ಹೆಕ್ಟೇರ್ ಸೇರಿ ತಾಲೂಕಿನಲ್ಲಿ ಒಟ್ಟು 27,024 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಈ ಬಾರಿ ಮೆಕ್ಕೆಜೋಳದ ವಿಸ್ತೀರ್ಣದಲ್ಲಿ ಸುಮಾರು 7 ರಿಂದ 8 ಸಾವಿರ ಹೆಕ್ಟೇರ್‌ನಷ್ಟು ಕುಸಿತ ಕಂಡುಬರುವ ಸಾಧ್ಯತೆಯಿದೆ. ರೈತರು ಪರ್ಯಾಯ ಬೆಳೆಗಳ ಕಡೆಗೆ ಒಲವು ತೋರುತ್ತಿದ್ದಾರೆ.

— ಡಿ.ಎಂ. ಶ್ರೀಧರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ.
"

ವರ್ಷಗಳಿಂದ ಮೆಕ್ಕೆಜೋಳ ಹಾಕಿ ಭೂಮಿಯೆಲ್ಲ ಮುಳ್ಳುಸಜ್ಜೆ ಕಳೆಯಿಂದ ಹಾಳಾಗಿತ್ತು. ಅದಕ್ಕೆ ಮುಕ್ತಿ ನೀಡಲು ಈ ಬಾರಿ ನನ್ನ 4 ಎಕರೆ ಜಮೀನಿನಲ್ಲಿ 2 ಎಕರೆ ರಾಗಿ, 1 ಎಕರೆ ತೊಗರಿ ಹಾಗೂ 1 ಎಕರೆ ಅವರೆ ಬಿತ್ತನೆ ಮಾಡಲು ಭೂಮಿ ಹದಗೊಳಿಸಿದ್ದೇನೆ. ಹದ ಮಳೆ ಬಂದ ತಕ್ಷಣ ಬಿತ್ತನೆ ಮಾಡುತ್ತೇನೆ.

— ಸಿದ್ದಾಚಾರಿ, ಕೃಷಿಕ, ಹುಚ್ಚವ್ವನಹಳ್ಳಿ.