ವಿದ್ಯುತ್ ಸಂಸ್ಥೆ ಖಾಸಗೀಕರಣವನ್ನು ವಿರೋಧಿಸಿ ಜಗಳೂರು ಪಟ್ಟಣದಲ್ಲಿ ಗುರುವಾರ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗುರುಬಸವರಾಜಪ್ಪಗೆ ಮನವಿ ಸಲ್ಲಿಸಲಾಯಿತು. ಕಾನನಕಟ್ಟೆ ತಿಪ್ಪೇಸ್ವಾಮಿ, ಸಿ.ಎಂ. ಹೊಳೆ ಚಿರಂಜೀವಿ, ಬೈರನಾಯಕನಹಳ್ಳಿ ರಾಜು, ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಇತರರಿದ್ದರು. Protest 
ದಾವಣಗೆರೆ

ಸರ್ಕಾರದ ನಡೆ ಧಿಕ್ಕರಿಸಿ ಜಗಳೂರಿನಲ್ಲೂ ರೈತರ ಆಕ್ರೋಶ Protest

ಪ್ರಮುಖ ಮುಖ್ಯಾಂಶಗಳು

  • ಜಗಳೂರು ಪಟ್ಟಣದ ಹಲವೆಡೆ ಮೆರವಣಿಗೆ
  • ಕೃಷಿಕರ ಪಾಲಿಗೆ ಮರಣ ಶಾಸನದ ಆತಂಕ
ಜಗಳೂರು: ಖಾಸಗಿ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಲು ಮುಂದಾಗಿರುವ ಸರ್ಕಾರದ ನಡೆ ಧಿಕ್ಕರಿಸಿ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. Protest
ಪಟ್ಟಣದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಹಾತ್ಮಗಾಂಧಿ ಹಳೇ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ತಾಲೂಕು ಕಚೇರಿಗೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಹಸೀಲ್ದಾರ್ ಗುರುಬಸವರಾಜಪ್ಪಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ಅಧಿಕಾರಕ್ಕೂ ಮುನ್ನ ರೈತಸ್ನೇಹಿ ಸರ್ಕಾರ ಎಂದು ಹೇಳಿಕೊಂಡು ಗದ್ದುಗೆ ಏರಿದ ಮೇಲೆ ರೈತ ವಿರೋಧಿ ಯೋಜನೆಗಳನ್ನು ಜಾರಿಗೆ ತಂದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿವೆ. ಮಳೆ, ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿದ್ಯುತ್
ಖಾಸಗೀಕರಣಕ್ಕೆ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಮಾತನಾಡಿ, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಶೇ.60ಕ್ಕೂ ಹೆಚ್ಚು ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಂಬಂಧಿತ ಕಾಯಕಗಳನ್ನು ಮಾಡುತ್ತಿದ್ದಾರೆ. ರೈತರ ಬದುಕನ್ನು ಕಡೆಗಣಿಸಿ ಸರ್ಕಾರ ವಿದ್ಯುತ್ ನಿಗಮ ಖಾಸಗೀಕರಣ ಮಾಡಿದಲ್ಲಿ ಕೃಷಿಕರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ನಗರ ಘಟಕದ ಅಧ್ಯಕ್ಷ ಬೈರನಾಯಕನಹಳ್ಳಿ ರಾಜು ಮಾತನಾಡಿ, ವಿದ್ಯುತ್ ಖಾಸಗೀಕರಣ ನೀತಿ ಯುವ ಕೃಷಿಕರ ಪಾಲಿಗೆ ಮರಣ ಶಾಸನವಾಗಲಿದೆ. ಲಾಭದ ಗುರಿಯಿಂದ ಖಾಸಗಿ ಸಂಸ್ಥೆಗೆ ಸರ್ಕಾರ ವಿದ್ಯುತ್ ನಿಗಮ ನೀಡಲು ಮುಂದಾಗಿದೆ. ಇದರಿಂದ ರೈತರ ಹಿತಾಸಕ್ತಿ ಹಾಳಾಗುತ್ತದೆ ಎಂದು ಆರೋಪಿಸಿದರು.
ಬೆಸ್ಕಾಂ ಎಇಇ ಮಲ್ಲಿಕಾರ್ಜುನ್, ರೈತ ಸಂಘದ ಗೌಡಗೊಂಡನಹಳ್ಳಿ ಸತೀಶ್, ಕಸವನಹಳ್ಳಿ ನಾಗರಾಜ್, ಭರಮಸಮುದ್ರ ಗುರುಸಿದ್ದಪ್ಪ, ಚಿಕ್ಕಬನ್ನಿಹಟ್ಟಿ ವೀರೇಶ್, ಬಸವರಾಜ್ ಇತರರಿದ್ದರು.