Elephant ಉಬ್ರಾಣಿ ಭಾಗದಲ್ಲಿ ಕಾಡಾನೆ ಸೆರೆಗೆ ಆಗ್ರಹಿಸಿ ಅರಣ್ಯ ಇಲಾಖೆ ಕಚೇರಿ ಎದುರು ಶುಕ್ರವಾರ ರೈತರು ರಸ್ತೆ ತಡೆದು ಹಮ್ಮಿಕೊಂಡಿದ್ದ ಪ್ರತಿಭಟನೆ. ಜಿ. ಸೋಮಶೇಖರಪ್ಪ, ಲೋಕೇಶಪ್ಪ, ಎಸ್. ಮಲ್ಲಿಕಾರ್ಜುನ, ಕುಮಾರ್, ಮಹೇಶ್ವರಪ್ಪ ಚಿತ್ರದಲ್ಲಿದ್ದಾರೆ.
- ಉಬ್ರಾಣಿ ಹೋಬಳಿಯಲ್ಲಿ ನಿರಂತರ ಕಾಡಾನೆ ಹಾವಳಿ
- ಪುಂಡಾನೆ ಸೆರೆಹಿಡಿಯದಿದ್ದರೆ ಬೆಳೆ ಸಂಪೂರ್ಣ ನಾಶವೆಂದು ಅನ್ನದಾತರ ಎಚ್ಚರಿಕೆ
- ಅರಣ್ಯ ಇಲಾಖೆ ಕಚೇರಿ ಎದುರು ರೈತರ ಆಕ್ರೋಶ
ಚನ್ನಗಿರಿ: ತಾಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಯ ಉಪಟಳವನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಶುಕ್ರವಾರ ರೈತರು ಅರಣ್ಯ ಇಲಾಖೆ ಕಚೇರಿಯ ಮುಂಭಾಗ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.Elephant
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ನೆಲ್ಲಹಂಕಲು ರಾಜೇಶ್ ಮಾತನಾಡಿ, "ಉಬ್ರಾಣಿ, ದುರ್ವಿಗೆರೆ, ಬಸವಾಪುರ, ಮಾನವಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕಮಳಲಿ, ಚಿಕ್ಕಮಳಲಿ ತಾಂಡಾ, ಬಂಡೀಗುಡ್ಡ, ಚಿಕ್ಕಸಂದಿ ಹಾಗೂ ಕೊಡದಿಕೆರೆ ಗ್ರಾಮಗಳ ತೋಟಗಳಿಗೆ ಪ್ರತಿದಿನ ರಾತ್ರಿ ಆನೆಯೊಂದು ಆಹಾರ ಅರಸುತ್ತಾ ಬಂದು ಭಾರಿ ಹಾನಿ ಉಂಟುಮಾಡುತ್ತಿದೆ. ಈಗಾಗಲೇ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಡಕೆ ಮರ, ಬಾಳೆ ಹಾಗೂ ಭತ್ತದ ಬೆಳೆಗಳು ಸಂಪೂರ್ಣ ನಾಶವಾಗಿವೆ" ಎಂದು ಆಕ್ರೋಶ ಹೊರಹಾಕಿದರು.
ಹೊಲ-ಗದ್ದೆಗಳಿಗೆ ಆನೆಗಳು ನುಗ್ಗದಂತೆ ತಡೆಯಲು ಈ ಹಿಂದೆ ಅರಣ್ಯ ಇಲಾಖೆಯಿಂದ ಕಂದಕಗಳನ್ನು (Trenches) ತೋಡಲಾಗಿತ್ತು. ಆದರೆ, ಆ ಕಂದಕಗಳಲ್ಲಿ ಈಗ ಮಣ್ಣು ತುಂಬಿಕೊಂಡಿದೆ. ಹೀಗಾಗಿ ಆನೆಯು ಸುಲಭವಾಗಿ ಕಂದಕ ದಾಟಿಕೊಂಡು ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ರೈತರು ತೋಟಗಳಿಗೆ ತೆರಳಲು ತೀವ್ರ ಭಯಪಡುವಂತಾಗಿದೆ. 2011ರಲ್ಲಿ ಮೊದಲ ಬಾರಿಗೆ ಉಬ್ರಾಣಿ ಹೋಬಳಿಯ ಗ್ರಾಮಗಳಿಗೆ ಆನೆಗಳು ದಾಳಿ ಇಟ್ಟಾಗ ಇಲಾಖೆಯು ಸಿಬ್ಬಂದಿ ತಂಡಗಳನ್ನು ರಚಿಸಿ ಕಾವಲು ಕಾಯುವಂತೆ ಮಾಡಿತ್ತು. ಆದರೆ ಈಗ ಇಲಾಖೆ ಮೌನ ವಹಿಸಿದೆ. ತಕ್ಷಣವೇ ಈ ಪುಂಡಾನೆಯನ್ನು ಸೆರೆಹಿಡಿಯಬೇಕು, ಇಲ್ಲದಿದ್ದರೆ ಇಡೀ ಭಾಗದ ಬೆಳೆಗಳು ಸಂಪೂರ್ಣ ನಾಶವಾಗಲಿವೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಎಸಿಎಫ್ (ACF) ಶ್ರೀನಿವಾಸ್ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಕಾಡಾನೆಗಳು ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ಬರುವುದನ್ನು ತಡೆಯಲು ಇಲಾಖೆಯಿಂದ ಈಗಾಗಲೇ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆಯನ್ನು ಶಾಶ್ವತವಾಗಿ ಸೆರೆಹಿಡಿಯಲು ಅನುಮತಿ ನೀಡುವಂತೆ ಕೋರಿ ಹಿರಿಯ ಅಧಿಕಾರಿಗಳಿಗೆ ಅಧಿಕೃತ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕಾರ್ಯಾಚರಣೆ ನಡೆಸಲಾಗುವುದು. ಅಲ್ಲಿಯವರೆಗೆ ರೈತರು ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆ ಜಮೀನು ಹಾಗೂ ತೋಟಗಳಿಗೆ ಒಂಟಿಯಾಗಿ ಹೋಗಬೇಡಿ. ಆನೆಗಳನ್ನು ಓಡಿಸಲು ಮನೆಯಲ್ಲಿ ಪಟಾಕಿ ಅಥವಾ ದೊಡ್ಡ ಶಬ್ದ ಮಾಡುವ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಿ" ಎಂದು ಸಲಹೆ ನೀಡಿದರು.
ರೈತ ಮುಖಂಡರಾದ ಜಿ. ಸೋಮಶೇಖರಪ್ಪ, ಲೋಕೇಶಪ್ಪ, ಎಸ್. ಮಲ್ಲಿಕಾರ್ಜುನ, ಕುಮಾರ್, ಜಿ.ಇ. ಮಹೇಶ್ವರಪ್ಪ, ಎನ್.ಜೆ. ಲೋಹಿತ್, ಸಿ.ಎಂ. ರೂಪೇಶ್, ವಿ. ಹೇಮಂತ, ಸಿದ್ದರಾಮಪ್ಪ, ರುದ್ರಸ್ವಾಮಿ, ತಿಪ್ಪೇಶ್‌ನಾಯ್ಕ, ದಿನೇಶ್‌ನಾಯ್ಕ, ಬಸವರಾಜಪ್ಪ, ಶ್ರೀನಿವಾಸ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.