ಜಗಳೂರು: ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ಟವರ್ ನಿರ್ಮಾಣಕ್ಕೆ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಖಾಸಗಿ ಕಂಪನಿ ಕೊಟ್ಟ ಮಾತು ತಪ್ಪಿದೆ ಎಂದು ರೈತರು ಆರೋಪ ಮಾಡಿದ್ದು, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆ ಆರಂಭಿಸಿದ್ದಾರೆ. ಸೂಕ್ತ ಪರಿಹಾರ ನೀಡದೆ ವಿಳಂಬ ಮಾಡಲಾಗುತ್ತಿದೆ. ಕಂಪನಿ ಆಡಳಿತ ಮಂಡಳಿ ಕೊಟ್ಟ ಮಾತಿನಂತೆ ಪರಿಹಾರ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ದಾವಣಗೆರೆ-ಅನಂತಪುರ ಸಂಪರ್ಕ ಮಾರ್ಗದ 765 ಕೆವಿ ಬೃಹತ್ ವಿದ್ಯುತ್ ಟವರ್ (ಅನಂತಪುರ ಆರ್ಇಜೆಡ್) ನಿರ್ಮಿಸಲಾಗುತ್ತಿದೆ. ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಕಳೆದ ಮೂರು ತಿಂಗಳಿಂದ ಕಂಪನಿಯ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಶನಿವಾರ ಪುನಃ ಕೆಲಸ ಆರಂಭಿಸಲು ಬಂದಿದ್ದ ಸಿಬ್ಬಂದಿಯನ್ನು ತಡೆದ ರೈತನ ಕುಟುಂಬ, ಜಮೀನಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಮೌನ ಪ್ರತಿಭಟನೆ ಆರಂಭಿಸಿತ್ತು. ಭಾನುವಾರ ನೂರಾರು ರೈತರು ಹಾಗೂ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಸಾಥ್ ನೀಡಿದರು. ಸಂತ್ರಸ್ತ ರೈತ ವಸಂತಪ್ಪ ಮಾತನಾಡಿ, ಜಮೀನಿನಲ್ಲಿ ಬೃಹತ್ ವಿದ್ಯುತ್ ಟವರ್ ಅಳವಡಿಕೆಗೆ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಕಂಪನಿ ಆರಂಭದಲ್ಲಿ ಭರವಸೆ ನೀಡಿತ್ತು. ಅವರ ಕೊಟ್ಟ ಭರವಸೆಗೆ ಸಮ್ಮಿತಿ ನೀಡಲಾಗಿತ್ತು. ಆದರೆ ಈಗ ಕಾಮಗಾರಿ ಮುಗಿಯುವ ಹಂತದಲ್ಲಿ ಕೇವಲ 5,47,000 ರೂ. ಚೆಕ್ ನೀಡಿದ್ದಾರೆ. ಉಳಿದ ಮೊತ್ತ ಕೇಳಿದರೆ ಒಟ್ಟು 13,70,000 ರೂ. ಮಾತ್ರ ಕೊಡಲು ಸಾಧ್ಯ ಎಂದು ಹೇಳುತ್ತಿದ್ದಾರೆ ಎಂದರು. ಆರಂಭದಲ್ಲೊಂದು ಪರಿಹಾರದ ಮೊತ್ತ, ಕೆಲಸ ಮುಗಿಯುವಾಗ ಇನ್ನೊಂದು ಪರಿಹಾರದ ಮೊತ್ತ ನೀಡಿ ಶೋಷಿಸಲಾಗುತ್ತಿದೆ. ನಮಗೆ ಕಂಪನಿಯ ಹಣವೂ ಬೇಡ, ಟವರೂ ಬೇಡ. ನಮ್ಮ ಜಮೀನಿನಲ್ಲಿ ನಾವೇ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತೇವೆ, ಜಮೀನು ಕೊಡುವುದೇ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ಜಮೀನಿನ ಮಾಲೀಕ ವಸಂತಪ್ಪ, ಮಕ್ಕಳಾದ ಅಶೋಕ್, ಉಮೇಶ್, ದಸಂಸ ಸಂಚಾಲಕ ಕುಬೇಂದ್ರಪ್ಪ, ಮಲೆಮಾಚಿಕೆರೆ ಸತೀಶ್, ರೈತ ಸಂಘದ ಅಧ್ಯಕ್ಷ ಭರಮಸಮುದ್ರ ಕುಮಾರ್, ಲೋಕೇಶ್ ಮತ್ತಿತರರಿದ್ದರು.
ಜಮೀನಿನಲ್ಲಿ ರೈತ ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕುಳಿತ ಹಿನ್ನೆಲೆ ಖಾಸಗಿ ಕಂಪನಿಯೂ ಪೊಲೀಸ್ ಇಲಾಖೆ ಮೊರೆ ಹೋಗಿದೆ. ಇನ್ಸ್ಪೆಕ್ಟರ್ ಸಿದ್ರಾಮಯ್ಯ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು. ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆದರೂ ಕಂಪನಿಯ ಅಧಿಕಾರಿಗಳು ಪರಿಹರಿಸಲು ಮುಂದಾಗಲಿಲ್ಲ.
ಅನಕ್ಷರಸ್ಥ ರೈತನಿಗೆ ಆಸೆ-ಆಮಿಷ ಒಡ್ಡಿ ಸಹಿ ಪಡೆದು ಮೋಸ ಮಾಡಲು ಖಾಸಗಿ ಕಂಪನಿ ಯತ್ನಿಸುತ್ತಿದೆ.ಹುಚ್ಚವ್ವನಹಳ್ಳಿ ಮಂಜುನಾಥ್, ರೈತ ಸಂಘದ ಅಧ್ಯಕ್ಷ
ಕಷ್ಟದಲ್ಲಿದ್ದ ರೈತ ಜಮೀನು ನೀಡಲು ಒಪ್ಪಿದ್ದರೂ ಕಂಪನಿ ಪರಿಹಾರ ನೀಡದೆ ಸತಾಯಿಸುತ್ತಿದೆ. ನ್ಯಾಯ ಕೇಳಲು ಹೋದರೆ ಪೊಲೀಸರನ್ನು ಕರೆಸಿ ದೌರ್ಜನ್ಯ ಎಸಗಲು ಯತ್ನಿಸಿರುವುದು ಖಂಡನೀಯ.ಆರ್.ಜೆ. ರಾಮಪ್ಪ, ರೈತ ಸಂಘದ ಗೌರವಾಧ್ಯಕ್ಷ