ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತಸಂಗಮ ಕಾರ್ಯಕ್ರಮವನ್ನು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಬಸವಜಯಚಂದ್ರ ಸ್ವಾಮೀಜಿ, ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಆರ್.ಎಂ. ರವಿ, ದೇವರಾಜ್ ರೆಡ್ಡಿ ಇದ್ದರು.Conference
- ಪ್ರವಚನಕಾರ ಶೇಖರಯ್ಯ ಶಾಸ್ತ್ರಿ ಅಭಿಪ್ರಾಯ
- ರೈತ ಸಂಗಮ ಕಾರ್ಯಕ್ರಮ
ಚನ್ನಗಿರಿ: ದೇಶದಲ್ಲಿ ಪ್ರತಿವರ್ಷ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ರೈತರ ಹೆಸರಿನಲ್ಲಿ ಆಡಳಿತ ಹಿಡಿದ ಯಾವುದೇ ಸರ್ಕಾರದಲ್ಲಿ ಇವರ ಸಮಸ್ಯೆಗಳ ಪರವಾಗಿ ನಿಲ್ಲುವ ನಾಯಕರು ಇಲ್ಲದಿರುವುದು ವಿಪರ್ಯಾಸವೇ ಸರಿ ಎಂದು ಗದಗ ಜಿಲ್ಲೆ ರೋಣ ತಾಲೂಕಿನ ಪ್ರವಚನಕಾರ ಶೇಖರಯ್ಯ ಶಾಸ್ತ್ರಿ ಹೇಳಿದರು.
ತಾಲೂಕು ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಶನಿವಾರ ಲಿಂಗೈಕ್ಯ ಸಂಗಮನಾಥ ಸ್ವಾಮೀಜಿ ಮತ್ತು ಲಿಂಗೈಕ್ಯ ಚನ್ನಬಸವ ಸ್ವಾಮೀಜಿಯ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನ ಪ್ರಯುಕ್ತ ಏರ್ಪಡಿಸಲಾಗಿದ್ದ ರೈತ ಸಂಗಮದಲ್ಲಿ ಮಾತನಾಡಿದರು.
ಕೃಷಿ ಕ್ಷೇತ್ರ ಹಾಗೂ ರೈತರ ಮುಂದೆ ಅನೇಕ ದೊಡ್ಡ ಸವಾಲುಗಳಿವೆ. ದೇಶದಲ್ಲಿ ಶೇ.47ರಷ್ಟು ಜನರು ಕೃಷಿಯಿಂದ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಆಳುವ ಸರ್ಕಾರಗಳು ಅಭಿವೃದ್ಧಿ, ವಿಮಾನ ನಿಲ್ದಾಣ, ರಸ್ತೆ ಇನ್ನು ಅನೇಕ ಹೆಸರಿನಲ್ಲಿ ಉಳುವ ಜಮೀನನ್ನು ಕಿತ್ತುಕೊಳ್ಳುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕಂಡಿದ್ದಾರೆ. ಇರಲು ವಸತಿ, ನಿವೇಶನವಿಲ್ಲದೆ ರಸ್ತೆ, ಪಾರ್ಕ್ ಹಾಗೂ ವಾಹನಗಳಲ್ಲಿ ಮಲಗುತ್ತಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್ ಮಾತನಾಡಿ, ಆರೋಗ್ಯವನ್ನು ಉತ್ತಮ ವಾಗಿಟ್ಟುಕೊಳ್ಳುವ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಉತ್ತಮ ಆಹಾರ ಪದ್ಧತಿ ಯನ್ನು ರೂಢಿಸಿಕೊಳ್ಳಬೇಕು, ದುಶ್ಚಟಗಳಿಂದ ದೂರವಿರಬೇಕು ಎಂದರು.
ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಮಾತನಾಡಿ, ದೇಶದಲ್ಲಿ 25ವರ್ಷಕ್ಕೆ ಆಹಾರದ ಸಮಸ್ಯೆ ಕಾಣಲಿದೆ. ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಜೀವನೋಪಾಯಕ್ಕಾಗಿ ಇಟ್ಟುಕೊಂಡ ಜಮೀನುಗಳನ್ನು ವಶಕ್ಕೆ ಪಡೆಯುವುದು ಸರಿಯಲ್ಲ ಎಂದರು.
ಜನರು ಬದಲಾದಂತೆ ಋತುಗಳು ಬದಲಾಗುತ್ತಿದೆ. ಸರಿಯಾದ ಸಮಯದಲ್ಲಿ ಮಳೆ, ಚಳಿ, ಬಿಸಿಲು ಬೀಳದೆ ಎಲ್ಲವೂ ಅತಂತ್ರವಾಗಿವೆ. ಸರ್ಕಾರ ರೈತರಿಗಾಗಿ ಏನಾದರು ಮಾಡಬೇಕು ಎಂದಿದ್ದರೆ ಬೆಳೆದ ಬೆಳೆಗಳಿಗೆ ಮೊದಲು ಬೆಲೆಗಳನ್ನು ನಿಗದಿ ಮಾಡಬೇಕು. ರೈತಸಂಘ ಪ್ರಾರಂಭದಲ್ಲಿ ರಾಜ್ಯ ಸರ್ಕಾರವನ್ನು ನಡುಗಿಸುವ ಕೆಲಸ ಮಾಡುತ್ತಿತ್ತು. ಆದರೆ ಇಂದು ಸಂಘಟನೆಗಳು ಒಡೆದು ಶಕ್ತಿಯನ್ನು ಕಳೆದುಕೊಳ್ಳತ್ತಿದೆ ಎಂದರು.
ವಿರಕ್ತಮಠದ ಬಸವಜಯಚಂದ್ರ ಸ್ವಾಮೀಜಿ, ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ತುಮ್‌ಕೋಸ್ ಮಾಜಿ ಅಧ್ಯಕ್ಷ ಆರ್.ಎಂ. ರವಿ, ಚಿತ್ರದುರ್ಗ ಜಲಸಂರಕ್ಷಣಾ ತಜ್ಞ ದೇವರಾಜ್ ರೆಡ್ಡಿ ಇದ್ದರು.