ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶ್ವಾನ ದಳದ ಶೋಧಕಾರ್ಯ.
- ಕೋರ್ಟ್ ಆವರಣದಲ್ಲಿ 3 ತಾಸು ಶೋಧ
- ಎರಡನೇ ಬಾರಿಯ ಕರೆ ಹೆಚ್ಚಿಸಿದ್ದ ಆತಂಕ
- ಸೂಕ್ತ ಕ್ರಮಕ್ಕೆ ವಕೀಲರ ಸಂಘದ ಒತ್ತಾಯ
ದಾವಣಗೆರೆ: ದಾವಣಗೆರೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆಯ ಇಮೇಲ್ ಸಂದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಕೆಲ ತಾಸುಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರಾಜ್ಯ ಗುಪ್ತದಳ ಹಾಗೂ ಜಿಲ್ಲಾ ನ್ಯಾಯಾಲಯದ ಅಧಿಕೃತ ಮೇಲ್ ಐಡಿಗೆ ‘ಮಧ್ಯಾಹ್ನ 2 ಗಂಟೆಗೆ ನಿಮ್ಮ ನ್ಯಾಯಾಲಯದಲ್ಲಿ 23 ಸೈನೈಡು ಗುಂಡುಗಳು ಸ್ಪೋಟಗೊಳ್ಳಲಿವೆ, ನಿನ್ನೆ ನಡೆದದ್ದು ಒಂದು ಪರೀಕ್ಷೆಯ ಪ್ರಯತ್ನ. ಇಂದು ನಡೆಯುವುದು ನಿಜ’ ಎಂಬ ಬರಹದ ಬೆದರಿಕೆ ಸಂದೇಶ ಶುಕ್ರವಾರ ಬೆಳಗ್ಗೆಯಷ್ಟೇ ರವಾನೆಯಾಗಿತ್ತು.
ಬೆಳಗ್ಗೆ 10-45ಕ್ಕೆ ಹಾಜರಾದ ವಿಧ್ವಂಸಕ ಕೃತ್ಯ ತಪಾಸಣಾ ತಂಡ ಹಾಗೂ ಶ್ವಾನ ದಳದ ಒಟ್ಟು 9 ಮಂದಿ ಸಿಬ್ಬಂದಿ ನ್ಯಾಯಾಲಯ ಸಂಕೀರ್ಣದ ತುಂಬಾ ತಪಾಸಣೆ ನಡೆಸಿದರು. ಬಡಾವಣೆ ಠಾಣೆ ಪೊಲೀಸರು ಕೂಡ ಹಾಜರಿದ್ದು ಅನುಮಾನ ಬಂದವರ ಬ್ಯಾಗ್ ಇತರೆ ವಸ್ತುಗಳನ್ನು ಪರೀಕ್ಷೆ ಮಾಡಿದರು.
ತಪಾಸಣೆ ಹಿನ್ನೆಲೆಯಲ್ಲಿ ಕೆಲಕಾಲ ನ್ಯಾಯಾಧೀಶರು, ವಕೀಲರು ಕಲಾಪ ಕೈಬಿಟ್ಟು ಹೊರಬಂದರು. ಕೋರ್ಟ್ ಸಿಬ್ಬಂದಿ ಮತ್ತು ಕಕ್ಷಿದಾರರು ನ್ಯಾಯಾಲಯದ ಆವರಣದಿಂದ ಹೊರಗೆ ಬಂದು ಶೋಧ ಕಾರ್ಯಕ್ಕೆ ಸಹಕರಿಸಿದರು.
ಸುಮಾರು ಮೂರು ತಾಸಿಗೂ ಹೆಚ್ಚು ತಪಾಸಣೆ ನಡೆಸಲಾಯಿತು. ಕಲಾಪ ಕೊಠಡಿಗಳು, ವಕೀಲರ ಭವನ, ಕ್ಯಾಂಟೀನ್, ಟೆರೇಸ್ ಹಾಗೂ ಮೂಲೆಗೆ ಬಿದ್ದ ಕಾರುಗಳ ಬಳಿಯೂ ಶೋಧ ನಡೆಸಲಾಗಿ ಎಲ್ಲಿಯೂ ಬಾಂಬ್ ಪತ್ತೆಯಾಗದೆ ಇದು ಹುಸಿ ಬೆದರಿಕೆ ಎಂಬುದು ಸಾಬೀತಾಯಿತು. ಜಿಲ್ಲಾ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಬಾಂಬ್ ಬೆದರಿಕೆ ಬಂದಿದ್ದು ಸಹ ಚರ್ಚೆಗೆ ಗ್ರಾಸವಾಗಿತ್ತು.
ಸಂವಹನ ಮಾಧ್ಯಮ ದುರ್ಬಳಕೆ ಮಾಡಿಕೊಂಡು ಸುಳ್ಳು ಸುದ್ದಿ ಮೂಲಕ ಭಯ ಹುಟ್ಟಿಸುವುದು ಆತಂಕಕಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮುಖ್ಯವಾದ ನ್ಯಾಯಾಂಗ ವ್ಯವಸ್ಥೆಯ ಅಭದ್ರತೆಗೆ ಕಾರಣವಾಗುವ ದುಷ್ಟಶಕ್ತಿಗಳ ವಿರುದ್ಧ ಸರ್ಕಾರ ಶಿಸ್ತುಕ್ರಮ ಕೈಗೊಳ್ಳಬೇಕು. ತಪ್ಪ್ಪಿತಸ್ಥರ ವಿರುದ್ಧ ಟಾಡಾ ಅಥವಾ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಬಿಗಿ ಕ್ರಮ ಜರುಗಿಸಬೇಕು ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಗುರುಬಸವರಾಜ್ ಹೇಳಿದರು.
ಕೋರ್ಟ್‌ಗಳಿಗೆ ಭದ್ರತೆ ಕಲ್ಪಿಸಿ
ಪದೇ ಪದೇ ಬೆದರಿಕೆ ಕರೆ ಬಂದರೂ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಪುನರಾವರ್ತನೆ ಆಗದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ಕೋರ್ಟ್ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗೆ ರಕ್ಷಣೆ ಒದಗಿಸಬೇಕು. ಒಳಬರುವವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ವಕೀಲರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಆಗ್ರಹಿಸಿದರು.