cultural fair: ದಾವಣಗೆರೆ ಡಿಆರ್‌ಆರ್ ವಿದ್ಯಾಸಂಸ್ಥೆಯಲ್ಲಿ ಬಾಲಕ-ಬಾಲಕಿಯರ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ ಉದ್ಘಾಟನಾ ಸಮಾರಂಭದಲ್ಲಿ ಜಿ.ಎಸ್. ರಾಜಶೇಖರ್, ಎಂ. ಬಸವರಾಜಪ್ಪ, ಪಿ. ಮಂಜುನಾಥ್, ಮುಖ್ಯಶಿಕ್ಷಕರಾದ ಬಸವನಗೌಡ ಎ.ಎಂ., ಎಚ್.ಎಸ್. ಹಾಲೇಶ್, ಆರ್. ಭೋಜರಾಜ್ ಯಾದವ್ ಹಾಗೂ ಕೆ.ಎಲ್. ರಾಧಾ ಇದ್ದರು. 
ದಾವಣಗೆರೆ

Cultural fair: ಪಠ್ಯೇತರ ಚಟುವಟಿಕೆಯಿಂದ ಮನಸ್ಸಿಗೆ ಉಲ್ಲಾಸ

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ಕಲ್ಯಾಣ ನಿಧಿಯ ನಿವೃತ್ತ ಉಪನಿರ್ದೇಶಕ ರಾಜಶೇಖರ್ ಹೇಳಿಕೆ
  • ಡಿಆರ್‌ಆರ್ ಶಾಲೆಯಲ್ಲಿ ಸಾಂಸ್ಕೃತಿಕ ಮೇಳ
  • ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
ದಾವಣಗೆರೆ:ಪಠ್ಯೇತರ ಚಟುವಟಿಕೆಯಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ ಎಂದು ಬೆಂಗಳೂರಿನ ಶಿಕ್ಷಕರ ಕಲ್ಯಾಣ ನಿಧಿಯ ನಿವೃತ್ತ ಉಪನಿರ್ದೇಶಕ ಜಿ.ಎಸ್. ರಾಜಶೇಖರ್ ಅಭಿಪ್ರಾಯಪಟ್ಟರು.
ನಗರದ ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ (ಡಿಆರ್‌ಆರ್) ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ವಿದ್ಯಾಸಂಸ್ಥೆ ಸಂಸ್ಥಾಪಕರ ಸ್ಮರಣಾರ್ಥ ನಗರ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ ಉದ್ಘಾಟಿಸಿ ಮಾತನಾಡಿದರು.
ಪಠ್ಯೇತರ ಚಟುವಟಿಕೆಗೆ ಓದಿನಷ್ಟೇ ಆದ್ಯತೆ ನೀಡಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ. ಮೊಬೈಲ್‌ನ ಸಹವಾಸ ಬಿಡಬೇಕು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಹತ್ವ ನೀಡಬೇಕು. ಮೊಬೈಲ್ ಗೀಳು ಹಚ್ಚಿಸಿಕೊಂಡರೆ ಓದಿನಲ್ಲಿ ಹಿಂದೆ ಬೀಳುತ್ತೀರಿ. ಈಗ ಕಷ್ಟಪಟ್ಟರೆ ಮುಂದೆ ಸುಖ ಸಿಗುತ್ತದೆ ಎಂದು ಹೇಳಿದರು.
ಯಾವುದೇ ಸ್ಪರ್ಧೆ ಇರಲಿ, ಫಲಿತಾಶಕ್ಕಿಂತ ಭಾಗವಹಿಸುವಿಕೆ ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂಬುದು ನೆನಪಿನಲ್ಲಿರಬೇಕು. ಸಾಧನೆ ಮಾಡುತ್ತ ಹೋದಂತೆ ಜನ ಗುರುತಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಆಡಳಿತಾಧಿಕಾರಿ ಎಂ. ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ರಾಜನಹಳ್ಳಿ ಕುಟುಂಬ ವಿದ್ಯಾದಾನ ಮಾಡಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಅನೇಕ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಸಾಧನೆ ನಿಮಗೆಲ್ಲ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ತೀರ್ಪುಗಾರರ ಪರವಾಗಿ ಸಂಧ್ಯಾ ಸುರೇಶ್ ಮಾತನಾಡಿ, ಸಣ್ಣ ಸಣ್ಣ ಪ್ರಯತ್ನಗಳಿಂದ ದೊಡ್ಡ ಗುರಿಯನ್ನು ಸಾಧಿಸಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಯಾವಾಗಲೂ ಪ್ರಯತ್ನಶೀಲರಾಗಿರಬೇಕು ಎಂದು ಸಲಹೆ ನೀಡಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಣೆ
ಸಮೂಹ ಗೀತೆ ವಿಭಾಗದಲ್ಲಿ ಜಾನಪದ ಗೀತೆಗಳನ್ನು, ಜಾನಪದ ಗೀತೆಗಳಿಗೆ ಸಂಬಂಧಿಸಿದ ಸಾಮೂಹಿಕ ನೃತ್ಯ, ರಸಪ್ರಶ್ನೆ, ಭಾವಗೀತೆ , ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಸ್ಮರಣ ಶಕ್ತಿ ಪರೀಕ್ಷೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ಮಾಗನೂರು ಬಸಪ್ಪ ಶಾಲೆಗೆ ಪರ್ಯಾಯ ಪಾರಿತೋಷಕ ನೀಡಲಾಯಿತು.
ಆಡಳಿತಾಧಿಕಾರಿ ಎಂ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಶಿಕ್ಷಕರಾದ ಬಸವನಗೌಡ ಎ.ಎಂ., ಎಚ್.ಎಸ್. ಹಾಲೇಶ್, ಕೆ.ಎಲ್. ರಾಧಾ ಹಾಗೂ ಆರ್. ಭೋಜರಾಜ್ ಯಾದವ್ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.