ಆಗ್ನೇಯ ಪದವೀಧರ ಮತದಾರ ನೋಂದಣಿಗೆ ಅವಧಿ ವಿಸ್ತರಿಸುವಂತೆ ಶುಕ್ರವಾರ ಪ್ರಗತಿಪರ ಸಂಘಟನೆಗಳು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು. ವಕೀಲ ಆರ್.ಓಬಳೇಶ್, ಬಿ.ಮಹೇಶ್ವರಪ್ಪ, ಜಿ.ಶಂಭುಲಿಂಗಪ್ಪ, ಜಿ.ತಿಪ್ಪೇಸ್ವಾಮಿ ಇತರರಿದ್ದರು.
- ಪ್ರಗತಿಪರ ಸಂಘಟನೆಗಳಿಂದ ಮನವಿ
- ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಕೆ
- 3025 ಅರ್ಜಿ ಸಲ್ಲಿಕೆ
ಜಗಳೂರು: ಆಗ್ನೇಯ ಪದವೀಧರ ಮತದಾರರ ನೋಂದಣಿ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಯಂತ್ರಣ ಮಂಡಳಿ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಪದವೀಧರ ಮತದಾರ ನೋಂದಣಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈವರೆಗೂ ಕೇವಲ 3025 ಮತದಾರರು ಅರ್ಜಿ ಸಲ್ಲಿಸಿದ್ದಾರೆ. ನ.6ಕ್ಕೆ ಕೊನೆ ದಿನವಾದ ಹಿನ್ನೆಲೆ ಇಂದು ಸಾಕಷ್ಟು ಜನರು ತಾಲೂಕು ಕಚೇರಿ ಚುನಾವಣೆ ಶಾಖೆಗೆ ಬಂದು ಹಿಂತಿರುಗಿದ್ದಾರೆ. ಇದರಿಂದ ಸಾವಿರಾರು ಪದವೀಧರರು ವಂಚಿತರಾಗುತ್ತಿದ್ದಾರೆ ಎಂದು ವಕೀಲ ಆರ್.ಓಬಳೇಶ್ ಆರೋಪಿಸಿದರು.
ಗ್ರಾಮೀಣ ಭಾಗದ ಬಹುತೇಕ ಪದವೀಧರರು, ಸೇವಾನಿರತ ಶಿಕ್ಷಕರು, ವಕೀಲರು, ದುಡಿಮೆ ಅರಸಿ ನಗರಪ್ರದೇಶಗಳಿಗೆ ತೆರಳಿರುವ ನಿರುದ್ಯೋಗಿಗಳಾಗಿದ್ದಾರೆ. ಮಾಹಿತಿ ಕೊರತೆಯಿಂದ, ಇನ್ನು ಕೆಲವರು ಸಮರ್ಪಕ ದಾಖಲಾತಿಗಳಿಲ್ಲದ ಕಾರಣ ಮತದಾರರ ಪೆಟ್ಟಿಗೆ ಸೇರ್ಪಡೆಗೊಳಿಸಲಾಗಿಲ್ಲ. ಆದ್ದರಿಂದ ಸರ್ಕಾರ ಇನ್ನು ಕೆಲ ದಿನಗಳ ಕಾಲ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಜಿ.ಶಂಭುಲಿಂಗಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳಾದ ಜಿ.ತಿಪ್ಪೇಸ್ವಾಮಿ, ರಕೀಬ್, ಸಿಎಂ ಹೊಳೆ ಮಾರುತೇಶ್, ಪ್ರದೀಪ್, ಸತೀಶ್ ಮಲೆಮಾಚಿಕೆರೆ, ಮಾದಿಹಳ್ಳಿ ಮಂಜುನಾಥ್, ಗೊಲ್ಲರಹಟ್ಟಿ ತಿಪ್ಪೇಸ್ವಾಮಿ, ಧನ್ಯಕುಮಾರ್, ಗೌರಿಪುರ ಸತ್ಯಮೂರ್ತಿ, ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ, ಉಮೇಶ್ ಇದ್ದರು.