ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ಉಳಿದಿರುವ ಹಕ್ಕಿಪಿಕ್ಕಿ ಜನಾಂಗದವರು.
- ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿರುವ 8 ಜನ
- ನೆರವಿಗಾಗಿ ಮೊರೆ
ದಾವಣಗೆರೆ : ಹಕ್ಕಿಪಿಕ್ಕಿ ಸಮುದಾಯದ 8 ಮಂದಿ ವೀಸಾ ಅವಧಿ ಮುಗಿದ ಕಾರಣ ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ಜೈಲು ಶಿಕ್ಷೆಯ ಭೀತಿಯಲ್ಲಿದ್ದಾರೆ.
ಇವರು ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, 8 ಜನರ ಪೈಕಿ ಮೂವರು ಮಹಿಳೆಯರಿದ್ದಾರೆ. ಇವರೆಲ್ಲರ ವೀಸಾ ಅವಧಿ ಡಿ. 22ರಂದು ಮುಕ್ತಾಯವಾಗಿದೆ ಎಂದು ತಿಳಿದು ಬಂದಿದೆ.
ಗಿಡಮೂಲಿಕೆ ಔಷಧವನ್ನು (ಹರ್ಬಲ್ ಮೆಡಿಸಿನ್) ಮಾರಾಟ ಮಾಡಲು ಅಕ್ಟೋಬರ್‌ನಲ್ಲಿ ಚಾಡ್ ದೇಶಕ್ಕೆ ಬಂದಿದ್ದೆವು. ವೀಸಾ ನವೀಕರಣಕ್ಕಾಗಿ ಅವಧಿ ಮುಗಿಯುವ ಒಂದು ವಾರದ ಮೊದಲೇ ಇಲ್ಲಿನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವೀಸಾ ನವೀಕರಣಗೊಂಡಿಲ್ಲ ಎಂದು ಹಕ್ಕಿಪಿಕ್ಕಿ ಸಮುದಾಯದವರು ವಿಡಿಯೊ ಮೂಲಕ ಆತಂಕ ತೋಡಿಕೊಂಡಿದ್ದಾರೆ.
ಇದೀಗ ಪ್ರತಿಯೊಬ್ಬರೂ ತಲಾ 1.5 ಲಕ್ಷ ರೂ. ದಂಡ ಪಾವತಿಸದಿದ್ದರೆ, ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು ಜೈಲಿಗೆ ಕಳಿಸುತ್ತೇವೆ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಭಾರತ ಸರ್ಕಾರ ಆದಷ್ಟು ಶೀಘ್ರವೇ ನಮಗೆ ಸಹಾಯಹಸ್ತ ಚಾಚಬೇಕು ಎಂದು ಒತ್ತಾಯಿಸಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯದವರು ಪ್ರತಿ ವರ್ಷ ಆಫ್ರಿಕಾದ ದೇಶಗಳಿಗೆ ಗಿಡಮೂಲಿಕೆ ಔಷಧಗಳನ್ನು ಮಾರಾಟ ಮಾಡಲು ತಾತ್ಕಾಲಿಕ ವೀಸಾದೊಂದಿಗೆ ಹೋಗುತ್ತಾರೆ. ಪ್ರತಿ ಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಾರೆ. ಬಡವರಾದ ಹಕ್ಕಿಪಿಕ್ಕಿ ಸಮುದಾಯದವರ ಬಳಿ ಅಷ್ಟು ಹಣ ಇಲ್ಲ. ಕೇಂದ್ರ ಸರ್ಕಾರವು ಸಮುದಾಯದ ವ್ಯಾಪಾರಿಗಳಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್. ಪುನೀತ್ ಕುಮಾರ್ ಒತ್ತಾಯಿಸಿದ್ದಾರೆ.