ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಿ.ಇ.ಟಿ. ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು. ಎಚ್.ಟಿ. ಶೇಖರ್, ಶೀಲವಂತ ಶಿವಕುಮಾರ್, ಮಧುಸೂದನ್, ರೇಣುಕಾ ಇದ್ದರು.
- ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ
- 23 ಮತ್ತು 24ರಂದು ಸಿಇಟಿ ಪರೀಕ್ಷೆ
ದಾವಣಗೆರೆ : ಪ್ರಸಕ್ತ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪತಿ, ಬಿಎಸ್ಸಿ. ನರ್ಸಿಂಗ್, ಫಾರ್ಮಸಿ ಮುಂತಾದ ಕೋರ್ಸುಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏ. 23 ಮತ್ತು 24ರಂದು ರಾಜ್ಯಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿದ್ದು, ನಗರದ ಆಯ್ದ 20 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಿ.ಇ.ಟಿ. ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಏ. 23ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರ ವರೆಗೆ ರಸಾಯನಶಾಸ್ತ್ರ, 24ರಂದು ಬೆಳಗ್ಗೆ 10.30ರಿಂದ 11.50ರ ವರೆಗೆ ಗಣಿತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರ ವರೆಗೆ ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ಪ್ರತಿ ವಿಷಯಕ್ಕೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಆದರೆ ಒಂದೇ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚಿನ ಉತ್ತರಗಳನ್ನು ಗುರುತಿಸಿದಲ್ಲಿ ಅಂಕಗಳನ್ನು ನೀಡಲಾಗುವುದಿಲ್ಲ ಎಂದರು.
ನಗರದ 20 ಕೇಂದ್ರಗಳಲ್ಲಿ 12616 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಸ್ನೇಹಿ ಆಗಿರುವಂತೆ ನೋಡಿಕೊಳ್ಳಲು ಮೇಲ್ವಿಚಾರಕರಿಗೆ ಸೂಚಿಸಲಾಗಿದೆ. ಪ್ರತಿ ವಿದ್ಯಾರ್ಥಿಗೂ ಸುರಕ್ಷಿತ ಮತ್ತು ಭರವಸೆಯ ವಾತಾವರಣ ನಿರ್ಮಾಣಗೊಳ್ಳಬೇಕು. ಶುದ್ಧ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ಕೇಂದ್ರದ ಪ್ರತಿ ಕೋಣೆಗೆ ಶುದ್ಧ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು. ಗೋಡೆ ಗಡಿಯಾರ, ಕ್ಯಾಮರಾ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಧುಸೂದನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ಧಲಿಂಗೇಶ, ಇತರೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ರೇಣುಕಾ ಇದ್ದರು.
ಅಕ್ರಮ ತಡೆಯಲು ನಿಗಾ
ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.
ಪರೀಕ್ಷೆಗಳು ನಡೆಯುವ ದಿನಾಂಕದಂದು ಕೇಂದ್ರದ ಸುತ್ತಮುತ್ತಲಿನ 200 ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಪರೀಕ್ಷಾರ್ಥಿಗಳಲ್ಲದೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ 163ರನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನ ಗುಂಪುಗೂಡುವುದನ್ನು, ಸಭೆ-ಸಮಾರಂಭ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕಾ ಪಾಲಕರನ್ನಾಗಿ ಒಬ್ಬರು ಪ್ರಾಚಾರ್ಯರು, ವಿಶೇಷ ಜಾಗೃತದಳದ ಸದಸ್ಯರನ್ನಾಗಿ ಒಬ್ಬ ಹಿರಿಯ ಉಪನ್ಯಾಸಕರನ್ನು ನೇಮಿಸಲಾಗಿದೆ. ಅಗತ್ಯ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತುರ್ತು ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಥಮ ಚಿಕಿತ್ಸೆ, ಔಷಧ ಸಾಮಗ್ರಿಗಳನ್ನು ಇಟ್ಟುಕೊಂಡಿರುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆಪತ್ರಿಕೆ ಮತ್ತು ಪರೀಕ್ಷಾ ಸಾಮಗ್ರಿಗಳನ್ನು ಕೊಂಡೊಯ್ಯಲು ಹಾಗೂ ಉಸ್ತುವಾರಿಗಾಗಿ ಅಗತ್ಯ ಸಿಬ್ಬಂದಿ, ವೀಕ್ಷಕರು, ಮಾರ್ಗಾಧಿಕಾರಿಗಳು, ಮೇಲ್ವಿಚಾರಕರನ್ನು ಒಳಗೊಂಡ ತಂಡವನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.