1. ಕಾಟನಾಯಕನ ಹೊಸಳ್ಳಿ ಗ್ರಾಮದ ಜಮೀನುಗಳಲ್ಲಿ ಮೊಳಕೆಯೊಡೆಯದೆ ಹಾಳಾಗಿರುವ ಮೆಕ್ಕೆಜೋಳ ಬೆಳೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಅಧಿಕಾರಿಗಳು ಪರಿಶೀಲಿಸಿದರು.2. ರುದ್ರನಕಟ್ಟೆ ಗ್ರಾಮದಲ್ಲಿ ಒಣಗುತ್ತಿರುವ ಅಡಿಕೆ ಗಿಡಗಳನ್ನು ವೀಕ್ಷಿಸಿದ ಸಚಿವ ಕೆ.ಎಸ್. ಬಸವಂತಪ್ಪ, ಅಧಿಕಾರಿಗಳು.Integrated cropping
- ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ
- ಅಧಿಕಾರಿಗಳೊಂದಿಗೆ ಬೆಳೆ ಹಾನಿ ಪರಿಶೀಲನೆ
ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ಕಾಟನಾಯಕನ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಮೆಕ್ಕೆಜೋಳ ಸರಿಯಾಗಿ ಮೊಳಕೆಯೊಡೆಯದೆ ಹಾಳಾಗಿರುವ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಆನಗೋಡು, ಮಾಯಕೊಂಡ ಹಾಗೂ ಕಸಬಾ ಹೋಬಳಿಗಳ ಸಾವಿರಾರು ಹೆಕ್ಟೇರ್ ಪ್ರದೇಶ ಮಳೆಯಾಶ್ರಿತ ಭೂಮಿಯಾಗಿದೆ. ರೈತರು ಕೇವಲ ಮೆಕ್ಕೆಜೋಳವನ್ನೇ ನೆಚ್ಚಿಕೊಳ್ಳದೆ ಕಡಿಮೆ ಮಳೆಯಲ್ಲೂ ಉತ್ತಮ ಇಳುವರಿ ನೀಡುವ ರಾಗಿ, ಜೋಳ, ತೊಗರಿ, ಅಲಸಂದೆ ಹಾಗೂ ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ ಮತ್ತು ಸೋಯಾಬಿನ್ ಬೆಳೆದರೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತದೆ ಎಂದರು.
ಪ್ರಸಕ್ತ ಮುಂಗಾರು ಕೈಕೊಟ್ಟಿದ್ದರಿಂದ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ ಸಾಲದ ಸುಳಿಗೆ ಸಿಲುಕಿದ್ದಾರೆ. ಮಳೆ ಅಭಾವದಿಂದ ಉಂಟಾಗಿರುವ ಬೆಳೆ ವಿಫಲತೆಯ ಕುರಿತು ನಡೆಸಿರುವ ಪರಿಶೀಲನೆಯ ಸಂಕ್ಷಿಪ್ತ ವರದಿಯನ್ನು ತಕ್ಷಣ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
22 ಕೆರೆ ತುಂಬಿಸುವ ಯೋಜನೆಗೆ ಒತ್ತಾಯ: ಆನಗೋಡು ಮತ್ತು ಮಾಯಕೊಂಡ ಹೋಬಳಿಯ 22 ಕೆರೆ ತುಂಬಿಸುವ ಏತ ನೀರಾವರಿ ಯೋಜನೆ ವಿಫಲವಾಗಿದ್ದು, ಯಾವ ಕೆರೆಗೂ ಸಮರ್ಪಕವಾಗಿ ನೀರು ತಲುಪಿಲ್ಲ. ಆದ್ದರಿಂದ ಹೊಸ ಪೈಪ್‌ಲೈನ್ ಕಾಮಗಾರಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಸ್ಥಳೀಯ ರೈತರು ಸಂಸದರಿಗೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್, ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತರು ಇದ್ದರು.
ಮಾಯಕೊಂಡ ಕ್ಷೇತ್ರದ ಆನಗೋಡು ಹೋಬಳಿಯ ರುದ್ರನಕಟ್ಟೆ, ಅಗಸನಕಟ್ಟೆ, ಗುಡಾಳು ಹಾಗೂ ಗುಮ್ಮನೂರು ಗ್ರಾಮಗಳ ಜಮೀನುಗಳಿಗೆ ನೂತನ ಸಚಿವ ಕೆ.ಎಸ್. ಬಸವಂತಪ್ಪ ಭಾನುವಾರ ಭೇಟಿ ನೀಡಿ, ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದರು.
ರೈತರಾದ ರಾಜಪ್ಪ, ಬಸವರಾಜಪ್ಪ, ಮಂಜಪ್ಪ, ಹಾಲಪ್ಪ ಮತ್ತಿತರರೊಂದಿಗೆ ಮಾತುಕತೆ ನಡೆಸಿದ ಸಚಿವರು, ಮಳೆ ಕೊರತೆಯಿಂದ ಎದುರಾಗಿರುವ ಸಂಕಷ್ಟಗಳ ಕುರಿತು ಮಾಹಿತಿ ಪಡೆದರು. ಕ್ಷೇತ್ರದ ನೂರಾರು ಗ್ರಾಮಗಳಲ್ಲಿ ಮಳೆ ಇಲ್ಲದೆ ಮೆಕ್ಕೆಜೋಳ, ರಾಗಿ ಹಾಗೂ ಅಡಿಕೆ ಬೆಳೆಗಳು ಒಣಗುತ್ತಿವೆ. ಹಲವೆಡೆ ಬಿತ್ತನೆಯೇ ಪೂರ್ಣಗೊಳ್ಳದಿರುವುದು ಆತಂಕಕಾರಿ ಎಂದರು.
ಅಧಿಕಾರಿಗಳು ಸಮಗ್ರ ವಾಸ್ತವ ವರದಿ ಸಿದ್ಧಪಡಿಸಿ ತುರ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಪರಿಹಾರ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಮಾತನಾಡಿ, ಆನಗೋಡು ಹೋಬಳಿಯಲ್ಲಿ ಪ್ರತಿ ಮುಂಗಾರಿಗೆ 18 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಕೇವಲ 8 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 15 ದಿನಗಳ ಹಿಂದೆ
ಬಿತ್ತಿದ ರಾಗಿಯೂ ಮಳೆಯಿಲ್ಲದೆ ಮೊಳಕೆ ಹಂತದಲ್ಲೇ ಒಣಗಿದ್ದು, ರೈತರು ಮರುಬಿತ್ತನೆ ಮಾಡುವಂತಾಗಿದೆ ಎಂದು ವಿವರಣೆ ನೀಡಿದರು.