ಬೀದಿಪಾಲಾದ ವೃದ್ಧೆ. microfinance
ದಾವಣಗೆರೆ

ಜಗಳೂರಿನಲ್ಲಿ ಮೈಕ್ರೋಫೈನಾನ್ಸ್‌ನಿಂದ ಬೀದಿಪಾಲಾದ ವೃದ್ಧೆ

ಪೊಲೀಸ್ ರಕ್ಷಣೆಯಲ್ಲಿ ಮನೆ ಜಪ್ತು

ಜಗಳೂರು: ಗೃಹಸಾಲ ಮರುಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಾಲ ನೀಡಿದ್ದ ಮೈಕ್ರೋಫೈನಾನ್ಸ್ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ವೃದ್ಧೆಯ ಮನೆ ಜಫ್ತು ಮಾಡಿದ್ದು, ಮಹಿಳೆ ಬೀದಿಗೆ ಬಂದಿದ್ದಾರೆ.

ಮರೇನಹಳ್ಳಿ ಗ್ರಾಮದ ಮಹಿಳೆ ಗೌರಮ್ಮ ಮೈಕ್ರೋಫೈನಾನ್ಸ್ನಿಂದ 6.80 ಲಕ್ಷ ರೂ. ಗೃಹ ಸಾಲ ಪಡೆದಿದ್ದರು. ಸಾಲದ ಕಂತನ್ನು ಕಳೆದ 3 ವರ್ಷಗಳಿಂದ ಸಕಾಲದಲ್ಲಿ ಪಾವತಿ ಮಾಡುತ್ತಾ ಬಂದಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಹಾಸಿಗೆ ಹಿಡಿದಿದ್ದು, ಅನಾರೋಗ್ಯದ ಈಚೆಗೆ ಕಾರಣ ಸಾಲದ ಕಂತು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಫೈನಾನ್ಸ್ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಮನೆ ಜಫ್ತು ಮಾಡಿ ವೃದ್ಧೆಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ಸಾಲ ಪಡೆದಿದ್ದು ಹೇಗೆ?

ಚಿತ್ರದುರ್ಗ ಮೂಲದ ಫೈನಾನ್ಸ್ ಕಂಪನಿ ಅಧಿಕಾರಿಗಳು ಮೂರೂವರೆ ವರ್ಷಗಳ ಹಿಂದೆ ಗೌರಮ್ಮ ಅವರ ಮನೆ ಬಾಗಿಲಿಗೆ ಬಂದು, ಗೃಹ ಸಾಲ ನೀಡುತ್ತೇವೆ ಎಂದು ಬಲವಂತ ಮಾಡಿದರು. ಸಾಲದ ಅಗತ್ಯ ಇಲ್ಲ ಎಂದು ಗೌರಮ್ಮ ಹೇಳಿದರೂ, ದಾಖಲೆಗಳು ಇಲ್ಲದಿದ್ದರೂ ಪರವಾಗಿಲ್ಲ, ನಾವೇ ಎಲ್ಲವನ್ನೂ ನೋಡಿಕೊಳ್ಳುತ್ತೇವೆ’ ಎಂದು ಸ್ಥಳೀಯ ವ್ಯಕ್ತಿಯ ನೆರವು ಪಡೆದು ವಿಧವೆ ಗೌರಮ್ಮಗೆ 6.80 ಲಕ್ಷ ರೂ. ಸಾಲ ಮಂಜೂರು ಮಾಡಿದ್ದರು. ಅದರಲ್ಲಿ ಕಮಿಷನ್ ಹೆಸರಿನಲ್ಲಿ 80 ಸಾವಿರ ರೂ.ಗಳನ್ನು ಕಂಪನಿಯ ಪ್ರತಿನಿಧಿಗಳು ಬಲವಂತವಾಗಿ ಪಡೆದಿದ್ದರು ಎನ್ನಲಾಗಿದೆ. ಅನಕ್ಷರಸ್ಥೆ ಗೌರಮ್ಮನಿಂದ ಇಂಗ್ಲಿಷ್‌ನಲ್ಲಿದ್ದ ದಾಖಲೆ ಪತ್ರಗಳಿಗೆ ಹೆಬ್ಬೆಟ್ಟು ಹಾಕಿಸಿಕೊಂಡು ಫೈನಾನ್ಸ್ ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಮುದ್ರ ಆರೋಪಿಸಿದ್ದಾರೆ.

ಬೀದಿಯಲ್ಲಿಯೇ ವಾಸ

ಕೈಯಲ್ಲಿ ಕಾಸಿಲ್ಲ, ತಲೆಯ ಮೇಲೆ ಸೂರಿಲ್ಲ. ಎಲ್ಲವನ್ನೂ ಕಳೆದುಕೊಂಡ ವೃದ್ಧೆ 15 ದಿನಗಳಿಂದ ಬೀದಿಯಲ್ಲಿಯೇ ವಾಸ ಮಾಡುತ್ತಿದ್ದಾರೆ. ಬೆಳಗ್ಗೆ ಎಲ್ಲೆಲ್ಲಿ ನೆರಳು ಇರುತ್ತದೆಯೋ ಅಲ್ಲಿ ವಿಶ್ರಾಂತಿ, ರಾತ್ರಿ ಬೆಳಕಿರುವ ಕಡೆ ನಿದ್ರೆ ಮಾಡುವಂತಾಗಿದೆ ವೃದ್ಧೆಯ ಪರಿಸ್ಥಿತಿ. ಗುಡಿಸಲಲ್ಲಿ ಸುಖವಾಗಿದ್ದೆ, ಆದರೆ ಸಾಲ ನೀಡುವ ನೆಪದಲ್ಲಿ ಬಂದ ಫೈನಾನ್ಸ್ ಕಂಪನಿ ಅಧಿಕಾರಿಗಳು ಸಾಲ ನೀಡಿ, ಈಗ ಮನೆಯೂ ಇಲ್ಲ, ಗುಡಿಸಲೂ ಇಲ್ಲ ಎನ್ನುವಂತೆ ಮಾಡಿದ್ದಾರೆ. ನನ್ನ ನೋವನ್ನು ಯಾರ ಬಳಿ ಹೇಳಿಕೊಳ್ಳಲಿ? ಇಬ್ಬರು ಮಕ್ಕಳನ್ನು ಕೂಲಿ ಕೆಲಸಕ್ಕೆ ಬೇರೆ ಊರಿಗೆ ಕಳುಹಿಸಿದ್ದೇನೆ ಎಂದು ವೃದ್ಧೆ ಗೌರಮ್ಮ ಕಣ್ಣೀರು ಹಾಕಿದರು.