ದಾವಣಗೆರೆಯಲ್ಲಿ ಬುಧವಾರ, ಜಿಲ್ಲಾ ಮಾನವ ಅಭಿವೃದ್ಧಿ ವರದಿ -2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರ ವರದಿಗಳನ್ನು ಸಿದ್ಧಪಡಿಸುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಗಿತ್ತೆ ಮಾಧವ ವಿಠ್ಠಲರಾವ್, ಪ್ರೊ.ರಂಗಪ್ಪ, ಪ್ರೊ. ಹುಚ್ಚೇಗೌಡ, ಸತ್ಯವಾಣಿ ಇದ್ದರು.
- ಸುಧಾರಣೆಗೆ ಕ್ರಮ ಅಗತ್ಯ
- ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿಕೆ
ದಾವಣಗೆರೆ : ದಾವಣಗೆರೆ ವಿದ್ಯಾ ಕೇಂದ್ರವಾಗಿ ಪರಿವರ್ತನೆಯಾಗುತ್ತಿದ್ದು, ಇತರ ತಾಲೂಕುಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದೆ. ಅದನ್ನು ಉತ್ತಮಪಡಿಸಲು ಇತರ ಉಪಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ, ಜಿಲ್ಲಾ ಮಾನವ ಅಭಿವೃದ್ಧಿ ವರದಿ -2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರ ವರದಿಗಳನ್ನು ಸಿದ್ಧಪಡಿಸುವ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ದಾವಣಗೆರೆಗೆ ಹೋಲಿಸಿದರೆ ಜಗಳೂರು ಮತ್ತು ನ್ಯಾಮತಿ ತಾಲೂಕುಗಳಲ್ಲಿ ದಾಖಲಾತಿ ಅತಿ ಕಡಿಮೆ ಇದೆ. ಈ ಅಸಮತೋಲನ ಸರಿದೂಗಿಸಲು ಶೈಕ್ಷಣಿಕ ಉಪಕ್ರಮಗಳ ಭಾಗವಾಗಿ ಶಾಲಾ ಕಾಲೇಜುಗಳ ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆಯಲ್ಲಿ 10ನೇ ತರಗತಿಯಿಂದ ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿದೆ. ಸುತ್ತಮುತ್ತಲಿನ ಜಿಲ್ಲೆ ಮತ್ತು ತಾಲೂಕುಗಳಿಂದಲೂ ದಾವಣಗೆರೆಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಗೆ ವಿದ್ಯಾರ್ಥಿಗಳು ವಲಸೆ ಬರುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿರಬೇಕಾದ ಅನುಪಾತದನ್ವಯ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರಬೇಕು (30:1). ಆದರೆ ಜಿಲ್ಲೆಯಲ್ಲಿ ಸರಾಸರಿ 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ (25:1), ಇದು ಉತ್ತಮ ಅನುಪಾತವಾಗಿದೆ. ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿಗೆ ಜಿಲ್ಲೆಯಲ್ಲಿ ಪ್ರತಿ 15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ(15:1), ಇದು ರಾಜ್ಯದ ಸರಾಸರಿಗಿಂತ ಉತ್ತಮವಾಗಿದ್ದು ಇಲ್ಲಿನ ಫಲಿತಾಂಶ ಸುಧಾರಣೆಗೆ ಕಾರಣವಾಗಿದೆ ಎಂದು ಹೇಳಿದರು.
ಸಂಯೋಜಕರಾದ ಪ್ರೊ.ರಂಗಪ್ಪ, ಪ್ರೊ. ಹುಚ್ಚೇಗೌಡ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಜಂಟಿ ನಿರ್ದೇಶಕಿ ಸತ್ಯವಾಣಿ, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ಜಿ.ಪಂ. ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಆರೋಗ್ಯ ಸೌಲಭ್ಯ ಹೆಚ್ಚಾಗಲಿ
ಜಿಲ್ಲೆಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೌಕರ್ಯಗಳು ಉತ್ತಮವಾಗಿವೆ. ಜಿಲ್ಲಾ ಆಸ್ಪತ್ರೆಗೆ ಹಾಗೂ ತಾಯಿ, ಮಕ್ಕಳ ಆಸ್ಪತ್ರೆಗೆ ಹಾವೇರಿ, ಚಿತ್ರದುರ್ಗ, ವಿಜಯನಗರ ಮತ್ತು ಶಿವಮೊಗ್ಗ ಜಿಲ್ಲೆಗಳಿಂದಲೂ ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿಯರು, ನವಜಾತ ಶಿಶುಗಳ ಚಿಕಿತ್ಸೆಗೆ ಬರುವುದರಿಂದ ಹೆರಿಗೆ ಸಂದರ್ಭದಲ್ಲಿ ಮರಣ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಿಇಒ ತಿಳಿಸಿದರು.
ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಲು ಅಗತ್ಯ ಚಿಕಿತ್ಸಾ ಸೌಕರ್ಯ ಮೇಲ್ದರ್ಜೆಗೆ ಏರಿಸಬೇಕಿದೆ. ಅದಕ್ಕಾಗಿ ಬೇಕಾದ ಮೂಲಸೌಕರ್ಯ ಹೆಚ್ಚಿಸಲು ಕ್ರಮ ವಹಿಸಬೇಕು. ಜಿಲ್ಲಾ ಕೇಂದ್ರದಲ್ಲಿ ತಿಂಗಳಿಗೆ 1100ಕ್ಕೂ ಹೆಚ್ಚು ಹೆರಿಗೆಗಳು ದಾಖಲಾಗುತ್ತಿವೆ ಎಂದು ಅಂಕಿ ಅಂಶ ನೀಡಿದರು.
ಜನಸಂಖ್ಯೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ರೆಸಿಡೆನ್ಸಿ ಕಾರ್ಯಕ್ರಮ ಅಡಿಯಲ್ಲಿ ನಿಯೋಜನೆಗೊಂಡಿರುವ ವೈದ್ಯರು ಮತ್ತು ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಒಂದು ವರ್ಷದ ಇಂಟರ್ನ್‌ಶಿಪ್ ವೈದ್ಯರನ್ನು ನಿಯೋಜಿಸಿಕೊಂಡಿರುವುದರಿಂದ ವೈದ್ಯರ ಕೊರತೆ ಇಲ್ಲ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತದಲ್ಲಿ ಪ್ರತಿ ಸಾವಿರ ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳಾ ಲಿಂಗಾನುಪಾತ 964 ಇದೆ. ಹೊನ್ನಾಳಿ ತಾಲೂಕಿನಲ್ಲಿ 863 ಲಿಂಗಾನುಪಾತವಿದೆ. ಹರಿಹರಿದಲ್ಲಿ 1000ಕ್ಕೂ ಹೆಚ್ಚು ಲಿಂಗಾನುಪಾತವಿದೆ. ಈ ಅಂಕಿ ಅಂಶವನ್ನು ನಿಖರವಾಗಿ ಪರಿಶೀಲಿಸಿ ವಾಸ್ತವ ವರದಿ ನೀಡಲು ತಿಳಿಸಿದರು.
ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯ 2024-25ನೇ ಸಾಲಿನ ವರದಿಯನ್ನು ಸರ್ಮಪಕವಾಗಿ ನೀಡಬೇಕು. ಆ ಅಂಕಿ ಅಂಶಗಳ ಆಧಾರದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ನಿಖರ ಅಂಕಿ ಅಂಶಗಳು ಜಿಲ್ಲೆಯ ಅಭಿವೃದ್ಧಿಗೆ ಸೂಚ್ಯಂಕವಾಗಲಿವೆ ಎಂದು ತಿಳಿಸಿದರು.